ಮಂಗಳವಾರ, ಜೂನ್ 22, 2021
29 °C

ಮಣ್ಣಿನಲ್ಲಿ ಚಿನ್ನ! ದೊರಕೀತೆ ಅನ್ನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಣ್ಣಿನಲ್ಲಿ ಚಿನ್ನ! ದೊರಕೀತೆ ಅನ್ನ?

ಗೋಡೆ ಇದ್ದರೆ ಸಾವಿರ ಚಿತ್ರ ಬರೆಯಬಹುದು. ಆದರೆ, ಮುರಿದು ಬಿದ್ದ ಗೋಡೆಯ ಚೂರುಗಳನ್ನು ಆಯ್ದು ಚಿತ್ರಗಳನ್ನು ಜೋಡಿಸಬಹುದೆ? ಕಷ್ಟ. ಇದು ಕಲೆಯ ಮಾತು. ಬದುಕಿನ ವಿಚಾರಕ್ಕೆ ಬಂದರೆ, ಇದು ಘೋರ ಯಾತನೆಯ ಶಬ್ದಗಳನ್ನೇ ತುಂಬಿಕೊಂಡ ಭಂಡಾರ. ಅಸಹನೀಯ ಮೌನ ಅದರ ಮುಚ್ಚಳ.ಚಿನ್ನದ ಗಣಿ ಮುಚ್ಚಿ ಒಂದು ದಶಕ ಕಳೆದರೂ ಕೆಜಿಎಫ್‌ನ ಜನ ಅದನ್ನು ಮತ್ತೆ ತೆರೆಯಬೇಕೆಂಬ ಕೂಗನ್ನು ಪ್ರಾಣವಾಯುವಿನಂತೆ ಕಾಪಿಟ್ಟಿದ್ದಾರೆ. ಅ್ಲ್ಲಲಿಯೇ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಆಸೆಯಿಂದ ಬೇರೆ ಕೆಲಸಗಳನ್ನು ಕಲಿತಿದ್ದಾರೆ. ಬೆಂಗಳೂರು ಕಡೆಗೆ ವಲಸೆ ನಡೆದಿದ್ದಾರೆ. ಊರಿಗೆ ಕೇರಿಗೆ ಅಂಟಿಕೊಂಡ ಹಲವು ಮಹಿಳೆಯರು ಮುಚ್ಚಿದ ಚಿನ್ನದ ಗಣಿಯ ಆಸುಪಾಸಿನಲ್ಲೇ ಮತ್ತೆ ಚಿನ್ನದ ಚೂರುಗಳನ್ನು ಮಣ್ಣಿನ ರಾಶಿಯಲ್ಲಿ ಹುಡುಕುತ್ತಿದ್ದಾರೆ!ಅದು ಬಿಸಿಲಿನಲ್ಲಿ ಬೆವರಿಳಿಸುವ ಕೆಲಸ. ಒಂದೊಂದು ಹನಿ ಬೆವರಿಗೂ ಬೆಲೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲದ ಕೆಲಸ. ಧರಿಸುವವರಿಗೆ ಚಿನ್ನ ದುಬಾರಿ. ಇವರಿಗೂ ಹಾಗೆಯೇ ಎನ್ನುವಂತಿಲ್ಲ. ಏಕೆಂದರೆ ಇವರಿಗೆ ಚಿನ್ನ ಅತಿ ದುಬಾರಿ! ಚಿನ್ನವೇ ಅನ್ನದ ಮೂಲ. ಹುಡುಕುವ ಕೈಗಳಿಗೆ ಸಿಗದೆ ಮರೆಯಲ್ಲಡಗಿದ ಚಿನ್ನದ ಕಣಗಳೂ... ಅನ್ನದ ಅಗುಳುಗಳೂ ಅಕ್ಷರಗಳಾದರೆ ಒಂದು ದುರಂತ ಕಾವ್ಯವೇ ಮೂಡಲು ಸಾಧ್ಯವಿದೆ.ಬರಿದಾಗಿದೆ ಎಂದು ಮುಚ್ಚಲಾಗಿರುವ ಚಿನ್ನದ ಗಣಿಯ ಹಳೆಯ ನೆನಪುಗಳು ಮಾಸಿದ ಬಣ್ಣದ ಕಟ್ಟಡಗಳಲ್ಲಿ, ಮೌನವಾದ ಯಂತ್ರಗಳಲ್ಲಿ, ಸೈನೈಡ್ ಗುಡ್ಡಗಳ ದೂಳಿನಲ್ಲಿ ಮರೆಯಾಗಿವೆ. ಗಣಿಗಳಲ್ಲಿ ದುಡಿದು, ಕುಡಿದು ಸತ್ತವರ ವಿಧವೆಯರ ಮುಖದ ನೆರಿಗೆಗಳಲ್ಲಿವೆ. ಒಂದೊಂದು ಲೇನ್‌ನಲ್ಲಿ ನಡೆದರೂ, ನಿಂತರೂ ಅಲ್ಲಿನವರು ನೆನಪುಗಳ ಶೋಕಾಚರಣೆ ಶುರು ಮಾಡುತ್ತಾರೆ. ಶೋಕವಷ್ಟೇ ಸಾಕಾಗುತ್ತದೆಯೆ? ಏನಾದರೂ ಕೆಲಸ ಮಾಡಲೇಬೇಕು. ಬಣ್ಣ ಹೊಡೆಯುವುದು, ಗಾಮೆರ್ಂಟ್ಸ್ ಕಾರ್ಖಾನೆಗೆ ಹೋಗುವುದು, ಮರಗೆಲಸ ಮಾಡುವುದು, ಮಲದ ಗುಂಡಿಗೆ ಇಳಿದು ಸ್ವಚ್ಛಗೊಳಿಸುವುದು...ಇವೆಲ್ಲವೂ ಕಾಣುವಂಥ ಕೆಲಸಗಳು. ಸುಲಭವಾಗಿ ಯಾರ ಗಮನಕ್ಕೂ ಬಾರದ, ಆದರೆ ಕನಸುಗಳಿಗೆ ಬೆಳಕು ಕೊಡುವ ಕೆಲಸವೇನಾದರೂ ಇದೆಯೇ? ಅದೂ ಗಂಡ, ಮಕ್ಕಳ ಜವಾಬ್ದಾರಿಯನ್ನು ಹೊತ್ತ, ಯಾರ ಗಮನಕ್ಕೂ ಬಾರದೇ ಕೆಲಸ ಮಾಡುತ್ತಲೇ ಇದ್ದರೂ ಬಸವಳಿಯದ ಹೆಣ್ಣುಮಕ್ಕಳಿಗೆ? ಉಂಟು ಒಂದು ಕೆಲಸ. ಅದು ಮಣ್ಣಿನ ರಾಶಿಯಲ್ಲಿ ಚಿನ್ನದ ಕಣವನ್ನು ಹುಡುಕುವ ಕೆಲಸ. ದಿನಗೂಲಿ ಕೆಲಸವಲ್ಲ. ಚಿನ್ನದ ಕಣಕ್ಕೆ ತಕ್ಕ ಕೂಲಿ ಸಿಗುವ ಕೆಲಸ. ಎರಡು ಮೂರು ದಿನಕ್ಕೊಮ್ಮೆ ಕೂಲಿ ಸಿಕ್ಕರೆ ಸಿಗಬಹುದು. ಇಲ್ಲದಿದ್ದರೆ ಇಲ್ಲ. ಮಣ್ಣಿನ ಫಲವತ್ತತೆ ಹೇಗಿದ್ದರೆ ಹಾಗೆ. ಇಲ್ಲಿ, ಸೀತೆಗಾಗಿ ಚಿನ್ನದ ಜಿಂಕೆಯನ್ನು ಬೆನ್ನಟ್ಟಿದ ರಾಮ ನೆನಪಾದರೂ ಪ್ರಯೋಜನವಿಲ್ಲ.ಗಣಿ ಮುಚ್ಚಿ ದಶಕವಾದರೂ ಕೆಜಿಎಫ್ ನೆಲವೆಲ್ಲವೂ ಚಿನ್ನವೇ ಎಂಬ ಮಾತಿನ್ನೂ ಜನಜನಿತ. ಸ್ಥಳೀಯರಿಗಂತೂ ಇದು ಇನ್ನೂ ಚೆನ್ನಾಗಿಯೇ ಗೊತ್ತು. ಸರ್ಕಾರವೇನೋ ಗಣಿ ಮುಚ್ಚಿ ಜನರೊಡನೆ ನಿಷ್ಠುರ ಕಟ್ಟಿಕೊಂಡಿದೆ. ಮತ್ತೆ ಗಣಿಯನ್ನು ತೆರೆಯುವ-ತೆರೆಯದಿರುವ ಕುರಿತ ಉಯ್ಯಾಲೆಯನ್ನೂ ತೂಗುತ್ತಿದೆ. ಆದರೆ ಗಣಿಗಿಳಿದು ಕೆಲಸ ಮಾಡಿ ಬಂದಿರುವವರ ಮನೆಗಳ ಮಂದಿ ಮಾತ್ರ ತಮ್ಮದೇ ರೀತಿಯಲ್ಲಿ ಗಣಿಗಾರಿಕೆ ಮಾಡುತ್ತಲೇ ಇದ್ದಾರೆ. ಚಿನ್ನವನ್ನೂ ತೆಗೆಯುತ್ತಿದ್ದಾರೆ!ಗಣಿಯೊಳಗಿಂದ ತೆಗೆಯುವ ಚಿನ್ನದ ಅದಿರಿನಲ್ಲಿ ಸಾಕಷ್ಟು ನಿಕ್ಷೇಪಗಳು ಇಲ್ಲ ಎಂಬ ಕಾರಣಕ್ಕೆ ಬಿಸಾಡುತ್ತಿದ್ದ ಕಲ್ಲು ಮತ್ತು ಮಣ್ಣಿಗೆ ಈಗಲೂ ಅಮೂಲ್ಯ ಬೆಲೆ ಉಂಟು. ಹೀಗಾಗಿಯೇ ಕೆಜಿಎಫ್‌ನ ಹಲವಾರು ಕಡೆ `ಶಾಫ್ಟ್~ (ಸಂಸ್ಕರಣೆಗೆ ಚಿನ್ನದ ಅದಿರನ್ನು ಸಾಗಿಸುತ್ತಿದ್ದ ಸ್ಥಳ) ಗಳ ಬಳಿ ಇರುವ ಕಲ್ಲುಗಳ ರಾಶಿ ಮಧ್ಯೆ ಚಿನ್ನವನ್ನು ಶೋಧಿಸಿ ಜೀವನವನ್ನು ಸಂಪಾದಿಸುವವರು ಸಾಕಷ್ಟು ಮಂದಿ ಇದ್ದಾರೆ. ಗಮನಿಸಬೇಕಾದ ವಿಷಯವೆಂದರೆ ಅವರೆಲ್ಲಾ ಮಹಿಳೆಯರೇ ಆಗಿರುವುದು. ಅದರಲ್ಲೂ ತಪ್ತ ಮಹಿಳೆಯರು.ಸುಖ ದಾಂಪತ್ಯವನ್ನು ಕನಸಾಗಿ ಉಳ್ಳವರು. ಬಡ ಮನೆಯ ಅಸಹಾಯ ಗಂಡ, ಮಕ್ಕಳನ್ನು ಪೊರೆಯುತ್ತಿರುವವರು. ಹಸಿವು, ಬಾಯಾರಿಕೆ, ಸೊಂಟದ ನೋವು, ತಲೆಸುತ್ತಿನ ಬಗ್ಗೆ ದೂರು ಹೇಳಲು ಅವಕಾಶ ಸಿಗದವರು.ಚಿನ್ನದ ಗಣಿಯನ್ನು ಮುಚ್ಚುವ ವೇಳೆಗೆ ಒಂದು ಟನ್ ಮಣ್ಣಿನ ಅದಿರಿಗೆ ಸುಮಾರು 4ರಿಂದ 5 ಗ್ರಾಂ ಚಿನ್ನ ಸಿಗುತ್ತಿತ್ತು. ಅದಕ್ಕೂ ಮುನ್ನ 7ರಿಂದ 8 ಗ್ರಾಂ ಚಿನ್ನ ಕೂಡ ಟನ್ ಮಣ್ಣಿಗೆ ಸಿಗುತ್ತಿತ್ತು. ಅಂತಹ ಸಂದರ್ಭದಲ್ಲಿ ಒಂದೆರಡು ಗ್ರಾಂ ಅಷ್ಟೇ ಚಿನ್ನ ಸಿಗುತ್ತಿದ್ದ ಅದಿರನ್ನು ಸಂಸ್ಕರಿಸುವುದು ಲಾಭದಾಯಕವಲ್ಲ ಎಂಬ ಕಾರಣದಿಂದ ಅವುಗಳನ್ನು ಸಂಸ್ಕರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಅವುಗಳನ್ನು ಹಾಗೆಯೇ ಬಿಸಾಡಲಾಗುತ್ತಿತ್ತು. ಹಾಗೆ ಬಿಸಾಡಲಾದ ಅದಿರಿನ ರಾಶಿ ಈಗ ಹಲವು ಕುಟುಂಬಗಳನ್ನು ಪೊರೆಯುತ್ತಿದೆ.

 

ಮಣ್ಣು ಕೆದಕುತ್ತಾ...
ಕ್ಯಾಮರಾ ಹಿಡಿದು ನಿಂತವರನ್ನು ತಲೆ ಎತ್ತಿ ನೋಡದೆಯೇ ಮೇರಿ ತನ್ನ ದೇಸಿ ತಮಿಳಿನಲ್ಲಿ ಹೇಳಿದಳು: `ಗಂಡ ಮರದ ಮೇಲಿಂದ ಬಿದ್ದು ಮನೆಯಲ್ಲಿ ಮಲಗಿದ್ದಾನೆ. ಮೂರು ಮಕ್ಕಳನ್ನು ಸಾಕುವ ಜವಾಬ್ದಾರಿ ನನ್ನ ಮೇಲಿದೆ. ಎರಡು ಮೂರು ದಿನ ಕೆಲಸ ಮಾಡಿದರೆ 150ರಿಂದ 200 ರೂಪಾಯಿ ಸಿಗುತ್ತೆ, ಅಷ್ಟೇ~.ಮೇರಿಯಿಂದ ಸ್ವಲ್ಪ ದೂರದ ಸಣ್ಣ ಗುಡ್ಡಗಳ ನಡುವೆ ಮಣ್ಣು ಒಟ್ಟು ಮಾಡುತ್ತಿದ್ದ ಪಾಪಾತಿಯ ಮಾತು ಸ್ವಲ್ಪ ಬೇರೆ ಆಗಿತ್ತು. `ಬೇರೆ ಕೆಲಸ ಮಾಡಿ ಗೊತ್ತಿಲ್ಲ. ಮನೆಯ ಹತ್ತಿರವೇ ಇದೆ. ಈ ಮಣ್ಣಿನ ರಾಶಿಯಲ್ಲಿ ಮೂರು ನಾಲ್ಕು ದಿನ ಕೂತರೆ ಸ್ವಲ್ಪ ಹಣ ಸಿಗುತ್ತದೆ. ಮಣ್ಣನ್ನು ನೀರಿರುವ ಕಾಲುವೆ ಬಳಿ ತೆಗೆದುಕೊಂಡು ಹೋಗಬೇಕಾದರೆ ಆಟೋ ಬೇಕು. ಅದಕ್ಕೂ ಹಣ ಖರ್ಚು ಮಾಡಿದ ಮೇಲೆ ಕೈಗೆ ಸಿಗೋದು ಸ್ವಲ್ಪವೇ~.ಕೆಜಿಎಫ್‌ನ ಕೆನಡೀಸ್ ಮತ್ತು ಮಾರಿಕುಪ್ಪಂ ಬಳಿ ಇರುವ ಕಲ್ಲಿನ / ಅದಿರಿನ ರಾಶಿಗಳ ನಡುವೆ, ನೆತ್ತಿಯ ಮೇಲಿನ ಸೂರ್ಯನ ತಾಪ ತಡೆಯಲು ಮಾಸಿದ ಸೀರೆಯ ಸೆರಗನ್ನು ತಲೆಮೇಲೆ ಹೊದ್ದು ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಪಾಡಿಗೆ ತಾವು ಪುಡಿ ಮಣ್ಣನ್ನು ಸಂಗ್ರಹಿಸಿ ಗುಡ್ಡೆ ಮಾಡುತ್ತಾರೆ. ಅದು ಚಿನ್ನ ಶೋಧನೆಯ ಮೊದಲ ಹಂತ. ಕಲ್ಲುಗಳ ರಾಶಿಯನ್ನು ಬದಿಗೊತ್ತಿ ಅದರಡಿಯಲ್ಲಿ ಇರುವ ಗಟ್ಟಿ ಮಣ್ಣನ್ನು ಸೈನೈಡ್ ದೂಳಿನಿಂದ ಬೇರ್ಪಡಿಸುತ್ತಾರೆ. ಚಿನ್ನದ ನಿಕ್ಷೇಪವಿರುವ ಮಣ್ಣನ್ನು, ಕಣದಲ್ಲಿ ಅಕ್ಕಿಯನ್ನು ಹೊಟ್ಟಿನಿಂದ ಬೇರ್ಪಡಿಸುವಂತೆ, ಹದ ಮಾಡುತ್ತಾರೆ. ಅದಕ್ಕೆ ಅನುಭವವೇ ಆಧಾರ.ಒಂದೆರಡು ಮೂಟೆಯಷ್ಟು ಮಣ್ಣನ್ನು ಸಂಗ್ರಹಿಸಲು ಮೂರ‌್ನಾಲ್ಕು ದಿನವಾದರೂ ಬೇಕು. ನಂತರದ್ದು, ಮೂಟೆಗಳಲ್ಲಿ ಮಣ್ಣನ್ನು ತುಂಬಿಸಿಕೊಂಡು ಸಮೀಪದ ನೀರಿರುವ ಕಾಲುವೆ ಬಳಿ ಸಾಗಿಸಿ ತೊಳೆಯುವ ಕೆಲಸ. ಹೊಳೆಯುವ ಚಿನ್ನದ ಕಣಕ್ಕಾಗಿ ಕಣ್ಣಿಡುವುದು. ಕಂಡರೆ, ಕೈಗೆ ಸಿಕ್ಕರೆ ಸಮಾಧಾನ. ಸಿಗುವ ಕಚ್ಚಾ ಚಿನ್ನವನ್ನು ಅಕ್ಕಸಾಲಿಗರಿಗೆ ಅಥವಾ ಚಿನ್ನದ ದಲ್ಲಾಳಿಗಳಿಗೆ ಕೊಟ್ಟರೆ ಒಂದಿಷ್ಟು ಹಣವನ್ನು ನೋಡಬಹುದು. ಇಲ್ಲವೇ ಬರೀ ಸಂತಾಪ ತುಂಬಿದ ಮೌನ.ಚಿನ್ನದ ಗಣಿ ನಿಷೇಧಿತ ಪ್ರದೇಶ. ಹೀಗಾಗಿ ಅಲ್ಲಿ ಸುಳಿದಾಡುವವರ ಮೇಲೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ಹದ್ದಿನ ಕಣ್ಣು. ಮಣ್ಣಿನಲ್ಲಿ ಚಿನ್ನದ ಕಣ ಹುಡುಕುವ ಈ ಶ್ರಮಜೀವಿ ಹೆಣ್ಣುಮಕ್ಕಳನ್ನು ಅವರು ಮಾತನಾಡಿಸುವುದು ಅಪರೂಪ. ಹೀಗಾಗಿ ಕಾಯಕ-ಜೀವನ ಮುಂದುವರಿದಿದೆ. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.