ಭಾನುವಾರ, ಜೂನ್ 20, 2021
23 °C

ಮಣ್ಣಿನ ಕಂಪು ನೆನಪಿಸಿದ ಗಾಡಿ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಣ್ಣಿನ ಕಂಪು ನೆನಪಿಸಿದ ಗಾಡಿ ಸ್ಪರ್ಧೆ

ಹುಬ್ಬಳ್ಳಿ:  ಬಾರುಕೋಲಿನ ಸದ್ದಿಗೆ ಬೆದರುತ್ತ, ಒಡೆಯನ ಕೂಗಿಗೆ ಉತ್ಸಾಹದಿಂದ ಪುಟಿಯುತ್ತ ಓಡುತ್ತಿದ್ದ ಎತ್ತುಗಳು. ಕಪ್ಪು ನೆಲವನ್ನು ಸೀಳಿ ದೂಳೆಬ್ಬಿಸುತ್ತ ಹೊರಳುತ್ತಿದ್ದ ಚಕ್ಕಡಿಗಳು. ಜನರ ಕೂಗು, ಕೇಕೆ-ಸಂಭ್ರಮ.

ಗಂಗೂಬಾಯಿ ಹಾನಗಲ್ ಗುರುಕುಲಕ್ಕೆ ಕಿಲೋಮೀಟರ್ ದೂರದಲ್ಲಿ, ಸುಳ್ಳ ರಸ್ತೆಗೆ ಅಂಟಿಕೊಂಡಂತೆ ಇರುವ ರಾಜೇಸಾಬ್ ಹಜರತ್‌ನವರ ಹಾಗೂ ಈರಣ್ಣ ಹರಕುಣಿ ಅವರ ಹೊಲದಲ್ಲಿ ಭಾನುವಾರ ಪೂರ್ತಿ ಚಕ್ಕಡಿಗಳ ಸದ್ದು, ಎತ್ತುಗಳ ಕೊರಳಿನ ಗಂಟೆಗಳ ನಾದ ಅನುರಣಿಸುತಿತ್ತು.ಉಣಕಲ್‌ನ ಸಿದ್ಧೇಶ್ವರ ಸೇವಾ ಸಮಿತಿ ವತಿಯಿಂದ ನಿಂಗಪ್ಪ ಹರಕುಣಿ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಖಾಲಿ ಗಾಡಿ ಚಕ್ಕಡಿ ಓಡಿಸುವ ಸ್ಪರ್ಧೆಯಲ್ಲಿ ಹತ್ತಾರು ಜೋಡಿ ಎತ್ತುಗಳು ಪಾಲ್ಗೊಂಡು ಗಮನ ಸೆಳೆದವು. ಜನ ತುದಿಗಾಲಲ್ಲಿ ನಿಂತು ಸ್ಪರ್ಧೆ ವೀಕ್ಷಿಸಿದರು.ಸ್ಪರ್ಧೆಗೆ ಪ್ರತಿ ಜೋಡಿಗೆ ಕೇವಲ ಒಂದು ನಿಮಿಷವನ್ನು ಗೊತ್ತುಪಡಿಸಲಾಗಿತ್ತು. ಹೊಲವನ್ನು ಅರಗಿ ಸಿದ್ಧಪಡಿಸಲಾಗಿದ್ದ ರಸ್ತೆಯಲ್ಲಿ  ಚಕ್ಕಡಿಯ ನೊಗ ಹೊತ್ತು ಓಡುತ್ತಿದ್ದ ಎತ್ತುಗಳು ನಿಮಿಷದಲ್ಲಿ ಒಂದೂವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ರಮಿಸಿದವು. ಅತಿಹೆಚ್ಚು ದೂರ ಓಡಿಬಂದ ಜೋಡಿಗಳು ಪ್ರಶಸ್ತಿ ಗಿಟ್ಟಿಸಿದವು.ಹುಬ್ಬಳ್ಳಿ-ಧಾರವಾಡದ ಸುತ್ತಲಿನ ಹಳ್ಳಿಗಳ ರೈತರು ಮಾತ್ರವಲ್ಲದೆ ನೆರೆಯ ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಮಹಾರಾಷ್ಟ್ರ ಮೊದಲಾದ ಭಾಗಗಳಿಂದಲೂ ರೈತರು ತಮ್ಮ ಜಾನುವಾರುಗಳೊಂದಿಗೆ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ಉದ್ಘಾಟನೆ: ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಕ್ಕಡಿ ಸ್ಪರ್ಧೆಗೆ ಬೆಳಿಗ್ಗೆ ಚಾಲನೆ ನೀಡಿ ಶುಭ ಹಾರೈಸಿದರು. ಎಸ್.ಬಿ. ಹಿರೇಮಠ, ಈರಣ್ಣ ಹರಕುಣಿ, ಬಸಣ್ಣ ಹೆಬ್ಬಳ್ಳಿ, ವೀರಣ್ಣ ನೀರಲಗಿ, ಬಾಬು ಹೊಟಗಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಸದಾನಂದ ಡಂಗನವರ, ಯೋಗೇಶ್ ಹೊಟಗಿ, ಶಿವು ಪಾಟೀಲ ಹಾಗೂ ಇತರರು ಹಾಜರಿದ್ದರು.ಶಿಗ್ಗಾವಿ ಜೋಡಿಗೆ ಬಹುಮಾನಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿ ಭಾನುವಾರ ನಡೆದ ಗಾಡಿ ಓಡಿಸುವ ಸ್ಪರ್ಧೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ನೀರಲಗಿ ಗ್ರಾಮದ ಸಂಕಪ್ಪ ದೊಡ್ಡಮನಿ ಅವರ ಜೋಡಿಎತ್ತುಗಳು ಒಂದು ನಿಮಿಷದಲ್ಲಿ 1735 ಅಡಿ ದೂರ ಕ್ರಮಿಸುವ ಮೂಲಕ ಮೊದಲ ಬಹುಮಾನವಾಗಿ 35 ಸಾವಿರ ರೂಪಾಯಿ ತಮ್ಮದಾಗಿಸಿಕೊಂಡವು.1711 ಅಡಿ ಕ್ರಮಿಸಿದ ಬೆಳಗಾವಿ ಜಿಲ್ಲೆ ವಡಗಾಂವದ ಪರಶುರಾಮ ಪಾಕ್ರೆ ದ್ವಿತೀಯ ಬಹುಮಾನವಾಗಿ 30 ಸಾವಿರ ಹಾಗೂ 1697 ಅಡಿ ಕ್ರಮಿಸಿದ ಕುದನೂರಿನ ಸಿದ್ದೇಶ್ವರ ಪ್ರಸನ್ನ ಜೋಡಿ ತೃತೀಯ ಬಹುಮಾನವಾಗಿ 26 ಸಾವಿರ ರೂಪಾಯಿ ತಮ್ಮದಾಗಿಸಿಕೊಂಡವು.ನಂತರದ ಸ್ಥಾನಗಳನ್ನು ಕ್ರಮವಾಗಿ ಧಾರವಾಡ ಜಿಲ್ಲೆಯ ತಡಸಿನಕೊಪ್ಪದ  ಮಾದೇವಪ್ಪ ರೇವಡಿಹಾಳ, ಸುತಗಟ್ಟಿಯ ಗ್ರಾಮದೇವತಾ ಪ್ರಸನ್ನ, ಬೇಗೂರಿನ ಪಾಂಡುರಂಗ ಪ್ರಸನ್ನ, ಬಾವಿಹಾಳದ ಚನ್ನ ವೃಷಭೇಂದ್ರ ಪ್ರಸನ್ನ, ದಾಮಗಿಯ ಕಲ್ಮೇಶ್ವರ ಪ್ರಸನ್ನ, ಮಲ್ಲನಕೊಪ್ಪದ ಆಂಜುನೇಯ ಪ್ರಸನ್ನ, ಬೆಳವಟಗಿಯ ಗ್ರಾಮದೇವತಾ ಪ್ರಸನ್ನ, ಹೆಬ್ಬಳ್ಳಿಯ ಗುಡಿಯಮ್ಮ ದೇವಿ ಪ್ರಸನ್ನ ಜೋಡಿಗಳು ಪಡೆದು ನಗದು ಬಹುಮಾನ ತಮ್ಮದಾಗಿಸಿಕೊಂಡವು.ಉಣಕಲ್ ಹಾಗೂ ಭೈರಿದೇವರಕೊಪ್ಪ ಹಾಗೂ ಗೋಪನಕೊಪ್ಪ ಗ್ರಾಮಗಳ ಸ್ಪರ್ಧಿಗಳು ವಿಶೇಷ ಬಹುಮಾನ ಪಡೆದವು. ಎಸ್.ಬಿ. ಹಿರೇಮಠ ಹಾಗೂ ಇತರರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.