ಮಣ್ಣಿನ ಗಣಪನನ್ನು ಕಾಡುತ್ತಿರುವ ವಿಘ್ನ

7

ಮಣ್ಣಿನ ಗಣಪನನ್ನು ಕಾಡುತ್ತಿರುವ ವಿಘ್ನ

Published:
Updated:

ಗಜೇಂದ್ರಗಡ: `ಈ ಮೊದಲು ಏಳೆಂಟು ಅಡಿ ಎತ್ತರದ ಮಣ್ಣಿನ ಗಣಪನನ್ನು ಮಾಡುತ್ತಿದ್ದೆವು. ಆದರೆ, ಈಗ ಮಣ್ಣಿನ ಗಣಪನ ಮೂರ್ತಿಗಳನ್ನು ಕೇಳುವವರೇ ಇಲ್ಲ ಎನ್ನುವ ಕಾರಣಕ್ಕಾಗಿ ಸಣ್ಣ-ಪುಟ್ಟ ಗಣಪನನ್ನು ಮಾಡಿ ಮಾರಾಟ ಮಾಡುತ್ತಿದ್ದೇವೆ' ಇದು ತಲೆಮಾರುಗಳಿಂದಲೂ ಗಣಪನ ತಯಾರಿಕೆಯಲ್ಲಿ ನಿರತವಾಗಿರುವ ಕಲಾವಿದರ ನೋವಿನ ನುಡಿಗಳು.ಮಣ್ಣಿನ ಗಣಪ ಇದ್ದ ಜಾಗಕಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿರಾಜಮಾನವಾಗುತ್ತಿದ್ದಾನೆ. ಇದರಿಂದಾಗಿ ಸಾಂಪ್ರದಾಯಿಕ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ಮಣ್ಣಿನ ಗಣಪತಿ ತಯಾರಿಕೆಗೆ ಕಲೆಯ ಕಸೂತಿ ಅವಶ್ಯಕತೆ ಇತ್ತು. ಅಪ್ಪಟ ಕಲಾವಿದರು ಮಾತ್ರ ಗಣಪನನ್ನು ಕಟ್ಟುತ್ತಿದ್ದರು. ಆದರೆ ಅಚ್ಚಿನ ಗಣಪನ ಮೂರ್ತಿಬಂದ ಮೇಲೆ ಯಾರು ಬೇಕಾದರು ಗಣಪನ ಮೂರ್ತಿ ತಯಾರಿಸಬಹುದಾಗಿದೆ.ಗಜೇಂದ್ರಗಡ, ಸೂಡಿ, ಇಟಗಿ, ಮುಶಿಗೇರಿ, ರಾಜೂರ, ಕಲ್ಲಿಗನೂರ ಮುಂತಾದ ಗ್ರಾಮಗಳಲ್ಲಿ ತಲೆಮಾರುಗಳಿಂದಲೂ ಮಣ್ಣಿನ ಗಣಪನನ್ನು ತಯಾರಿಸಿ ಜೀವನ ಮಾಡುವ ನೂರಾರು ಕಲಾವಿದರ ಕುಟುಂಬಳಿವೆ. ಆದರೆ ಈಗಿನ ಆಧುನಿಕರ ಗಣಪನ ಮೂರ್ತಿಗಳು ಕಲಾವಿದರ ಬದುಕು ಕಸಿದುಕೊಂಡಿದೆ.ಭಾರವಾದನೇ ಮಣ್ಣಿನ ಗಣಪ?: ಪೂಜೆಗೆ ಪ್ರತಿಷ್ಠಾಪನೆ ಮಾಡುವವರು ಸಹ ಮಣ್ಣಿನ ಗಣಪತಿ ಭಾರ, ಸಾಗಿಸಲು ಕಷ್ಟವಾಗುತ್ತದೆ ಎಂಬ ಮನೋಭಾವವನ್ನು ತಾಳಿದ್ದಾರೆ. ಇದರಿಂದಾಗಿ ದೊಡ್ಡ ಗಣಪ ಮಾಡುವುದನ್ನು ಕಲಾವಿದರು ಕೈ ಬಿಟ್ಟಿದ್ದಾರೆ. ಹೀಗಾಗಿ ಅರ್ಧ ಅಡಿ, ಒಂದು ಅಡಿ ಎತ್ತರದ ಗಣಪತಿಯನ್ನು ಮಾರಾಟ ಮಾಡಲು ಕಲಾವಿದರು ನಿರ್ಧರಿಸಿದ್ದಾರೆ. ಹೀಗಾಗಿ ಮಣ್ಣಿನ ಗಣಪ ಭಕ್ತ ಸಮೂಹಕ್ಕೆ ಭಾರವಾದಂತಾಗಿದೆ. ಇಷ್ಟಾದರೂ ಕಲಿತ ಕಲೆಯನ್ನು ಕೈ ಬಿಡಬಾರದು ಎಂಬ ಕಾರಣಕ್ಕೆ ಕಷ್ಟವಾದರೂ ಪೂರ್ವಿಕರು ಕೊಟ್ಟ ಕೆಲಸ ಬಿಟಟಿಲ್ಲ. ರಾಮ-ಸೀತೆಯರನ್ನು ತೋರಿದ ಹನುಮಂತನ ಭಂಗಿಯಲ್ಲಿ ಇರುವ ಗಣಪತಿ ಸೇರಿ ಹತ್ತು-ಹಲವು ರೂಪದ ಗಣಪನ ಮೂರ್ತಿಯನ್ನು ತಯಾರಿಸಿ ಕೈ ಚಳಕ ತೋರುತ್ತಿದ್ದಾರೆ.ಮಣ್ಣಿಗೂ ಬರ: ಗಣಪನಿಗೆ ಅದು ಕರೆ ಮಣ್ಣೇ ಆಗಬೇಕು. ಇದಕ್ಕಾಗಿ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲ್ಲೂಕಿನ ಸುತ್ತ-ಮುತ್ತಲಿನ ಗ್ರಾಮಗಳ ಕೆರೆಗಳಲ್ಲಿ ದೊರೆಯುವ ಕೆಂಪು ಮಸಾರಿ ಮಣ್ಣನ್ನು ತರಿಸಿಕೊಳ್ಳಬೇಕಾಗುತ್ತದೆ. ಈ ಮಣ್ಣು ಅಂಟಿಕೊಳ್ಳದ ಕಾರಣ ಮೂರ್ತಿ ರಚನೆ ಮಾಡಲು ಸುಲಭ. ಆದರೆ, ಕಳೆದ ಮೂರು ವರ್ಷಗಳಿಂದ ಆವರಿಸಿರುವ ಬರದ ಹಿನ್ನೆಲೆಯಲ್ಲಿ ಕೆರೆಗಳಲ್ಲಿ ನೀರಿಲ್ಲ. ಹೀಗಾಗಿ ಗಣಪ ತಯಾರಿಕೆ ಮಣ್ಣು ಗಗನ ಕುಸುಮವಾಗಿದೆ. ಕಲಾವಿದರು ಮಣ್ಣಿಗಾಗಿ ಅಲೆಯುವಂಥಾಗಿದೆ.`ಬಹಳ ಭಕ್ತಿಯಿಂದ ಮೂರ್ತಿಯನ್ನು ದಿನಗಟ್ಟಲೇ ಕುಳಿತು ತಯಾರು ಮಾಡುತ್ತೇವೆ. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ಅಚ್ಚು ಹಾಕಿದ ಗಣಪನನ್ನು ಒಂದೆರಡು ಗಂಟೆಯಲ್ಲಿ ಮಾಡಿ ಮುಗಿಸುತ್ತಾರೆ' ಎನ್ನುತ್ತಾರೆ ಕಲಾವಿದ ಯಮನಪ್ಪ ಗಾಯಕವಾಡ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry