`ಮಣ್ಣಿನ ಮಕ್ಕಳಿಗೆ ಮಣ್ಣೇ ಗತಿ'

7
ಬರ ಬದುಕು ಭಾರ ಚಿಕ್ಕಬಳ್ಳಾಪುರ ಜಿಲ್ಲೆ 1

`ಮಣ್ಣಿನ ಮಕ್ಕಳಿಗೆ ಮಣ್ಣೇ ಗತಿ'

Published:
Updated:

ಚಿಕ್ಕಬಳ್ಳಾಪುರ: `ಸ್ವಾಮಿ, ಮಳೆಯನ್ನೇ ನಂಬಿ ಕೃಷಿ ಮಾಡುವ ರೈತರು ನಾವು. ಕೊಳವೆಬಾವಿ ಕೊರೆಸುವಷ್ಟು ಹಣವಿಲ್ಲ. ಲಕ್ಷಾಂತರ ರೂಪಾಯಿ ಸಾಲ ಮಾಡ್ಕೊಂಡು ಕೊರೆಸಿದರೂ ಎಷ್ಟು ದಿನ ನೀರು ಸಿಗುತ್ತೋ ಗೊತ್ತ್ಲ್ಲಿಲ. ಕೃಷಿ ಸಹವಾಸವೇ ಬೇಡಾಂತ ನನ್ನ ಮಕ್ಕಳು ಕೂಲಿಗೆ ಹೋಗುತ್ತಾರೆ.ಬಿತ್ತನೆ ಮಾಡದೆ ಜಮೀನು ಖಾಲಿ ಬಿಟ್ಟರೆ, ನನ್ನನ್ನ ಸೋಮಾರಿ- ಕೆಲಸ ಮಾಡಲಾಗದವನು ಅಂತ ಜನರು ಹೀಯಾಳಿಸುತ್ತಾರೆ. ಬಿತ್ತನೆ ಮಾಡಿದರೆ, ಮೈ ತುಂಬಾ ಸಾಲ ಮಾಡಿಕೊಂಡು ಹೇಗೆ ಕೆಲಸ ಮಾಡುತ್ತಾನೆ ನೋಡು ಅಂತ ವ್ಯಂಗ್ಯವಾಡುತ್ತಾರೆ. ಅದಕ್ಕೆ ಬೆಳೆ ಬಾರದಿದ್ದರೂ 60ನೇ ವಯಸ್ಸಿನಲ್ಲಿ ಕೃಷಿ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಿದ್ದೀನಿ'-ಜಿಲ್ಲೆಯಲ್ಲಿ ಕೃಷಿಕರು ಎದುರಿಸುತ್ತಿರುವ ಸಂಕಷ್ಟವನ್ನು ಹೀಗೆ ಬಿಡಿಬಿಡಿಯಾಗಿ ಬಿಚ್ಚಿಟ್ಟವರು ಚಿಕ್ಕಳ್ಳಾಪುರ ತಾಲ್ಲೂಕು ಜಾತವಾರ ಹೊಸಹಳ್ಳಿಯ ರೈತ ಸುಂದರ್‌ರಾವ್. ನಾಲ್ಕನೇ ವರ್ಷವೂ ಮಳೆ ಕೈ ಕೊಟ್ಟಿರುವುದಕ್ಕೆ ಕಂಗಾಲಾಗಿರುವ ಅವರು ಮಳೆ ಮೇಲಿನ ಭರವಸೆಯನ್ನೇ  ಕಳೆದುಕೊಂಡಿದ್ದಾರೆ. `ಮಳೆ ಬಂದರೂ-ಬಾರದಿದ್ದರೂ ನಮ್ಮ ತಾತನ ಕಾಲದಿಂದಲೂ ಕೃಷಿ ಕೆಲಸವೇ ಮಾಡುತ್ತಿದ್ದೀವಿ. ನನ್ನ ಮಕ್ಕಳು ಪಟ್ಟಣದಲ್ಲಿ ಕೂಲಿ ಮಾಡುವುದರಿಂದ ದಿನಾಲೂ ಊಟ ಮಾಡುತ್ತಿದ್ದೇವೆ. ಬೇಸಾಯವನ್ನೇ ನಂಬಿ ಈಗ ಬದುಕಲು ಆಗಲ್ಲ. ಮೊದಲಿದ್ದಂಥ ದಿನಗಳು ಇವು ಅಲ್ಲ' ಎಂದು ನೊಂದು ನುಡಿಯುತ್ತಾರೆ.ಕೆಲ ದಿನಗಳ ಮಟ್ಟಿಗೆ ಅರೆಬರೆಯಾಗಿ ಸುರಿದು ಆಶಾಭಾವನೆ ಮೂಡಿಸಿದ್ದ ಮಳೆ ಒಮ್ಮಿಂದೊಮ್ಮೆಲೆ ನಿಂತಿರುವ ಕಾರಣ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿನ ರೈತರು ಒಮ್ಮೆ ಆಕಾಶದತ್ತ, ಮಗದೊಮ್ಮೆ ಒಣಗಿದ ಬೆಳೆಗಳತ್ತ ನೋಡುತ್ತ ಬದುಕಿದ್ದರೂ ಸತ್ತಂತಹ ಸ್ಥಿತಿ ಅನುಭವಿಸುತ್ತಿದ್ದಾರೆ. `ಕೃಷಿಯನ್ನೇ ನಂಬಿ ಬದುಕುವುದು ಕಷ್ಟ ಎಂಬ ವಾಸ್ತವಾಂಶ ಗೊತ್ತಿದ್ದರೂ ನಮಗಿದು ಅನಿವಾರ್ಯ. ಓದು-ಬರಹ ಗೊತ್ತಿಲ್ಲ. ಬೇರೆ ಕೆಲಸ ಮಾಡಲಿಕ್ಕೆ ಬರಲ್ಲ. ಮಣ್ಣಿನ ಜೊತೆ ಸಂಬಂಧ ಬೆಳೆಸಿಕೊಂಡ ನಾವು ಕಷ್ಟ-ನಷ್ಟವಾದರೂ ಕೊನೆಯವರೆಗೂ ಮಣ್ಣಿನ ಮಕ್ಕಳಾಗಿಯೇ ಉಳಿಯುತ್ತೇವೆ' ಎನ್ನುವ ನಾಯನಹಳ್ಳಿಯ ರೈತ ವೈ.ವೆಂಕಟೇಶ್ ಮುಖದಲ್ಲಿ ಮಡುಗಟ್ಟಿದ ನೋವನ್ನು ಸುಲಭವಾಗಿ ಗುರುತಿಸಬಹುದು.ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ಮಳೆಯಾಗದೆ ಬಹುತೇಕ ಜಮೀನುಗಳು ಬರಡಾಗಿದ್ದು, ದಿಕ್ಕುಗಾಣದೆ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕುಗಳಲ್ಲಿ ಅಲ್ಲಲ್ಲಿ ಬಿತ್ತನೆಯಾಗಿದ್ದರೂ, ಅನೆಕ ಕಡೆ ಇನ್ನೂ ಉಳುಮೆಯೇ ಆಗಿಲ್ಲ. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳಂತೂ ನೀರಿಲ್ಲದೆ ತತ್ತರಿಸುತ್ತಿವೆ. ಕೃಷಿ ಚಟುವಟಿಕೆಗಳಿಗೆ ಅಷ್ಟೇ ಅಲ್ಲ, ಕುಡಿಯಲು ಸಹ ನೀರು ಸಿಗದಂತಹ ಪರಿಸ್ಥಿತಿ ಉದ್ಭವಿಸಿದೆ. ತಾತ್ಕಾಲಿಕ ಜೀವಸೆಲೆಗಳಾಗಿರುವ ಕೊಳವೆಬಾವಿಗಳು ಕೂಡ ಬತ್ತತೊಡಗಿವೆ.`ಬರಪೀಡಿತ ಪ್ರದೇಶ ಎಂದು ಪರಿಗಣಿಸುವ ನಮ್ಮ ಜಿಲ್ಲೆಗೆ ಆರು ತಿಂಗಳಿಗೆ ಇಲ್ಲವೇ ವರ್ಷಕ್ಕೆ ಒಮ್ಮೆ ಕೇಂದ್ರ ಮತ್ತು ರಾಜ್ಯದಿಂದ ಬರ ಅಧ್ಯಯನ ತಂಡದವರು ಬರುತ್ತಾರೆ. ನಮ್ಮಂದಿಗೆ ಅರ್ಥವಾಗದ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುತ್ತಾರೆ. ನಾವೊಂದು ಹೇಳಿದರೆ, ಅವರು ಏನು ಬರೆದುಕೊಳ್ಳುತ್ತಾರೋ ಗೊತ್ತಾಗಲ್ಲ. ಬರ ಪರಿಹಾರ ಬೇಗನೆ ಬರಬಹುದೆಂದು ಕಾಯುತ್ತ ಕೂರುತ್ತೇವೆ.ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆಯುವ ನಮಗೆ ಗುಂಟೆಗೆ 20 ರೂಪಾಯಿಯಂತೆ ಒಂದು ಎಕರೆಗೆ 800 ರೂಪಾಯಿ ಬರ ಪರಿಹಾರದ ಭರವಸೆ ನೀಡುತ್ತಾರೆ. ಆದರೆ ಪರಿಹಾರದ ಚೆಕ್ ಸಕಾಲಕ್ಕೆ ದೊರೆಯುವುದಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿದವರಿಗೆ 800 ರೂಪಾಯಿ ಎಲ್ಲಿಗೆ ಸಾಲುತ್ತೆ' ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಸಹಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ ಪ್ರಶ್ನಿಸುತ್ತಾರೆ.ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ ಮತ್ತು ಪುಷ್ಪೋದ್ಯಮ ಪ್ರಧಾನವಾಗಿರುವ ಈ ಜಿಲ್ಲೆಯಲ್ಲಿ ನೀರು ಸಿಗದಿದ್ದರೂ ಹಾಲಿಗೇನೂ ಕೊರತೆಯಿಲ್ಲ ಎಂಬ ಮಾತಿದೆ. ಆದರೆ ಜಾನುವಾರುಗಳಿಗೆ ಸರಿಯಾಗಿ ಮೇವು ಕೂಡ ದೊರೆಯದ ಕಾರಣ ಹೈನುಗಾರಿಕೆಗೂ ಪೆಟ್ಟು ಬೀಳುವ ಆತಂಕ ವ್ಯಕ್ತವಾಗುತ್ತಿದೆ. ನಿಶ್ಚಿತ ಬೆಲೆಯಿರದ ರೇಷ್ಮೆ ಕೃಷಿಕರು ಕೂಡ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆರ್ಥಿಕ ನಷ್ಟದಿಂದ ಚೇತರಿಸಿಕೊಳ್ಳಲಾಗದ ದ್ರಾಕ್ಷಿ ಬೆಳೆಗಾರರು ತಮ್ಮ ಜಮೀನುಗಳಲ್ಲಿ ನೆಡಲಾಗಿರುವ ಕಲ್ಲಿನ ಕಂಬಗಳನ್ನು ತೆರವುಗೊಳಿಸುತ್ತಿದ್ದಾರೆ. ಪುಷ್ಪೋದ್ಯಮದಲ್ಲಿ ಮುಂದುವರಿಯುವುದು ಕಷ್ಟವೆಂದು ಹೂ ಬೆಳೆಗಾರರು ಹೇಳುತ್ತಿದ್ದಾರೆ.ಘೋಷಣೆ ನಂತರ  ಕ್ರಮ

ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿಲ್ಲ. ಕೆಲ ಕಡೆ ಬಿತ್ತನೆಯಾಗಿದೆ. ಕೆಲ ಕಡೆ ಆಗಿಲ್ಲ. ಇನ್ನೂ ಕೆಲ ದಿನಗಳ ಕಾಲ ಮಳೆ ನಿರೀಕ್ಷಿಸಬಹುದು. ಬರಪೀಡಿತ ಪ್ರದೇಶವೆಂದು ಘೋಷಣೆಯಾದಲ್ಲಿ, ಬರ ಪರಿಹಾರಕ್ಕೆ ನೀಡುವಷ್ಟು ಹಣ ಜಿಲ್ಲಾಡಳಿತದ ಬಳಿಯಿದೆ. ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಅನುದಾನ ಸದ್ಬಳಕೆ ಮಾಡಿಕೊಳ್ಳಲಾಗುವುದು. ಸರ್ಕಾರದ ಸೂಚನೆಯ ಮೇರೆಗೆ  ಮುಂದಿನ ಕ್ರಮ ಜರುಗಿಸಲಾಗುವುದು.

ಡಾ.ಆರ್.ವಿಶಾಲ್, ಜಿಲ್ಲಾಧಿಕಾರಿ

ಜಮೀನು ಬರಡಾಗುತ್ತೆ


ಅಲ್ಲಿ-ಇಲ್ಲಿ ಸಾಲ ಮಾಡಿ ರಾಗಿ ಬಿತ್ತನೆ ಮಾಡಿದರೂ ಸ್ವಲ್ಪವೂ ಚಿಗುರಿಲ್ಲ. ಕೃಷಿ ಮೇಲೆ ಮಕ್ಕಳು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ವರ್ಷಗಳಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ನನಗೆ ಇದಲ್ಲದೆ ಬೇರೆ ಕೆಲಸ ಗೊತ್ತಿಲ್ಲ. ಮೈಯಲ್ಲಿ ಶಕ್ತಿ ಇರುವಷ್ಟು ದಿನ ದುಡಿಯುತ್ತೇನೆ. ಮಳೆ ಬಾರದಿದ್ದರೆ, ಫಲವತ್ತಾದ ಜಮೀನು ಬರಡಾಗುತ್ತದೆ.   

-ಸುಂದರ್‌ರಾವ್, ರೈತ   

                 

ತುಂಬಾ ನೋವಾಗುತ್ತದೆ


ಮುಸುಕಿನ ಜೋಳ ಎರಡು ತಿಂಗಳ ಹಿಂದೆಯೇ ಬಿತ್ತನೆ ಮಾಡಿದ್ದೆ. ಆದರೆ ಅದು ಒಣಗುತ್ತಿರುವುದು ನೋಡಿದರೆ ತುಂಬಾ ನೋವಾಗುತ್ತದೆ. ಹೊಟ್ಟೆ ತುಂಬಾ ಊಟ ಮಾಡದೆ ಎಲ್ಲ ಹಣವನ್ನು ಮುಸುಕಿನ ಜೋಳಕ್ಕೆ ಸುರಿದರೂ ಏನೂ ಪ್ರಯೋಜನವಾಗದಿದ್ದಾಗ ತುಂಬ ಬೇಸರವಾಗುತ್ತದೆ. ಏನು ಮಾಡಬೇಕೂಂತ ದಿಕ್ಕೇ ತೋಚುವುದಿಲ್ಲ.

-ವೈ.ವೆಂಕಟೇಶ್, ರೈತ

ಬರ ಪರಿಹಾರ ಸಾಲದು

ಬರ ಪರಿಹಾರದ ರೂಪದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಪರಿಹಾರ ಧನ ಯಾವುದಕ್ಕೂ ಸಾಲದು. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತನಿಗೆ ಕೆಲವೇ ನೂರು ಅಥವಾ ಸಾವಿರ ರೂಪಾಯಿ ಕೊಟ್ಟರೆ, ಅವನು ಬದುಕುವುದಾದರೂ ಹೇಗೆ? ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಮತ್ತು ಸಂಸಾರ ನಿಭಾಯಿಸುವುದಾದರೂ ಹೇಗೆ?

-ಮುನಿಕೃಷ್ಣಪ್ಪ.ರೈತ

ಜಿಲ್ಲೆಯ ವಾಡಿಕೆ ಮಳೆ ವಾರ್ಷಿಕ 75.03 ಸೆಂ.ಮೀ.2012ರಲ್ಲಿ 54.62 ಸೆಂ.ಮೀ. ಮಳೆಯಾಗಿತ್ತು.ಜುಲೈವರೆಗಿನ ವಾಡಿಕೆ ಮಳೆ  28.10 ಸೆಂ.ಮೀ.2012ರ ಜುಲೈವರೆಗೆ ಆದದ್ದು 19.81 ಸೆಂ.ಮೀ.ಈ ವರ್ಷ ಇದೇ ಅವಧಿಯಲ್ಲಿ ಆಗಿದ್ದು 19.45 ಸೆಂ.ಮೀ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry