ಸೋಮವಾರ, ಜೂನ್ 14, 2021
26 °C

ಮಣ್ಣು ಪರೀಕ್ಷೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ ಎನ್.ಸಿದ್ದೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಮೆಟ್ರೊ~ದ ಎರಡನೇ ಹಂತದಲ್ಲಿ ನಿರ್ಮಾಣಗೊಳ್ಳಲಿರುವ ಮೂರು ವಿಸ್ತರಣಾ ಮಾರ್ಗಗಳ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಭೂಗರ್ಭ ತಾಂತ್ರಿಕ ಪರೀಕ್ಷೆ ಅರ್ಥಾತ್ ಮಣ್ಣು ಪರೀಕ್ಷೆ ಕೈಗೊಳ್ಳಲು `ಬೆಂಗಳೂರು ಮೆಟ್ರೊ ರೈಲು ನಿಗಮ~ವು ಸಿದ್ಧತೆ ನಡೆಸಿದೆ. ರೂ 9.4 ಕೋಟಿ ಅಂದಾಜು ವೆಚ್ಚದ ಈ ಕಾಮಗಾರಿಗೆ ನಿಗಮವು ಟೆಂಡರ್ ಕರೆದಿದೆ.ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ, ಮೈಸೂರು ರಸ್ತೆಯ ನಾಯಂಡನಹಳ್ಳಿಯಿಂದ ಕೆಂಗೇರಿವರೆಗೆ, ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೂರು ವಿಸ್ತರಣಾ ಮಾರ್ಗಗಳಲ್ಲಿ ಒಟ್ಟು 35.06 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗ ಹಾಗೂ 36 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.ಎತ್ತರಿಸಿದ ಮಾರ್ಗ ಮತ್ತು ನಿಲ್ದಾಣಗಳಿಗಾಗಿ ಕಾಂಕ್ರಿಟ್ ಪಿಲ್ಲರ್‌ಗಳನ್ನು ನಿರ್ಮಿಸುವ ಜಾಗಗಳಲ್ಲಿ ನೆಲದೊಳಗಿನ ಮಣ್ಣು ಮತ್ತು ಶಿಲಾ ಸಂರಚನೆಯನ್ನು ತಿಳಿದುಕೊಳ್ಳುವ ಸಲುವಾಗಿ ಮಣ್ಣು ಪರೀಕ್ಷೆ ನಡೆಸಲಾಗುತ್ತದೆ.ಹೈಡ್ರಾಲಿಕ್ ಕೊರೆಯುವ ಯಂತ್ರದಿಂದ 75ರಿಂದ 100 ಮಿಲಿ ಮೀಟರ್ ವ್ಯಾಸದ ಗುಳಿಗಳನ್ನು ಗರಿಷ್ಠ 40 ಮೀಟರ್ ಆಳದವರೆಗೆ ಕೊರೆದು, ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ಹೊರ ತೆಗೆದು ಆಯಾ ಜಾಗದ ಸಂರಚನೆಯನ್ನು ಅರ್ಥಮಾಡಿಕೊಳ್ಳಲಾಗುವುದು. ಈ ಪರೀಕ್ಷೆಯ ವರದಿ ಆಧಾರದಲ್ಲಿ ನಂತರದ ಕಾಮಗಾರಿಗಳ ವೆಚ್ಚವನ್ನು ಅಂದಾಜಿಸಲಾಗುವುದು.ಪ್ರತಿ ಪಿಲ್ಲರ್‌ಗೆ ಬುನಾದಿಯಾಗಿ ನೆಲ ಮಟ್ಟದಿಂದ ಕೆಳಭಾಗದಲ್ಲಿ ನಾಲ್ಕರಿಂದ ಆರು ಚಿಕ್ಕ ಚಿಕ್ಕ ಪಿಲ್ಲರ್‌ಗಳನ್ನು ನಿರ್ಮಿಸಲಾಗುವುದು. ಈ ಚಿಕ್ಕ ಪಿಲ್ಲರ್‌ಗಳಿಗಾಗಿ ನೆಲವನ್ನು ಕೊರೆಯಲಾಗುವುದು. ನೆಲದೊಳಗೆ ಸಿಗಬಹುದಾದ ಕಲ್ಲು ಅಥವಾ ಮಣ್ಣಿನ ಅಂದಾಜು ಪ್ರಮಾಣಕ್ಕೆ ಅನುಗುಣವಾಗಿ ಕೊರೆಯುವ ಕಾರ್ಯಾಚರಣೆಯ ಯೋಜನೆಯನ್ನು ಸಿದ್ಧಪಡಿಸಲಾಗುವುದು.`ಭಾರಿ ತೂಕದ ರೈಲು ಗಾಡಿಗಳ ಸಂಚಾರದ ಹೊರೆಯನ್ನು ತಡೆದುಕೊಳ್ಳುವ ಹಾಗೆ ಪಿಲ್ಲರ್‌ಗಳನ್ನು ನಿರ್ಮಿಸಲು ಮೆದು ಮಣ್ಣು ಹೆಚ್ಚಾಗಿರುವ ಕಡೆ ಹೆಚ್ಚು ಆಳದವರೆಗೆ ಗುಂಡಿಗಳನ್ನು ಕೊರೆದು ಬುನಾದಿ ಪಿಲ್ಲರ್‌ಗಳನ್ನು ನಿರ್ಮಿಸಬೇಕಾಗುತ್ತದೆ. ಶಿಲಾ ಭಾಗ ಹೆಚ್ಚಾಗಿರುವ ಕಡೆ ಕಡಿಮೆ ಆಳದ ಗುಂಡಿಗಳನ್ನು ಕೊರೆದರೆ ಸಾಕಾಗುತ್ತದೆ~ ಎಂದು ತಜ್ಞರೊಬ್ಬರು ತಿಳಿಸಿದರು.1ನೇ ಹಂತದಲ್ಲಿ 42.30 ಕಿ.ಮೀ, 2ನೇ ಹಂತದಲ್ಲಿ 72.09 ಕಿ.ಮೀ- ಒಟ್ಟು 114.39 ಕಿ.ಮೀ. ಉದ್ದದ ಮೆಟ್ರೊ ಮಾರ್ಗ ನಿರ್ಮಾಣಗೊಳ್ಳಲಿದೆ.1ನೇ ಹಂತದಲ್ಲಿ 6.7 ಕಿ.ಮೀ. ಉದ್ದದ ರೀಚ್- 1ರ ಮಾರ್ಗದಲ್ಲಿ ಈಗಾಗಲೇ ರೈಲುಗಳ ಸಂಚಾರ ಪ್ರಾರಂಭವಾಗಿದೆ. ಉಳಿದ ರೀಚ್‌ಗಳ ಕಾಮಗಾರಿ ವಿವಿಧ ಹಂತಗಳಲ್ಲಿದೆ.2ನೇ ಹಂತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಜನವರಿ ತಿಂಗಳಲ್ಲಿ ಮಂಜೂರಾತಿ ನೀಡಿದ್ದು, ಫೆಬ್ರುವರಿ ತಿಂಗಳಲ್ಲಿ ಯೋಜನೆ ಜಾರಿ ಸಂಬಂಧ ಆದೇಶವನ್ನು (ಜಿಒ) ಹೊರಡಿಸಿತ್ತು. ಜತೆಗೆ ಪೂರ್ವ ಸಿದ್ಧತೆ ಕಾಮಗಾರಿ ಕೈಗೊಳ್ಳಲು ಹಸಿರು ನಿಶಾನೆ ತೋರಿಸಿತ್ತು.ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡುವುದು ಬಾಕಿ ಉಳಿದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.