ಮಂಗಳವಾರ, ಆಗಸ್ಟ್ 11, 2020
27 °C

ಮಣ್ಣೆತ್ತಿನ ಅಮಾವಾಸ್ಯೆ: ಸಂಭ್ರಮದ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಣ್ಣೆತ್ತಿನ ಅಮಾವಾಸ್ಯೆ: ಸಂಭ್ರಮದ ಆಚರಣೆ

ಗಜೇಂದ್ರಗಡ: ಪ್ರಸಕ್ತ ವರ್ಷ ಮುಂಗಾರು ಮಳೆ ಮುನಿಸಿಕೊಂಡಿದ್ದರೂ ಮಣ್ಣೆತ್ತಿನ ಅಮಾವಾಸ್ಯೆಯನ್ನು ಮಣ್ಣಿನ ಮಕ್ಕಳು ಸಡಗರದಿಂದ ಆಚರಿಸಿದರು.ಕಳೆದ ಎರಡು ವರ್ಷಗಳಿಂದ ತಲೆದೋರಿರುವ ಬರದಿಂದ ಕೃಷಿ ಚಟುವಟಿಕೆ ಇಲ್ಲದೆ ಮಣ್ಣಿನ ಎತ್ತುಗಳ ಹಬ್ಬಕ್ಕೆ ಮಂಕು ಕವಿದಿತ್ತು. ಮಣ್ಣಿನ ಮೊದಲ ಪೂಜೆಯನ್ನು ಸಂಭ್ರಮದಿಂದ ನೆರವೇರಿಸದಿದ್ದರೆ ಮುಂದಿನ ಮಳೆಗಳು ಸಹ ಕೈಕೊಡುತ್ತವೆ ಎಂಬ ನಂಬಿಕೆಯಲ್ಲಿದ್ದ ಕೃಷಿಕರು ತಮ್ಮ ಸಂಕಷ್ಟಗಳನ್ನು ಬದಿಗಿಟ್ಟು ಪ್ರಸಕ್ತ ವರ್ಷ ಸಂಭ್ರಮದಿಂದ ಆಚರಿಸಿದರು.ಸೋಮವಾರ ರೈತ ಸಮೂಹ ಮಣ್ಣಿನ ಬಸವಣ್ಣನ ಮೂರ್ತಿ ಪೂಜಿಸಿ ಆಚರಿಸಿದರು. ಈ ವರ್ಷದಲ್ಲಾದರೂ ಉತ್ತಮ ಮಳೆಯಾಗಿ ಮುಂಗಾರು ಹಂಗಾಮಿನ ಬೆಳೆಗಳು ಸಮೃದ್ಧಿಯಾಗಿ ಬೆಳೆದು ಬರಲೆಂದು ಪ್ರಾರ್ಥಿಸಿದರು.ತಾಲ್ಲೂಕಿನ ಗಜೇಂದ್ರಗಡ, ಸೂಡಿ, ಇಟಗಿ, ಮುಶಿಗೇರಿ, ಗೋಗೇರಿ, ಕೊಡಗಾನೂರ, ಪುರ್ತಗೇರಿ, ಕಾಲಕಾಲೇಶ್ವರ, ಲಕ್ಕಲಕಟ್ಟಿ, ನಾಗೇಂದ್ರಗಡ, ಕಲ್ಲಿಗನೂರ, ನೆಲ್ಲೂರ, ಪ್ಯಾಟಿ, ದಿಂಡೂರ, ಅಮರಗಟ್ಟಿ, ಅಳಗುಂಡಿ, ಚಿಕ್ಕ ಅಳಗುಂಡಿ, ಹಿರೇಅಳಗುಂಡಿ ಸೇರಿದಂತೆ ಮಣ್ಣೆತ್ತಿನ ಅಮಾವಾಸ್ಯೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ತಿಂಗಳುಗಟ್ಟಲೆ ಶ್ರಮವಹಿಸಿ ತಯಾರಿಸಿದ ಮಣ್ಣಿನ ಬಸವಣ್ಣನನ್ನು ಕುಂಬಾರರು ಸೋಮವಾರ ಬೆಳಗ್ಗೆಯಿಂದ ಬುಟ್ಟಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡಿದರು. ಕೆಲವರು 5 ರಿಂದ 15 ರೂಪಾಯಿ ನೀಡಿ ಖರೀದಿಸಿದರೆ ಮತ್ತೆ ಕೆಲವರು ದವಸ-ಧಾನ್ಯ ನೀಡಿ ಕೊಂಡು ಕೊಂಡರು.ಮಳೆಗೆ ಪ್ರಾರ್ಥನೆ: ಮಣ್ಣಿನ ಬಸವಣ್ಣನನ್ನು ದೇವರ ಜಗುಲಿ ಮೇಲಿಟ್ಟು ಪೂಜಿಸಿ ನೈವೇದ್ಯವನ್ನು ಅರ್ಪಿಸಿದ ಭಕ್ತರು ಮಳೆರಾಯನನ್ನು ಕರುಣಿಸುವಂತೆ ಭಿನ್ನವಿಸಿಕೊಂಡರು. ಅನಂತರ ಚಿಕ್ಕ ಮಕ್ಕಳು ಬಸವಣ್ಣನನ್ನು ಬುಟ್ಟೆಯಲ್ಲಿಟ್ಟುಕೊಂಡು ಬೀದಿ- ಬೀದಿ ಸುತ್ತಿ ಜೋಳ, ಪುಡಿಗಾಸು ಸಂಗ್ರಹಿಸಿದರು.ಆ ಹಣದಲ್ಲಿ ಮಂಡಕ್ಕಿ ಪೂಜಾ ಸಾಮಗ್ರಿ ಖರೀದಿಸಿ ಬಸವಣ್ಣನನ್ನು  ಬಾವಿಕಟ್ಟೆ ಮೇಲಿಟ್ಟು ಪೂಜಿಸಿ ಬಾವಿಯಲ್ಲಿ ಹಾಕಲಾಯಿತು. ಬಳಿಕ ಮಂಡಕ್ಕಿಯನ್ನು  ಸಾರ್ವಜನಿಕರಿಗೆ ಹಂಚಿ ಸಂಭ್ರಮಿಸಿದರು.ಣ್ತೆರೆಯಲಿ: ಸಕಾಲಕ್ಕೆ ಮಳೆರಾಯ ಸುರಿಯದ್ದರಿಂದ ಪ್ರಸಕ್ತ ವರ್ಷ ಕೇವಲ 14  ಸಾವಿರ ಹೆಕ್ಟೇರ್  ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಹೀಗಾಗಿ ಈ ಸಲವಾದರೂ ಉತ್ತಮವಾಗಿ ಮಳೆ ಸುರಿದು ಕೈ ಹಿಡಿದೀತು ಎಂಬುದು ರೈತರ ಆಶಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.