ಶುಕ್ರವಾರ, ಮೇ 27, 2022
23 °C

ಮಣ್ಣೆತ್ತುಗಳ ಭಕ್ತಿಪೂರ್ವಕ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕಿನ ತಂಗಡಗಿಯಲ್ಲಿ ಬುಧವಾರ ಮಣ್ಣೆತ್ತುಗಳ ವಿಸರ್ಜನೆ ಭಕ್ತಿ, ಶ್ರದ್ಧೆಯಿಂದ ನಡೆಯಿತು.

ಸೋಮವಾರ ಮಣ್ಣೆತ್ತಿನ ಅಮಾವಾಸ್ಯೆಯ ದಿನ ಪ್ರತಿಷ್ಠಾಪಿಸಲಾಗಿದ್ದ ಮೂರು ಅಡಿ ಎತ್ತರದ ಮಣ್ಣೆತ್ತುಗಳನ್ನು ಗ್ರಾಮದ ಕುಂಬಾರ ಓಣಿಯಲ್ಲಿ ಹಾಗೂ ದ್ಯಾಮವ್ವನ ಗುಡಿಯಲ್ಲಿ ಇಟ್ಟು ಮೂರು ದಿನಗಳ ಕಾಲ ಗ್ರಾಮಸ್ಥರು ಪೂಜೆ ಸಲ್ಲಿಸಿದರು.ಗ್ರಾಮದ ಸಣ್ಣ ಮಕ್ಕಳು ಮನೆ ಮನೆಗೆ ಹೋಗಿ ಮಣ್ಣೆತ್ತಿನ ಪಟ್ಟಿ (ಚಂದಾ) ಎತ್ತುವ ಮೂಲಕ ಹಣ ಕೂಡಿಸಿದ್ದರು. ಯುವಕರು ಸೊಂಟಕ್ಕೆ ಗೆಜ್ಜೆ ಸರ, ಗಂಟೆ ಕಟ್ಟಿಕೊಂಡು, ಊರ ತುಂಬಾ ಸದ್ದು ಮಾಡುತ್ತ ಓಡಾಡುತ್ತ ಗದ್ದಲ ಎಬ್ಬಿಸುವುದು ಜನತೆಗೆ ಮನರಂಜನೆ ನೀಡಿತು. ಹನುಮಂತನ ವೇಷ ಧರಿಸಿ, ಗ್ರಾಮಸ್ಥರನ್ನು ಮನರಂಜಿಸುತ್ತ, ಚಂದಾ ಹಣ ಕೊಡಿ, ಇಲ್ಲದಿದ್ದರೆ ಜೋಳ, ಸಜ್ಜಿಯನ್ನಾದರೂ ಕೊಡಿ ಎಂದು ಕೇಳಿ ಪಡೆದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು. ಮೂರು ದಿನಗಳ ಕಾಲ ಇಟ್ಟಿದ್ದ  ಮಣ್ಣೆತ್ತುಗಳಿಗೆ ಬುಧವಾರ ಬೆಳಿಗ್ಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನಂತರ ಡೊಳ್ಳು, ಭಾಜಾ ಭಜಂತ್ರಿ ವಾದ್ಯ ವೈಭವದೊಂದಿಗೆ  ಮೆರವಣಿಗೆ ಮಾಡುವ ಮೂಲಕ ಗೌಡರ ಬಾವಿಯಲ್ಲಿ ವಿಸರ್ಜಿಸಿದರು.ವಿಸರ್ಜನಾ ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರಾದ ಬಸಪ್ಪ ಹುನಗುಂದ,  ಮಹಾಂತೇಶ ಮನಹಳ್ಳಿ, ಶರಣಯ್ಯ ಸಾರಂಗಮಠ, ಮಹಾಂತೇಶ ಅಂಬಿಗೇರ, ದೇವೇಂದ್ರಪ್ಪ ಕಂಬಾರ, ಶಿವನಗೌಡ ಬಿರಾದಾರ, ಮುತ್ತಣ್ಣ ಒಡೆಯರ, ವಸಂತ ಕುಮಾರ ಮನಹಳ್ಳಿ, ಪ್ರಶಾಂತ ತೆಗ್ಗಿನಮಠ, ಗಂಗಾಧರ ಬಡಿಗೇರ, ರಾಜು ಮಡಿವಾಳರ, ಮಹಾದೇವಪ್ಪ ಮನಹಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.