ಬುಧವಾರ, ನವೆಂಬರ್ 13, 2019
18 °C

ಮತಕ್ಕೆ ಮುನ್ನ...

Published:
Updated:
ಮತಕ್ಕೆ ಮುನ್ನ...

ಚುನಾವಣೆಯ ಕಾವು  ಎಲ್ಲೆಡೆ ಹಬ್ಬುತ್ತಿದ್ದಂತೆ ರಾಜಕಾರಣಿಗಳು ಬಿಸಿ ತಟ್ಟಿದವರಂತೆ ಓಡಾಟ ಚುರುಕುಗೊಳಿಸಿದ್ದಾರೆ. ಎಲ್ಲಾ ಪಕ್ಷಗಳ ಹಿರಿಯ ರಾಜಕಾರಣಿಗಳು ಊರೂರು ಸುತ್ತಿ ಮತದಾರನಿಗೆ ಆಶ್ವಾಸನೆಗಳ ಮೂಲಕ ತೇಪೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇಂಥ ಸಂದರ್ಭದಲ್ಲಿ ಚುನಾವಣೆ, ಮತದಾನ, ರಾಜಕೀಯದಾಟಕ್ಕೆ ಸಜ್ಜಾದ ಅಭ್ಯರ್ಥಿಗಳು, ಆಶ್ವಾಸನೆಗಳ ಬಗ್ಗೆ ಜನ ಎಚ್ಚೆತ್ತುಕೊಂಡಿದ್ದಾರೆ. ದುಡ್ಡಿದ್ದವನೇ ದೊಡ್ಡಪ್ಪ ಎಂಬಂತಹ ವ್ಯವಸ್ಥೆಯನ್ನು ಅವರು ಟೀಕಿಸಿದ್ದು ಹೀಗೆ...ಉತ್ತರ ಇನ್ನೂ ನಿಗೂಢ  ಮತದಾರ ಎಚ್ಚೆತ್ತುಕೊಳ್ಳುವವರೆಗೂ ಏನೂ ಬದಲಾಗುವುದಿಲ್ಲ. ಎಲ್ಲ ಕಡೆಯೂ ಭ್ರಷ್ಟತೆ ಇದೆ. ಆದರೆ ನಮ್ಮ ದೇಶ ಮಾತ್ರ ವರ್ಷದಿಂದ ವರ್ಷಕ್ಕೆ ಅಧೋಗತಿಗೆ ಇಳಿಯುತ್ತಿದೆ ಎನ್ನುವುದು ವಿಷಾದ. ಮತದಾರನಿಗೆರೂ.100ರಿಂದ ರೂ.1000 ಕೊಡುವ ಸಂಸ್ಕೃತಿ ಬೆಳೆದಿದೆ. ಕೆಳವರ್ಗದ ಮತದಾರರನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಈ ಜಾಯಮಾನ ವ್ಯಾಪಾರವಾಗುತ್ತಿದೆಯೇ ಎನ್ನುವ ಸಂಶಯ ಕಾಡುತ್ತಿದೆ. ಜಾತಿ-ಹಣವೇ ಪ್ರಾಬಲ್ಯ ಮೆರೆಯುತ್ತಿರುವುದು ಪ್ರಜಾಪ್ರಭುತ್ವದ ದುರದೃಷ್ಟ.ನಾನು ಗಮನಿಸಿದ ಹಾಗೆ ಸಮರ್ಥ ಅಭ್ಯರ್ಥಿಗಳು ಚುನಾವಣೆಗೆ ನಿಂತರೂ ಅವರು ಗೆಲ್ಲುವುದೇ ಇಲ್ಲ. ಅವರಿಗೆ ಸಿಗುವುದು ಕೆಲವೇ ಕೆಲವು ಮತಗಳು ಮಾತ್ರ. ಶೇ 100 ಮತದಾನ ಆಗುವುದು ಇಂದಿನ ಅನಿವಾರ್ಯ. ಒಂದೊಮ್ಮೆ ಅರ್ಹ ಅಭ್ಯರ್ಥಿಯೇ ಇಲ್ಲ ಎಂದಲ್ಲಿ `ಯಾರೂ ಅರ್ಹರಲ್ಲ' ಎಂಬ ಆಯ್ಕೆ ನಮೂದಿಸುವ ಅವಕಾಶ ಇದೆ. ಅಷ್ಟನ್ನಾದರೂ ಮಾಡುವ ಕಾಳಜಿ ಜನರಲ್ಲಿ ಮೂಡಬೇಕಿದೆ.ಈಗಿನ ಪ್ರಕಾರ ಠೇವಣಿ ತುಂಬಿದರಾಯಿತು. ಶಿಕ್ಷಣವೂ ಸೇರಿದಂತೆ ಯಾವ ಅರ್ಹತೆಯ ನಿರ್ಬಂಧವೂ ಆತನಿಗಿಲ್ಲ. ಹೀಗಾಗಿ ವ್ಯವಸ್ಥೆಗಳಲ್ಲೇ ಉತ್ತಮವಾದ ಪ್ರಜಾಪ್ರಭುತ್ವ ಮಾರಕವೇ ಎನಿಸಿದ ಸಂದರ್ಭಗಳೂ ಇದೆ. 

ರಾಜಕೀಯದ ಈಗಿನ ಸ್ಥಿತಿ ಸುಧಾರಿಸುವುದಕ್ಕೆ ಪ್ರಜ್ಞಾವಂತರು ಒಗ್ಗೂಡಬೇಕಿದೆ. ಅರ್ಹ ಅಭ್ಯರ್ಥಿಗೆ ಮತದಾನ ಮಾಡುವುದರ ಬಗ್ಗೆ ಮತದಾರರಲ್ಲಿ ಎಚ್ಚರಿಕೆ ಮೂಡಿಸುವ ತಂಡವೊಂದು ಸೃಷ್ಟಿಯಾಗಬೇಕು. ರಾಜಕೀಯ ಪಕ್ಷಗಳಿಂದಲಂತೂ ಇದನ್ನು ನಿರೀಕ್ಷಿಸುವುದು ಸಾಧ್ಯವೇ ಇಲ್ಲ. ಎಲ್ಲವೂ ಸರಿಹೋಗಬೇಕು. ಈ ಬಗ್ಗೆ ಸಾಕಷ್ಟು ಸಲ ಯೋಚಿಸಿದ್ದೇನೆ. ಆದರೆ ಹೇಗೆ ಎಂಬ ಗೊಂದಲ, ಪ್ರಶ್ನೆಗಳು ಉತ್ತರದ ಹುಡುಕಾಟದಲ್ಲೇ ಉಳಿಯುವಂತೆ ಮಾಡಿವೆ.ನಾನು ಇದುವರೆಗೆ ಮತದಾನ ಮಾಡುವುದನ್ನು ತಪ್ಪಿಸಿಲ್ಲ. ಆದರೆ ಕೆಲವರು ಯಾವ ಪಕ್ಷ ಬಂದರೆ ನಮಗೇನು ಎಂಬ ನಿರ್ಲಕ್ಷ ಭಾವವನ್ನು ಹೊಂದಿದ್ದಾರೆ. ಈ ಮನಸ್ಥಿತಿ ಮೊದಲು ಸರಿಯಾಗಬೇಕು. ಮತದಾನ ನಮ್ಮ ಹಕ್ಕು, ಉತ್ತಮ ಅಭ್ಯರ್ಥಿಯ ಆಯ್ಕೆ ನಮ್ಮ ಕರ್ತವ್ಯ ಎಂಬ ಮನೋಭಾವ ಬೆಳೆಯಬೇಕು. ಕಾನೂನಿನ ಚೌಕಟ್ಟಿನಲ್ಲೇ ಎಲ್ಲ ಅವ್ಯವಸ್ಥೆ ಸರಿಪಡಿಸುವ ಚಿಂತನೆ ನಡೆಯಬೇಕಿದೆ.

   

- ಪಿ.ಶೇಷಾದ್ರಿ,  ಚಿತ್ರ ನಿರ್ದೇಶಕ

ಉತ್ತಮ ಅಭ್ಯರ್ಥಿ ಬರಲಿ

ಮತದಾನದ ಚೀಟಿ ಕಳೆದುಹೋದ ಮೇಲೆ ಮತ್ತೆ ಮಾಡಿಸಿಕೊಳ್ಳಲೇ ಇಲ್ಲ. ಸಮರ್ಥ ಅಭ್ಯರ್ಥಿ ಚುನಾವಣೆಗೆ ನಿಲ್ಲುತ್ತಲೇ ಇಲ್ಲ ಎಂದಮೇಲೆ ಮತದಾನ ಮಾಡಿ ಪ್ರಯೋಜನ ಏನು. ನಮ್ಮ ಕರ್ನಾಟಕದಲ್ಲೇ ನೋಡಿದರೆ ಹೆಚ್ಚಿನವರೆಲ್ಲರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ.ಉತ್ತಮವಾದ ಶೈಕ್ಷಣಿಕ ಹಿನ್ನೆಲೆ ಇರುವವರು, ಅಭಿವೃದ್ಧಿಯ ಚುಕ್ಕಾಣಿ ಹಿಡಿಯುವವರು ರಾಜಕೀಯಕ್ಕೆ ಬರಬೇಕು. ಭಾರತದಲ್ಲಿ ಒಂದು ಚಿಕ್ಕ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದರೂ ಕನಿಷ್ಠ ಶೈಕ್ಷಣಿಕ ಅರ್ಹತೆ ಕೇಳುತ್ತಾರೆ. ಆದರೆ ರಾಜಕೀಯಕ್ಕೆ ಇದ್ಯಾವ ಬಂಧವೂ ಇಲ್ಲ. ಅಪರಾಧದ ಹಿನ್ನೆಲೆಯೇ ಅರ್ಹತೆ ಎನ್ನಿಸುವಂತಿದೆ. ಅಪರಾಧದ ಪ್ರಕರಣ ಇರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೇ ನೀಡಬಾರದು. ಒಂದೊಮ್ಮೆ ಅಪರಾಧ ಸಾಬೀತಾದಲ್ಲಿ ಜೀವನ ಪೂರ್ತಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಡಿವಾಣ ಹಾಕಬೇಕು. ಹೀಗೆ ಆಗುವವರೆಗೂ ಎಲ್ಲವೂ ಸರಿ ಆದೀತು ಎಂಬ ಮಾತೇ ಇಲ್ಲ.ನನ್ನ ಸ್ನೇಹಿತರನೇಕರು ಕೆಲವು ವರ್ಷದ ನಂತರ ರಾಜಕೀಯ ಪ್ರವೇಶಿಸುವ ಮನಸ್ಸು ಹೊಂದಿದ್ದಾರೆ. ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಬುದ್ಧಿವಂತಿಕೆ, ಶೆಕ್ಷಣಿಕ ಹಿನ್ನೆಲೆ ಇರುವವರು ಚುನಾವಣೆಗೆ ನಿಲ್ಲುವವರೆಗೂ ನಾನು ಮತದಾನ ಮಾಡುವುದಿಲ್ಲ. ಆ ಬಗ್ಗೆ ಆಸಕ್ತಿಯೇ ಇಲ್ಲ.

-ಬಸವರಾಜ್
. ಐಟಿ ಉದ್ಯೋಗಿಅಂಟು ಜಾಡ್ಯ ಹೋಗಲಿ

ಜನರಿಗೆ ಶಿಕ್ಷಣ ಕಡಿಮೆ ಇದೆ. ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ನಿರ್ಧರಿಸುವ ಮನಸ್ಥಿತಿ ಇನ್ನೂ ಬಂದಿಲ್ಲ. ಒಂದು ಪಕ್ಷಕ್ಕೆ ಅಂಟಿಕೊಂಡರೆ ಆ ಪಕ್ಷ ಏನೇ ಮಾಡಲಿ ಮತ ಮಾತ್ರ ಅವರಿಗೇ ನೀಡುವುದು ಎಂಬ ಮನಸ್ಥಿತಿ ಇದೆ. ಹೀಗಾಗಿ ಪ್ರಜಾಪ್ರಭುತ್ವ ಹಾದಿ ತಪ್ಪುತ್ತಿದೆ ಎನಿಸುತ್ತದೆ.ರಾಜಕೀಯಕ್ಕೆ ಬಂದ ಕೆಲವೇ ಕೆಲವರು ಮಾತ್ರ ಅಭಿವೃದ್ಧಿ ಕೆಲಸವನ್ನು ಮಾಡುತ್ತಾರೆ. ಇನ್ನು ಕೆಲವರು ಆಶ್ವಾಸನೆ ನೀಡುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಯಾರು ಸಮರ್ಥ ವ್ಯಕ್ತಿ ಎಂದು ನಿರ್ಧರಿಸಿ ಮತದಾನ ಮಾಡುವ ಚಾಣಾಕ್ಷತನ ಜನರಿಗಿರಬೇಕು.ಚುನಾವಣಾ ಪ್ರಕ್ರಿಯೆ ಚೆನ್ನಾಗಿಯೇ ಇದೆ. ಆದರೆ ನಿಧಾನವಾಗಿ ನಡೆಯುತ್ತಿದೆ ಎಂಬ ಬೇಜಾರಿದೆ. ಮತದಾನ ನಡೆಯುವೆಡೆ ಒಂದು ಕಂಪ್ಯೂಟರ್, ಒಂದು ಪ್ರಿಂಟಿಂಗ್ ಮೆಶಿನ್ ಇರುತ್ತದೆ. ಸಾವಿರ ಜನ ಬಂದು ಮತದಾನ ಮಾಡುವಲ್ಲಿ ಇಷ್ಟೇ ಸೌಲಭ್ಯ ಸಾಕಾಗುವುದಿಲ್ಲ. ಅದೂ ಅಲ್ಲದೆ ಅಲ್ಲಿರುವ ಕೆಲವರಿಗೆ ಕಂಪ್ಯೂಟರ್ ಜ್ಞಾನವೇ ಇರುವುದಿಲ್ಲ. ಮತದಾರರ ಗುರುತಿನ ಚೀಟಿಗೆ ಸಂಬಂಧಪಟ್ಟಂತೆ ಸ್ಥಳ ಬದಲಾವಣೆ ಇದ್ದರೆ ಆ ಪ್ರಕ್ರಿಯೆ ಮುಗಿಯುವುದಕ್ಕೆ ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆನ್‌ಲೈನ್ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಎಲ್ಲವೂ ಶೀಘ್ರವಾಗುತ್ತದೆ.ನನಗೆ 18ವರ್ಷ ತುಂಬಿದಾಗಿನಿಂದ ಇದುವರೆಗೂ ಮತದಾನ ಮಾಡುವುದನ್ನು ತಪ್ಪಿಸಿಲ್ಲ. ನಿಲ್ಲುವ ಅಭ್ಯರ್ಥಿಗಳಿಗೂ ಕನಿಷ್ಠ ಶಿಕ್ಷಣವನ್ನು ನಿಗದಿ ಪಡಿಸುವುದರ ಜೊತೆಗೆ ಈ ಮೊದಲು ಅವರು ಸಮಾಜಕ್ಕೆ ಏನು ಒಳಿತು ಮಾಡಿದ್ದಾರೆ ಎನ್ನುವುದೂ ಅರ್ಹತೆ ಆಗಬೇಕು.ರಾಜಕೀಯದಲ್ಲಿ ರಿಸ್ಕ್ ಜಾಸ್ತಿ. ಅದೂ ಅಲ್ಲದೆ ಈಗಾಗಲೇ ಉನ್ನತ ಸ್ಥಾನದಲ್ಲಿರುವವರು ಹೊಸಬರಿಗೆ ಬೆಳೆಯೋಕೆ ಬಿಡುವುದಿಲ್ಲ. ಏನಾದರೊಂದು ತೊಂದರೆ ಮಾಡುತ್ತಾರೆ. ಹೀಗಾಗಿ ಬದುಕನ್ನು ಜಂಜಡ ಮಾಡಿಕೊಂಡು ರಾಜಕೀಯದ ಕಡೆಗೆ ಮುಖ ಮಾಡಲು ಐಟಿ ಉದ್ಯೋಗಿಗಳು ಮನಸ್ಸು ಮಾಡುತ್ತಿಲ್ಲ.

-ಸಂಧ್ಯಾ ಸಿ. ಐಟಿ ಉದ್ಯೋಗಿ

ದುಡ್ಡಿರುವವರಿಗಾಗಿ...

ಪ್ರಜೆಗಳಿಂದ ಪ್ರಜೆಗಳಿಗಾಗಿಯೇ ಇರಬೇಕಾಗಿತ್ತು ಪ್ರಜಾಪ್ರಭುತ್ವ. ಆದರೆ ಇಂದು ದುಡ್ಡಿರುವವರಿಗಾಗಿ ಪ್ರಜಾಪ್ರಭುತ್ವ ಎಂಬಂತಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಸ್ಥಿತಿ ಹದಗೆಟ್ಟಿದೆ.ನಾನು ಇದುವರೆಗೂ ಎಲ್ಲಾ ಚುನಾವಣೆಯಲ್ಲೂ ಮತ ಚಲಾಯಿಸಿದ್ದೇನೆ. ಮೊದಲಿಗೆ ಹೋಲಿಸಿದರೆ ಈಗಿನ ಪ್ರಕ್ರಿಯೆಗಳು ಅಭಿವೃದ್ಧಿಗೊಂಡಿವೆ ಹಾಗೂ ಹಲವಾರು ಅಕ್ರಮಗಳು ತಗ್ಗಿವೆ.     ಪ್ರಾಮಾಣಿಕತೆಯೊಂದರಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎಂಬ ಸಂದರ್ಭ ಈಗಿಲ್ಲ. ದುಡ್ಡಿದ್ದವರಿಗೆ ಮಾತ್ರ ಪ್ರಮುಖ ಪಕ್ಷಗಳ ಟಿಕೆಟ್ ದೊರೆಯುತ್ತದೆ. ಕ್ಷೇತ್ರದಲ್ಲಿ ಕೆಲಸವನ್ನೂ ಮಾಡಿರಬೇಕು, ಕೈತುಂಬಾ ಹಣ ಇರಬೇಕು. ಅಂದರೆ ಮಾತ್ರ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂಬ ಸಂದರ್ಭ ಇಂದಿನದ್ದಾಗಿದೆ.

-ದೇವರಾಜ್ ಎಸ್,ಮೆಡಿಕಲ್ ರೆಪ್ಎಲ್ಲಾ ಸ್ವಾರ್ಥ

ಸಂವಿಧಾನದಲ್ಲಿ ಚುನಾವಣೆ ಹೇಗೆ ನಡೆಯಬೇಕು ಎಂದಿದೆಯೋ ಹಾಗೆಯೇ ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಇದೆಯೋ ಅದನ್ನು ಯಾರೂ ಪಾಲಿಸುತ್ತಿಲ್ಲ. ಸ್ವಾರ್ಥಕ್ಕಾಗಿಯೇ ರಾಜಕಾರಣಕ್ಕೆ ಇಳಿಯುತ್ತಿರುವವರು ಹೆಚ್ಚು. ಯಾರೂ ದೇಶದ ಉದ್ಧಾರ ಮಾಡುವ ಮನಸ್ಥಿತಿಯನ್ನು ಹೊಂದೇ ಇಲ್ಲ. ಆಶ್ವಾಸನೆ ನೀಡಿ ಗೆದ್ದು ಬರುವುದನ್ನು ಬಿಟ್ಟರೆ ಮಾತು ಉಳಿಸಿಕೊಳ್ಳುವ ರಾಜಕಾರಣಿಗಳು ತೀರಾ ಕಡಿಮೆ.ಈಗಿನ ಸಂದರ್ಭ ನೋಡಿದರೆ ಯಾವ ಪಕ್ಷವೂ ಉತ್ತಮವಾಗಿಲ್ಲ. ಕಸದಿಂದ ರಸ ತೆಗೆಯುವ ಸಾಹಸವನ್ನು ಮತದಾರ ಮಾಡಬೇಕಷ್ಟೆ. ಸೂಕ್ತ ಅಭ್ಯರ್ಥಿ ಇಲ್ಲ ಎಂಬುದೇ ನಾನು ಒಂದೆರಡು ಬಾರಿ ಮತದಾನ ಮಾಡದಿರುವುದಕ್ಕೆ ಕಾರಣ.

-ಉಮಾ, ಶಿಕ್ಷಕಿ

 

 

ಪ್ರತಿಕ್ರಿಯಿಸಿ (+)