ಶುಕ್ರವಾರ, ನವೆಂಬರ್ 22, 2019
20 °C

ಮತಗಟ್ಟೆ ಬಳಿ ಚೀಟಿ ವಿತರಣೆಗೆ ಅವಕಾಶ

Published:
Updated:

ಬೆಂಗಳೂರು:  ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲಾಗುವುದು. ಆಯೋಗದ ಕಣ್ಣುತಪ್ಪಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ  ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಎಚ್ಚರಿಕೆ ನೀಡಿದರು.ಈ ಬಾರಿ ಆಯೋಗವೇ ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ `ವೋಟರ್ಸ್‌ ಸ್ಲಿಪ್' ತಲುಪಿಸಲಿದೆ. ಆದರೂ, ರಾಜಕೀಯ ಪಕ್ಷಗಳ ಮನವಿಯಂತೆ ಮತದಾನ ಕೇಂದ್ರದಿಂದ 200 ಮೀಟರ್ ಹೊರಗೆ ಮತದಾರರಿಗೆ ಅವರ ಸಂಖ್ಯೆ ಸೂಚಿಸುವ ಚೀಟಿ ವಿತರಿಸಲು ಪಕ್ಷಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ರಾಜಕೀಯ ಪಕ್ಷ ತನ್ನ ಶಾಮಿಯಾನ ಬಳಿ ಒಂದು ಮೇಜು, ಎರಡು ಕುರ್ಚಿಗಳನ್ನು ಮಾತ್ರ ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಮತಗಟ್ಟೆ ಕೇಂದ್ರಗಳ ಹೊರಗೆ ಸಾರ್ವಜನಿಕರಿಗೆ ಕುಡಿಯುವ ನೀರು ವಿತರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ ಎಂದರು.ಚುನಾವಣೆಗೆ ನಡೆದಿರುವ ಸಿದ್ಧತೆ ಕುರಿತು ಮಂಗಳವಾರ ಇಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು,  ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಂಪತ್ ಸಭೆ ನಡೆಸಿದರು.ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹಣ, ಮದ್ಯ ಸಾಗಾಣಿಕೆ, ಮತದಾರರಿಗೆ ಸೀರೆ, ವಾಚ್ ಇತ್ಯಾದಿ ಉಡುಗೊರೆ ನೀಡಿರುವುದರ ಬಗ್ಗೆ ದೂರುಗಳು ಬಂದಿವೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ, ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಮತದಾರರಿಗೆ ಅಕ್ರಮವಾಗಿ ಹಂಚುವ ಹಣ, ಮದ್ಯ, ಸೀರೆ, ವಾಚ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳುವುದು ಅಷ್ಟೇ ಅಲ್ಲದೆ, ಸಂಬಂಧಪಟ್ಟವರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಐಪಿಸಿ ಕಲಂ 171ರ ಪ್ರಕಾರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದರು.ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಅಗತ್ಯವಿರುವ ಕಡೆ ಸಹಾಯಕ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗುತ್ತದೆ ಎಂದರು.ಅನಧಿಕೃತವಾಗಿ ಗೋದಾಮುಗಳಲ್ಲಿ ಮದ್ಯ ಸಂಗ್ರಹ ಮಾಡಿರುವುದು, ಅಕ್ರಮವಾಗಿ ಹಂಚಿಕೆ ಮಾಡುವುದರ ಬಗ್ಗೆ ನಿಗಾ ವಹಿಸಿ, ಅಂತಹ ಪ್ರಕರಣಗಳು ಕಂಡುಬಂದರೆ ವಶಪಡಿಸಿಕೊಳ್ಳುವಂತೆ ಅಬಕಾರಿ ಆಯುಕ್ತರಿಗೆ ಸೂಚಿಸಲಾಗಿದೆ. ಎಲ್ಲ ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಅಧಿಕ ಮೊತ್ತದ ನಗದು ಸಾಗಿಸುವುದರ ಮೇಲೆ ನಿಗಾವಹಿಸಲಿದ್ದಾರೆ. ವಿಮಾನ ನಿಲ್ದಾಣ ಸೇರಿದಂತೆ ಹೊರ ರಾಜ್ಯಗಳಿಂದ ಹಣ ಸಾಗಣೆ ಆಗುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸಲಿದ್ದಾರೆ ಎಂದು ತಿಳಿಸಿದರು.ಇಂತಹ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950ಕ್ಕೆ ದೂರು ಸಲ್ಲಿಸಬಹುದು. ಯಾವುದೇ ರೀತಿಯ ದೂರುಗಳು, ಸಲಹೆಗಳು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ದೂರು ದಾಖಲಿಸುವ ಮೂಲಕ ಆಯೋಗದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.ವೀಕ್ಷಕರಿಗೆ ಸ್ಥಳೀಯ ಸಿಮ್‌ಕಾರ್ಡ್‌ಗಳನ್ನು ನೀಡಲಾಗಿದೆ. ಅವರ ಮೊಬೈಲ್ ಸಂಖ್ಯೆಗಳನ್ನು ಸ್ಥಳೀಯವಾಗಿ ಪ್ರಕಟಿಸಲಾಗುತ್ತದೆ. ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡು ಬಂದರೆ ಸಾರ್ವಜನಿಕರು ವೀಕ್ಷಕರ ಗಮನಕ್ಕೆ ತರಬಹುದು. ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು ಅಂತಹ ಕಡೆ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗುತ್ತದೆ ಎಂದರು.ಚುನಾವಣಾ ಪೂರ್ವ ನಡೆಯುವ ಜನಾಭಿಪ್ರಾಯ ಸಮೀಕ್ಷೆಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಮತದಾನ ಆರಂಭವಾಗುವ 48 ಗಂಟೆಗೂ ಮುನ್ನ ಮತ್ತು ಮತದಾನ ಮುಗಿದ ನಂತರ ಯಾವುದೇ ಸಮೀಕ್ಷೆ  ನಡೆಸುವಂತಿಲ್ಲ ಎಂದು ಅವರು ಹೇಳಿದರು.ಏಕ ಗವಾಕ್ಷಿ ಪದ್ಧತಿ: ಚುನಾವಣಾ ರ‌್ಯಾಲಿ, ಮೆರವಣಿಗೆ, ಬಹಿರಂಗ ಸಭೆಗಳು ಇತ್ಯಾದಿಗಳನ್ನು ನಡೆಸಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವುದಕ್ಕೆ ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗುವುದು. ಅನುಮತಿ ಕೋರಿ ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಅರ್ಜಿಯನ್ನು ಇತ್ಯರ್ಥಪಡಿಸಲಾಗುವುದು ಎಂದರು.ಅಂಚೆ ಮೂಲಕ ಮತದಾನ: ಚುನಾವಣಾ ಕಾರ್ಯದಲ್ಲಿ ಭಾಗಿಯಾಗುವ ಸಿಬ್ಬಂದಿಗೆ ತರಬೇತಿ ದಿನವೇ ಮತಪತ್ರ ನೀಡಲಾಗುವುದು. ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತದಾರರಿಗೂ ಅಂಚೆ ಮೂಲಕ ಮತಪತ್ರಗಳನ್ನು ಕಳುಹಿಸಲಾಗುವುದು. ಶೇ 100ರಷ್ಟು ಪ್ರಮಾಣದಲ್ಲಿ ಅಂಚೆ ಮತದಾನ ಆಗಬೇಕು ಎಂಬುದು ಆಯೋಗದ ಆಶಯವಾಗಿದೆ ಎಂದು ತಿಳಿಸಿದರು.ಕೆಲವೆಡೆ ಅಭ್ಯರ್ಥಿಗಳ ಸಂಬಂಧಿಕರೇ ಚುನಾವಣಾಧಿಕಾರಿಗಳಾಗಿರುವ ಕುರಿತು ಪ್ರಶ್ನಿಸಿದಾಗ, ಅಂತಹ ಪ್ರಕರಣಗಳು ಇದ್ದರೆ ಅಧಿಕಾರಿಗಳನ್ನು ಬದಲಾಯಿಸಲಾಗುವುದು ಎಂದು ಆಯುಕ್ತ ಎಚ್.ಎಸ್.ಬ್ರಹ್ಮ ಹೇಳಿದರು. ಮತ್ತೊಬ್ಬ ಆಯುಕ್ತ ಡಾ.ಸೈಯದ್ ನಸೀಂ ಅಹ್ಮದ್ ಜೈದಿ, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)