ಶುಕ್ರವಾರ, ನವೆಂಬರ್ 22, 2019
25 °C

ಮತದಾನಕ್ಕೆ ಪಾಲಕರ ಪ್ರತಿಜ್ಞೆ!

Published:
Updated:

ಯಾದಗಿರಿ: ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಚುನಾವಣಾ ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆ ಕಡಿಮೆ ಮತದಾನ ಆಗಿರುವ ಕ್ಷೇತ್ರಗಳ ಬಗ್ಗೆ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿದೆ., ಬೀದಿ ನಾಟಕ, ಸೇರಿದಂತೆ ಹಲವಾರು ಮಾಧ್ಯಮಗಳ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಯಾದಗಿರಿ ಜಿಲ್ಲೆಯಲ್ಲಿ, ಮತದಾನ ಮಾಡುವ ಕುರಿತು ಪಾಲಕರಿಂದ ಪ್ರತಿಜ್ಞೆ ಮಾಡಿಸಲಾಗುತ್ತಿದೆ! ಶಾಲೆಯ ಮಕ್ಕಳು ತಮ್ಮ ಪಾಲಕರಿಂದ ಮತದಾನ ಮಾಡುವ ಕುರಿತಾದ ಪ್ರಮಾಣ ಪತ್ರಕ್ಕೆ ಸಹಿ ಹಾಕಿಸುತ್ತಿದ್ದಾರೆ.ಇಂತಹ ವಿನೂತನ ಪ್ರಯೋಗ ಕಳೆದ ಎರಡು ತಿಂಗಳ ಹಿಂದೆಯೇ ಜಿಲ್ಲೆಯಲ್ಲಿ ಆರಂಭವಾಗಿದೆ. ಶಾಲೆಗಳು ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸುಮಾರು ಒಂದು ಲಕ್ಷ ಇಂತಹ ಪ್ರಮಾಣ ಪತ್ರಗಳನ್ನು ಮುದ್ರಿಸಿ, ಮಕ್ಕಳಿಗೆ ವಿತರಿಸಲಾಗಿದೆ. ಅದರಲ್ಲಿ ಸುಮಾರು 30 ಸಾವಿರ ಪತ್ರಗಳು ಪಾಲಕರ ಸಹಿಯೊಂದಿಗೆ ಮರಳಿ ಬಂದಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಪತ್ರದಲ್ಲಿ ಏನಿದೆ?: ಮತದಾನ ಮಾಡುವ ಬಗ್ಗೆ ಪಾಲಕರು ಪ್ರಮಾಣ ಮಾಡುವ ಪತ್ರವನ್ನು ಮುದ್ರಿಸಲಾಗಿದ್ದು, ಅದರಲ್ಲಿ ವಿದ್ಯಾರ್ಥಿಯ ಹೆಸರು, ತರಗತಿ, ಶಾಲೆಯ ಹೆಸರುಗಳನ್ನು ನಮೂದಿಸಬೇಕು. ಬಲಬದಿಯಲ್ಲಿ ಅವರ ಪಾಲಕರ ಸಹಿ ಹಾಕಿಸಬೇಕು.ಇನ್ನು ಈ ಪತ್ರದಲ್ಲಿರುವ ಸಾರಾಂಶವೆಂದರೆ, “ಮತದಾನ ನನ್ನ ಸಂವಿಧಾನ ಬದ್ಧ ಹಕ್ಕು. ಮತದಾನದ ದಿನದಂದು ನಾನು ತಪ್ಪದೇ ಮತದಾನ ಮಾಡುತ್ತೇನೆ” ಎಂದು ಬರೆಯಲಾಗಿದೆ.ಇದರ ಜೊತೆಗೆ “ಮತದಾನ ಮಾಡಲು ಯಾವುದೇ ಆಮಿಷಗಳಿಗೆ ಒಳಗಾಗುವುದಿಲ್ಲ. ಯಾವ ಬೆದರಿಕೆಗೂ ಬಗ್ಗುವುದಿಲ್ಲ.

ನಾನೂ ಮತದಾನ ಮಾಡುತ್ತೇನೆ. ನಮ್ಮ ಮನೆಯವರು, ನೆರೆಹೊರೆಯವರನ್ನು ಮತದಾನ ಮಾಡಲು ಪ್ರೇರೇಪಿಸುತ್ತೇನೆ. ಮತದಾನಕ್ಕೆ ಯಾರ ವಾಹನ ಬಳಸುವುದಿಲ್ಲ. ನಾನು ಮೌಲ್ಯಾಧಾರಿತ ಮತದಾನ ಮಾಡಿ, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ, ನನ್ನ ಶಕ್ತಿ ತೋರಿಸುತ್ತೇನೆ” ಎಂಬ ಸಾಲುಗಳನ್ನು ಬರೆಯಲಾಗಿದೆ.ಮತದಾನದ ಮಹತ್ವದ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಜಿಲ್ಲಾಡಳಿತ, ಮಕ್ಕಳ ಮೂಲಕ ಪಾಲಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.ಈ ಪತ್ರಗಳನ್ನು ವಿತರಿಸುವ ಮೂಲಕ ಭಾವಿ ಪ್ರಜೆಗಳಾದ ಮಕ್ಕಳಲ್ಲಿಯೂ ಚುನಾವಣೆ, ಮತದಾನದ ಮಹತ್ವ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತಿಳಿವಳಿಕೆ ನೀಡಿದಂತಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)