ಮತದಾನಕ್ಕೆ ಮೊದಲೇ ಒಂದಿಷ್ಟು ಭವಿಷ್ಯದ ನುಡಿಗಳು...

7

ಮತದಾನಕ್ಕೆ ಮೊದಲೇ ಒಂದಿಷ್ಟು ಭವಿಷ್ಯದ ನುಡಿಗಳು...

Published:
Updated:

ಲಖನೌ: ಉತ್ತರ ಪ್ರದೇಶದ ಚುನಾವಣೋತ್ತರ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದಿಷ್ಟು `ಭವಿಷ್ಯದ ನುಡಿ~ಗಳನ್ನು  ಮತದಾನದ ಮೊದಲೇ ಹೇಳಿ ಬಿಡಬಹುದು. ಮೊದಲನೆಯದಾಗಿ ಮೊದಲೆರಡು ಸ್ಥಾನಗಳ ಗುಂಪಿನಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಕೊನೆಯ ಎರಡು ಸ್ಥಾನಗಳ ಗುಂಪಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಸ್ಥಾನಗಳು ಭದ್ರವಾಗಿವೆ. ಮೊದಲ ಮತ್ತು ಕೊನೆಯ ಗುಂಪುಗಳಲ್ಲಿ  ಪ್ರಥಮ ಮತ್ತು ದ್ವಿತೀಯ ಯಾರೆನ್ನುವುದಷ್ಟೇ ಈ ತಿಂಗಳ ಎಂಟರಿಂದ ಮಾರ್ಚ್ ಮೂರರವರೆಗೆ ಏಳು ಹಂತಗಳಲ್ಲಿ ನಡೆಯಲಿರುವ ಮತದಾನದಿಂದ ನಿರ್ಧಾರವಾಗಲಿದೆ.ಎರಡನೆಯದಾಗಿ ಮುಂದಿನ ವಿಧಾನಸಭೆಯಲ್ಲಿ ಬಿಎಸ್‌ಪಿಯೊಂದನ್ನು ಹೊರತುಪಡಿಸಿ ಉಳಿದ ಮೂರು ಪಕ್ಷಗಳಾದ ಸಮಾಜವಾದಿ ಪಕ್ಷ,ಕಾಂಗ್ರೆಸ್ ಮತ್ತು ಬಿಜೆಪಿ ತನ್ನ ಸದಸ್ಯ ಬಲವನ್ನು ಖಂಡಿತ ಹೆಚ್ಚಿಸಿಕೊಳ್ಳಲಿವೆ. ಕಳೆದ ಚುನಾವಣೆಯ ಹೋಲಿಕೆಯಲ್ಲಿ ಹೆಚ್ಚು ಲಾಭವಾಗಲಿರುವುದು ಸಮಾಜವಾದಿ ಪಕ್ಷಕ್ಕೆ. ಲಾಭ ಗಳಿಕೆಯ ಎರಡನೆ ಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಮೂರನೆ ಸ್ಥಾನದಲ್ಲಿ ಬಿಜೆಪಿ ಇವೆ.

 

ಬಿಎಸ್‌ಪಿ ಉಳಿದ ಪಕ್ಷಗಳಿಂದ ಹೆಚ್ಚು ಸ್ಥಾನ ಗಳಿಸಿದರೂ ಕಳೆದ ಬಾರಿಯ ಸಾಮಾನ್ಯ ಬಹುಮತದ ಸದಸ್ಯ ಬಲವನ್ನು (206 ಸ್ಥಾನ) ಉಳಿಸಿಕೊಳ್ಳಲು ಸಾಧ್ಯವಾಗದು, ಉಳಿದ ಪಕ್ಷಗಳು ಸಾಮಾನ್ಯ ಬಹುಮತವನ್ನೂ ಗಳಿಸುವ ಸಾಧ್ಯತೆ ಇಲ್ಲ. 1991ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಮಾನ್ಯ ಬಹುಮತ (221 ಸ್ಥಾನ) ಗಳಿಸಿ ಸರ್ಕಾರ ರಚಿಸಿತ್ತು. ಅದರ ನಂತರದ ಮೂರು ಚುನಾವಣೆಗಳಲ್ಲಿ ಯಾವ ಪಕ್ಷ ಕೂಡಾ ಸಾಮಾನ್ಯ ಬಹುಮತ ಕೂಡಾ ಗಳಿಸಿರಲಿಲ್ಲ. 2007ರಲ್ಲಿ ಬಿಎಸ್‌ಪಿ ಸ್ವಂತಬಲದಿಂದ ಸರ್ಕಾರ ರಚಿಸಿತ್ತು.ಮೂರನೆಯದಾಗಿ ಚುನಾವಣೋತ್ತರ ಮೈತ್ರಿ. ಕಾಂಗ್ರೆಸ್ ಮತ್ತು ಬಿಜೆಪಿ ಹಾಗೂ ಬಿಎಸ್‌ಪಿ ಮತ್ತು ಎಸ್‌ಪಿ ನಡುವೆ ಮೈತ್ರಿ ನಡೆಯುವ ಸಂಭವವೇ ಇಲ್ಲ. ಬಿಎಸ್‌ಪಿ ಮತ್ತು ಎಸ್‌ಪಿಗಳೆರಡೂ ಕಾಂಗ್ರೆಸ್ ಇಲ್ಲವೇ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬಹುದು. ಎಸ್‌ಪಿ-ಬಿಜೆಪಿ ಮೈತ್ರಿ ಸ್ವಲ್ಪ ಕಷ್ಟವೇ ಆದರೂ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗದು. ಹೆಚ್ಚು ಸಾಧ್ಯತೆ ಇರುವ ಮೈತ್ರಿ ಎಂದರೆ ಎಸ್‌ಪಿ ಮತ್ತು ಕಾಂಗ್ರೆಸ್ ಇಲ್ಲವೇ ಬಿಎಸ್‌ಪಿ ಮತ್ತು ಬಿಜೆಪಿ.ನಾಲ್ಕನೆಯದಾಗಿ ಚುನಾವಣಾ ಫಲಿತಾಂಶ ಏನೇ ಬಂದರೂ ಮಾಯಾವತಿ ಇಲ್ಲವೇ ಮುಲಾಯಂಸಿಂಗ್ ಯಾದವ್ ಮಾತ್ರ ಉತ್ತರಪ್ರದೇಶದ ಮುಂದಿನ ಮುಖ್ಯಮಂತ್ರಿ ಆಗಬಹುದು ಎನ್ನುವುದನ್ನೂ ಮತದಾನದ ಮೊದಲೇ ಹೇಳಿಬಿಡಬಹುದು. ಎಂತಹ `ಚುನಾವಣಾ ಪವಾಡ~ ನಡೆದರೂ ಬಿಜೆಪಿ ಇಲ್ಲವೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ್ಯಾರೂ ಮುಖ್ಯಮಂತ್ರಿ ಕುರ್ಚಿಯ ಸಮೀಪವೂ ಸುಳಿಯಲು ಸಾಧ್ಯ ಇಲ್ಲ.ಐದನೆಯದಾಗಿ ರಾಜ್ಯಪಾಲರ `ರಾಜಕೀಯ~ ನಡೆಯದೆ ಹೋದರೆ ಮೊದಲ ಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದ ಪಕ್ಷ ಎರಡನೇ ಗುಂಪಿನಲ್ಲಿರುವ ಒಂದು ಪಕ್ಷದ ಜತೆ ಸೇರಿಕೊಂಡು ಸರ್ಕಾರ ರಚಿಸುವುದು ಕೂಡಾ ಖಾತರಿ. ಆದರೆ ರಾಜ್ಯಪಾಲರು ತನ್ನ `ವಿವೇಚನಾ ಶಕ್ತಿ~ ಬಳಕೆಯ ರಾಜಕೀಯ ಮಾಡಲು ಹೊರಟರೆ ಮೊದಲ ಗುಂಪಿನಲ್ಲಿ ಎರಡನೆ ಸ್ಥಾನ ಪಡೆದ ಪಕ್ಷ, ಎರಡನೆ ಗುಂಪಿನಲ್ಲಿರುವ ಯಾವುದಾದರೂ ಒಂದು ಪಕ್ಷದ ಬೆಂಬಲ ತನಗಿದೆ ಎಂದು ಹೇಳಿದಾಗ ಅದಕ್ಕೆ ಅವಕಾಶ ನೀಡಲೂಬಹುದು ಇಲ್ಲವೇ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲೂಬಹುದು.1996ರ ವಿಧಾನಸಭಾ ಚುನಾವಣೆ `ತ್ರಿಶಂಕು~ ಸ್ಥಿತಿಯ ಫಲಿತಾಂಶ ನೀಡಿದಾಗ ಆಗಿನ ರಾಜ್ಯಪಾಲ ರೋಮೇಶ್ ಭಂಡಾರಿ ಅವರು ಸ್ಪಷ್ಟ ಬಹುಮತ ಹೊಂದಿಲ್ಲದ ಆದರೆ, ಅತ್ಯಧಿಕ ಸದಸ್ಯ ಬಲ ಹೊಂದಿದ್ದ ಸಮಾಜವಾದಿ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸದೆ ರಾಷ್ಟ್ರಪತಿ ಆಳ್ವಿಕೆ ಹೇರಿದ್ದ ಪೂರ್ವನಿದರ್ಶನವೊಂದು ಇದೆ.ಈ ಬಾರಿಯೂ ಯಾವುದೇ ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಗಳಿಸುವ ಸಾಧ್ಯತೆ ಅತ್ಯಂತ ಕ್ಷೀಣವಾಗಿರುವುದರಿಂದ ರಾಜ್ಯಪಾಲರ ಇಂತಹ ಆಟಕ್ಕೆ ಅವಕಾಶ ಇದ್ದೇ ಇದೆ. ಒಂದು ಪಕ್ಷ ಗಳಿಸಿದ ಸದಸ್ಯ ಬಲವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಎರಡು ಪಕ್ಷಗಳ ಒಟ್ಟು ಸದಸ್ಯ ಬಲವನ್ನು ಲೆಕ್ಕಕ್ಕೆ ತೆಗೆದುಕೊಂಡು ಸರ್ಕಾರ ರಚನೆಗೆ ಆಹ್ವಾನಿಸಲೂಬಹುದು. ಇದರ ಲಾಭವನ್ನು ಸಮಾಜವಾದಿ ಮತ್ತು ಕಾಂಗ್ರೆಸ್ ಪಡೆಯುವ ಅವಕಾಶವೇ ಹೆಚ್ಚಾಗಿದೆ.ಇಷ್ಟು ಹೇಳಿದ ನಂತರ ಹತ್ತಾರು ಪಕ್ಷಗಳು ಕಣದಲ್ಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನವಾಗಿರುವ ಎರಡು ಗುಂಪುಗಳನ್ನು ಸುಲಭದಲ್ಲಿ ಗುರುತಿಸಿಬಿಡಬಹುದು. ಇವುಗಳಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷವನ್ನೊಳಗೊಂಡ `ಅದೃಶ್ಯ ಗುಂಪು~ ನಡುವೆ ರಹಸ್ಯ ಒಪ್ಪಂದವೇರ್ಪಟ್ಟಿದೆ ಎನ್ನುವ ಪಿಸುಮಾತುಗಳು ಚುನಾವಣೆ ಘೋಷಣೆ ಮೊದಲೇ ಕೇಳಿಬರುತ್ತಿತ್ತು.ಈ ಎರಡು ಪಕ್ಷಗಳಲ್ಲಿನ ಯುವನಾಯಕರಾದ ರಾಹುಲ್‌ಗಾಂಧಿ ಮತ್ತು ಅಖಿಲೇಶ್ ಯಾದವ್ ನಡುವಿನ ಸಂಬಂಧ ಕೂಡಾ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಆದರೆ ಇಂತಹದ್ದೇ ಒಳಒಪ್ಪಂದ ಮೇಲ್ನೋಟಕ್ಕೆ ಬಿಎಸ್‌ಪಿ ಮತ್ತು ಬಿಜೆಪಿ ನಡುವೆ ಇಲ್ಲವೇ ಎಸ್‌ಪಿ ಮತ್ತು ಬಿಜೆಪಿ ನಡುವೆ ಕಾಣುತ್ತಿಲ್ಲ. ಪ್ರಧಾನವಾಗಿ ಕಣದಲ್ಲಿರುವ ನಾಲ್ಕು ಪಕ್ಷಗಳಲ್ಲಿ ಬಿಎಸ್‌ಪಿಯೊಂದೇ ಬೇರೆ ಯಾವ ಪಕ್ಷದ ಜತೆಯಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳದೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿರುವುದು.ಈ ಕಾರಣದಿಂದಾಗಿಯೇ ಕಾಂಗ್ರೆಸ್ ಮತ್ತು ಎಸ್‌ಪಿ ನಡುವೆ `ಒಳ ಒಪ್ಪಂದ~ವಾಗಿದೆ ಎನ್ನುವ ಆರೋಪವನ್ನು ಬಿಎಸ್‌ಪಿ ನಾಯಕಿ ಮಾಯಾವತಿಯವರು ಹೆಚ್ಚು ಧೈರ್ಯದಿಂದ ಹೇಳಲು ಸಾಧ್ಯವಾಗಿರುವುದು.

ಇದು ನಾಲ್ಕು ಪಕ್ಷಗಳ ಮೂಲಭೂತ ಗುಣಸ್ವಭಾವ, ಅವುಗಳ ಹಿಂದಿನ ನಡವಳಿಕೆ ಮತ್ತು ಪೂರ್ವನಿದರ್ಶನಗಳನ್ನು ಆಧರಿಸಿ ನುಡಿಯಬಹುದಾದ `ಭವಿಷ್ಯ~. ಲಖನೌ ರೈಲು ನಿಲ್ದಾಣದಲ್ಲಿ ಫೈಜಾಬಾದ್ ರೈಲಿಗೆ ಕಾಯುತ್ತಾ ಕೂತಿದ್ದಾಗ ಕಾಲಹರಣ ಮಾಡಲೆಂದು ನನ್ನ ತಲೆಯಲ್ಲಿದ್ದ ಈ ಮೇಲಿನ ವಿಶ್ಲೇಷಣೆಯನ್ನು ಅಲ್ಲಿಯೇ ಬೆಂಚಿನಲ್ಲಿ ನನ್ನಂತೆ ರೈಲಿಗಾಗಿ ಕಾಯುತ್ತಾ ಕೂತಿದ್ದವನ ಮುಂದೆ ಒಪ್ಪಿಸಿದೆ. ಗೋಂಡಾ ಕಡೆ ಹೋಗಲು ರೈಲಿಗಾಗಿ ಕಾಯುತ್ತ ಇದ್ದ ಆತನ ಹೆಸರು ರಾಮಚರಣ್ ಫಾಸಿ, ವೃತ್ತಿಯಲ್ಲಿ ರೈತ. ಸುಮ್ಮನೇ ಕೇಳುತ್ತಾ ಇದ್ದ ಆತ  `ಆಪ್ ಪತ್ರಕಾರ್ ಹೈ ಕ್ಯಾ?~ ಎಂದು ನನ್ನನ್ನು ಗೇಲಿ ಮಾಡುವಂತೆ ನಕ್ಕ.`ಹೌದು ನಾನೊಬ್ಬ ಪತ್ರಕರ್ತ, ಯಾಕೆ ಆ ಪ್ರಶ್ನೆ ಕೇಳಿದೆ~ ಎಂದು ನಾನು ಪ್ರಶ್ನಿಸಿದೆ. ` ಮೈನೇ ಸಮಜ್ ಗಯಾ. ಯೇ ಸಬ್ ಸೋಚ್ ಸಮಜ್‌ಕೆ ಲಿಕ್‌ನಾ ಆಪ್ ಕಾ ಕಾಮ್ ಹೈ. ಮುಜೆ ಇತ್‌ನಾ ಸೋಚನೆ ಕೀ ಜರೂರತ್ ನಹೀಂ ಹೈ ಸಿರ್ಪ್ ಏಕ್ ಓಟ್ ದೇನಾ ಹೈ~ ( ಇದನ್ನೆಲ್ಲ ಯೋಚಿಸಿ ಅರ್ಥಮಾಡಿಕೊಳ್ಳುವುದು ನಿಮ್ಮ (ಪತ್ರಕರ್ತರದ್ದು) ಕೆಲಸ, ನನಗೆ ಅದರ ಅಗತ್ಯ ಇಲ್ಲ. ನನಗಿರುವ ಒಂದು ಮತ ಚಲಾಯಿಸುವುದಷ್ಟೇ ನನ್ನ ಕೆಲಸ) ಎಂದು ಮುಖಕ್ಕೆ ಹೊಡೆದವನಂತೆ ಹೇಳಿ ಆಗಷ್ಟೆ ಬಂದ ರೈಲು ಹತ್ತಲು ಬಿರಬಿರನೆ ನಡೆದುಹೋದ.ಉತ್ತರದ ಹುಡುಕಾಟಕ್ಕೆ ಹೊರಟ ನನಗೆ ಅವನಲ್ಲಿ ಕೇಳಲು ಇನ್ನಷ್ಟು ಪ್ರಶ್ನೆಗಳಿದ್ದವು. ಆದರೆ ಆತ ಇನ್ನಷ್ಟು ಪ್ರಶ್ನೆಗಳನ್ನು ನನ್ನ ಮುಖಕ್ಕೆ ಎಸೆದು ಹೋಗಿದ್ದ. ಅವನ ಮಾತಿನ ಹೊಡೆತದಿಂದ ಸಾವರಿಸಿಕೊಂಡು ನನ್ನ ರೈಲಿಗಾಗಿ ಕಾಯುತ್ತಾ ಕೂತೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry