ಸೋಮವಾರ, ನವೆಂಬರ್ 18, 2019
22 °C
ಧಾರವಾಡದಿಂದ ಬೆಂಗಳೂರಿಗೆ ವಿದ್ಯಾರ್ಥಿಗಳ ಪಯಣ

ಮತದಾನ ಜಾಗೃತಿಗೆ ಬೈಸಿಕಲ್ ಯಾತ್ರೆ

Published:
Updated:
ಮತದಾನ ಜಾಗೃತಿಗೆ ಬೈಸಿಕಲ್ ಯಾತ್ರೆ

ದಾವಣಗೆರೆ: ಮತದಾರರಲ್ಲಿ ಜಾಗೃತಿ ಮೂಡಿಸಲು ಧಾರವಾಡದಿಂದ ಬೆಂಗಳೂರಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ `ಬೈಸಿಕಲ್ ಯಾತ್ರೆ'ಯನ್ನು ಭಾನುವಾರ ನಗರದಲ್ಲಿ ಸ್ವಾಗತಿಸಲಾಯಿತು.ಧಾರವಾಡದ ಬಾಲಬಳಗ ಶಾಲೆಯ ವಿದ್ಯಾರ್ಥಿಗಳಾದ ವೈಶಾಖ ಮೆಹೆಂದಳೆ ಹಾಗೂ ವಿನಯಕುಮಾರ ಮೆಹೆಂದಳೆ ಏ. 13ರಂದು ಈ ಯಾತ್ರೆ ಹಮ್ಮಿಕೊಂಡಿದ್ದಾರೆ. ಮತದಾರರಲ್ಲಿ ಜಾಗೃತಿ ಮೂಡಿಸುವುದು, ಪರಿಸರ ಸಂರಕ್ಷಣೆ, ದುಶ್ಚಟ ನಿವಾರಣೆ, ಭ್ರಷ್ಟಾಚಾರ ವಿರೋಧಿ ಸಂದೇಶ ನೀಡುವುದು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು, ಒಳ್ಳೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುವುದು ಈ ಯಾತ್ರೆಯ ಉದ್ದೇಶ ಎಂದು ವೈಶಾಖ ಮೆಹೆಂದಳೆ ವಿವರಿಸಿದರು.ಪ್ರತಿದಿನ ಸುಮಾರು 90ರಿಂದ 100 ಕಿಲೋಮೀಟರ್ ಬೈಸಿಕಲ್ ಯಾತ್ರೆ ಮಾಡುತ್ತೇವೆ. ಮಾರ್ಗಮಧ್ಯೆ ಸಿಗುವ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸಾರ್ವಜನಿಕರೊಂದಿಗೆ ಮಾತನಾಡುವುದು, ಮತದಾನ ಅರಿವು ಕುರಿತ ಕರಪತ್ರ ಹಂಚುವ ಕೆಲಸ ಮಾಡುತ್ತೇವೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಯಾತ್ರೆ ನಡೆಸಿ ಬಳಿಕ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗುತ್ತೇವೆ. ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿ ಮತ್ತೆ ಯಾತ್ರೆ ಮುಂದುವರಿಸುತ್ತೇವೆ ಎಂದು ಅವರು ವಿವರಿಸಿದರು.ಶಾಲೆಯ ಹಳೇ ವಿದ್ಯಾರ್ಥಿ ಶರತ್ ಅಂಚಟಗೇರಿ ಅವರು ಕಳೆದ ವರ್ಷ ಮುಂಬೈಗೆ ಬೈಸಿಕಲ್‌ನಲ್ಲಿ ಯಾತ್ರೆ ಕೈಗೊಂಡಿದ್ದರು. ಅವರ ಸ್ಫೂರ್ತಿಯಿಂದ ನಾವು ಈ ಯಾತ್ರೆ ಕೈಗೊಂಡಿದ್ದೇವೆ. ಸುಮ್ಮನೆ ಬರುವ ಬದಲು ಕೈಲಾದಷ್ಟು ಸಂದೇಶ ನೀಡುವ ಉದ್ದೇಶ ಹೊಂದಿರವುದಾಗಿ ವೈಶಾಖ ತಿಳಿಸಿದರು.ಪಾಲಿಕೆ ಆವರಣದಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪ್ರಭುದೇವ್, ಪಾಲಿಕೆ ಉಪ ಆಯುಕ್ತ ಡಾ.ಮಹಾಂತೇಶ್, ಜಿಲ್ಲಾ ಪಂಚಾಯ್ತಿ ವ್ಯವಸ್ಥಾಪಕ ಟಿ. ದಿವಾಕರ ರೆಡ್ಡಿ, ಕಂದಾಯ ನಿರೀಕ್ಷಕ ಕೆ. ಬಸವರಾಜು, ಪ್ರಭು, ಗುರುಮೂರ್ತಿ ಹಾಜರಿದ್ದು ಯಾತ್ರೆಯನ್ನು ಸ್ವಾಗತಿಸಿದರು. ಸಏ. 15ರಂದು ಯಾತ್ರೆ ಚಿತ್ರದುರ್ಗಕ್ಕೆ ತೆರಳಲಿದೆ.

ಪ್ರತಿಕ್ರಿಯಿಸಿ (+)