ಭಾನುವಾರ, ನವೆಂಬರ್ 17, 2019
24 °C

ಮತದಾನ ಜಾಗೃತಿ ಅಭಿಯಾನ

Published:
Updated:

ಯಲಹಂಕ: ಬೆಂಗಳೂರು ನಗರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ವ್ಯವಸ್ಥಿತ ಶಿಕ್ಷಣದ ಮೂಲಕ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಗ್ರಾಮದ ನಾಡಕಚೇರಿ ಆವರಣದಲ್ಲಿ ಕ್ಷೇತ್ರದ ಚುನಾವಣಾಧಿಕಾರಿ ಜಿ.ಆರ್.ಹರಿಶಿಲ್ಪ ಗುರುವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಈಚಿನ ಚುನಾವಣೆಗಳಲ್ಲಿ ನಗರ ಪ್ರದೇಶದಲ್ಲಿ ಶೇಕಡಾವಾರು ಮತದಾನದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಗುರುತಿನ ಚೀಟಿ ಇಲ್ಲದಿರುವುದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗದಿರುವುದು ಹಾಗೂ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡದಿರುವುದು ಇದಕ್ಕೆ ಕಾರಣ. ಇದನ್ನು ನಿವಾರಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೆ ಇರುವವರ ಸಂಖ್ಯೆ ಹೆಚ್ಚಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಗರ ಜಿಲ್ಲಾ ಉಪನಿರ್ದೇಶಕ ರಮೇಶ್ ಹಾಲಬಾವಿ ಮಾತನಾಡಿ, 18 ವರ್ಷ ದಾಟಿದವರು ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಆಸಕ್ತಿಯನ್ನು ಉಂಟುಮಾಡುವುದು ಅತ್ಯಂತ ಅವಶ್ಯ. ಈ ನಿಟ್ಟಿನಲ್ಲಿ ಜನರಲ್ಲಿ ಕುತೂಹಲ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.ಗುರುವಾರ ಬಾಗಲೂರು ಚಿಕ್ಕಜಾಲ ಮತ್ತು ಬೆಟ್ಟಹಲಸೂರು ಗ್ರಾಮಗಳಲ್ಲಿ, ಏಪ್ರಿಲ್ 5ರಂದು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಸರಘಟ್ಟ ಮತ್ತು ದಾಸನಪುರ, 6ರಂದು ರಾಜಾನುಕುಂಟೆ, ಯಲಹಂಕ ಮತ್ತು 9ರಂದು ಬಗಳಗುಂಟೆ, ರಾಜಗೋಪಾಲನಗರ, ಚೊಕ್ಕಸಂದ್ರ ಹಾಗೂ ಚಿಕ್ಕಬಾಣವಾರ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮಾಹಿತಿ ನೀಡಿದರು.ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕು ತಹಶೀಲ್ದಾರ್ ಬಾಳಪ್ಪ ಹಂದಿಗುಂದ, ಜಕ್ಕೂರು ವೃತ್ತದ ಉಪತಹಶೀಲ್ದಾರ್ ಮಹದೇವ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಅನಂತ, ಶಿಶುಅಭಿವೃದ್ಧಿ ಯೋಜನಾಧಿಕಾರಿ ಡಾ.ಎಸ್.ಸಿದ್ದರಾಮಣ್ಣ ಹಾಜರಿದ್ದರು.

ಪ್ರತಿಕ್ರಿಯಿಸಿ (+)