ಗುರುವಾರ , ನವೆಂಬರ್ 21, 2019
21 °C

ಮತದಾನ ಜಾಗೃತಿ; ಫಲಕಗಳ ಸರತಿ

Published:
Updated:

ಮಡಿಕೇರಿ: ಜಿಲ್ಲಾಡಳಿತ ಹಾಗೂ ರಾಜ್ಯ ಚುನಾವಣಾ ಆಯೋಗವು ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಹಲವೆಡೆ ಜಾಹೀರಾತು ಫಲಕಗಳನ್ನು ಅಳವಡಿಸುತ್ತಿದೆ.ದೇಶದ ಪ್ರಮುಖ ಕ್ರೀಡಾಪಟುಗಳು, ಚಿತ್ರ ನಟರು ಹಾಗೂ ಪ್ರಮುಖ ಮುತ್ಸದ್ದಿಗಳ ಮತದಾನದ ಸಂದೇಶ ಸಾರುವಂತಿರುವ ಬ್ಯಾನರ್‌ಗಳನ್ನು ಹಲವೆಡೆ ಅಳವಡಿಸಲಾಗುತ್ತಿದೆ. ಮಡಿಕೇರಿಯ ಕೋಟೆ ಆವರಣದ ಪ್ರವೇಶ ದ್ವಾರದ ಬಳಿ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಜಾಹೀರಾತು ಫಲಕ ಅಳವಡಿಸಲಾಗಿದೆ. ಇದರಂತೆ ಅಬ್ಬಿಫಾಲ್ಸ್ ಬಳಿ ಸೇರಿದಂತೆ ಜಿಲ್ಲೆಯ ಸುಮಾರು 12 ಕಡೆ ಇಂತಹ ಫಲಕಗಳನ್ನು ಬಳಸಲಾಗಿದೆ.ಮತದಾನ ಹಾಗೂ ಮತದಾರರ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲು ಮಡಿಕೇರಿ ನಗರಸಭೆಯು ಮುದ್ರಿಸಿರುವ ಜಾಹೀರಾತು ಪೇಪರ್‌ಗಳು ನಗರದೆಲ್ಲೆಡೆ ರಾರಾಜಿಸುತ್ತಿವೆ.ಜಾಥಾ, ಬೀದಿನಾಟಕ

ಮತದಾನ ಶಿಕ್ಷಣ ಹಾಗೂ ಸಹಭಾಗಿತ್ವ ಸಮಿತಿಯ ವತಿಯಿಂದ ಜಿಲ್ಲಾಡಳಿತ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ `ಮತದಾರರ ಶಿಕ್ಷಣ ಜಾಗೃತಿ ಜಾಥಾ'ದ  ಮೂಲಕ ಬೀದಿ ನಾಟಕ, ಹೀಗೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಬೀದಿ ನಾಟಕ, ವೀಡಿಯೋ ಪ್ರದರ್ಶನ, ಹಾಡುಗಳ ಮೂಲಕವೂ ಮತದಾನದ ಅರಿವು ಮೂಡಿಸಲಾಗುತ್ತಿದೆ. ಅರಿವು ಮೂಡಿಸಲು ಮುಂದಿನ ದಿನಗಳಲ್ಲಿ ವಾಕ್‌ಥಾನ್, ಮ್ಯಾರಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಮೇ. 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 18 ವರ್ಷದ ಮೇಲ್ಪಟ್ಟವರು ತಪ್ಪದೆ ಮತದಾನ ಮಾಡಬೇಕೆಂದು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗವು ಕೋರಿದೆ.

ಪ್ರತಿಕ್ರಿಯಿಸಿ (+)