ಶುಕ್ರವಾರ, ನವೆಂಬರ್ 22, 2019
23 °C

ಮತದಾನ ಜಾಗೃತಿ: ಹಳ್ಳಿ ಮುಂದೆ, ಪಟ್ಟಣ ಹಿಂದೆ!

Published:
Updated:

ಕೊಪ್ಪಳ: ಸಾರ್ವತ್ರಿಕ ಚುನಾವಣೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕಳವಳಗೊಂಡಿರುವ ಚುನಾವಣಾ ಆಯೋಗ, ಈ ಬಾರಿ ಮತಗಟ್ಟೆಗಳತ್ತ ಮತದಾರರನ್ನು ಆಕರ್ಷಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ `ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ' (ಸ್ವೀಪ್) ಎಂಬ ಕಾರ್ಯಕ್ರಮವನ್ನು ಸಹ ಅನುಷ್ಠಾನಗೊಳಿಸುತ್ತಿದೆ.ಆದರೆ, 2008ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗರಿಷ್ಠ ಮತದಾನ ಮಾಡುವ ಮೂಲಕ ಕೆಲ ಗ್ರಾಮಗಳ ಮತದಾರರು ತಮಗಿರುವ ಜಾಗೃತಿಯನ್ನು ಮೆರೆದಿದ್ದರೆ, ಹಲವಾರು ಗ್ರಾಮಗಳಲ್ಲಿ ಶೇ 50ಕ್ಕಿಂತ ಕಡಿಮೆ ಮತದಾನವಾಗಿರುವ ನಿದರ್ಶನಗಳೂ ಇವೆ. ಜಿಲ್ಲೆಯಲ್ಲಿರುವ 5 ವಿಧಾನಸಭಾ ಕ್ಷೇತ್ರಗಳಲ್ಲಿ ವಿಧಾನಸಭಾ ಕ್ಷೇತ್ರದ ಮುಖ್ಯ ಕೇಂದ್ರ (ಕನಕಗಿರಿ) ಇಲ್ಲವೇ ತಾಲ್ಲೂಕು ಕೇಂದ್ರಗಳಲ್ಲಿಯೇ ಕನಿಷ್ಠ ಪ್ರಮಾಣದ ಮತದಾನ ದಾಖಲಾಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಗರಿಷ್ಠ ಮತದಾನ ದಾಖಲಾಗಿರುವುದು ಕಂಡು ಬರುತ್ತದೆ.ಕೊಪ್ಪಳ ನಗರದ 11 ಮತಗಟ್ಟೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಮತದಾನವಾಗಿದೆ. 5 ಮತಗಟ್ಟೆಗಳಲ್ಲಿ ಶೇ 43.03ರಷ್ಟು ಮತದಾನ ದಾಖಲಾಗಿದೆ. ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಶೇ 96.09 ರಷ್ಟು ಮತದಾನವಾಗಿದ್ದು, ಇದೇ ಜಿಲ್ಲೆಯಲ್ಲಿ ದಾಖಲಾಗಿರುವ ಗರಿಷ್ಠ ಮತ ಪ್ರಮಾಣವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 7 ಮತಗಟ್ಟೆಗಳಲ್ಲಿ ಶೇ 50ಕ್ಕಿಂತ ಮತದಾನವಾಗಿದೆ.ಇನ್ನು, ತಾಲ್ಲೂಕಿನ ಮುನಿರಾಬಾದ್‌ನ ಮತಟ್ಟೆಯೊಂದರಲ್ಲಿ ಶೇ 42.76ರಷ್ಟು ಕನಿಷ್ಠ ಮತದಾನವಾಗಿದೆ.

ಇನ್ನು, ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂದ್ರಾಳ ಗ್ರಾಮದಲ್ಲಿ ಗರಿಷ್ಠ ಶೇ 89.47ರಷ್ಟು ಮತದಾನವಾಗಿದೆ. ಗ್ರಾಮದ ಮತಗಟ್ಟೆಯಲ್ಲಿರುವ 418 ಮತದಾರರ ಪೈಕಿ 374 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಗಂಗಾವತಿ ನಗರದಲ್ಲಿರುವ ಮತಗಟ್ಟೆ ಸಂಖ್ಯೆ 60ರಲ್ಲಿ ಕನಿಷ್ಠ ಶೇ 42.14ರಷ್ಟು ಮತದಾನವಾಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದ 8 ಮತಗಟ್ಟೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಮತದಾನವಾಗಿರುವುದು ಕಂಡು ಬರುತ್ತದೆ.ಯಲಬುರ್ಗಾ ಪಟ್ಟಣದಲ್ಲಿರುವ ಮತಗಟ್ಟೆ 8ರಲ್ಲಿ ಕನಿಷ್ಠ ಮತದಾನವಾಗಿದೆ. ಈ ಮತಗಟ್ಟೆಯಲ್ಲಿದ್ದ 825 ಮತದಾರರ ಪೈಕಿ 340 ಮತದಾರರು ಮತ ಹಾಕಿದ್ದು, ಶೇ 41.21ರಷ್ಟು ಮತದಾನ ದಾಖಲಾಗಿದೆ. ಇದೇ ಮತಕ್ಷೇತ್ರದ ಭಾನಾಪುರ ಗ್ರಾಮದಲ್ಲಿ ಗರಿಷ್ಠ ಶೇ 89.70ರಷ್ಟು ಮತದಾನವಾಗಿದೆ. ಈ ಗ್ರಾಮದಲ್ಲಿದ್ದ 757 ಮತದಾರರ ಪೈಕಿ 679 ಮತದಾರರು ಮತ ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 4 ಮತಗಟ್ಟೆಗಳಲ್ಲಿ ಶೇ 50ಕ್ಕಿಂತ ಮತದಾನವಾಗಿದೆ.ಕುಷ್ಟಗಿ ತಾಲ್ಲೂಕಿನ ಹಲಗದಾಳ ಶೇ 81.27ರಷ್ಟು ಮತದಾನವಾಗಿದೆ. ಗ್ರಾಮದಲ್ಲಿನ 395 ಮತದಾರರ ಪೈಕಿ 321 ಮತದಾರರು ಮತ ಚಲಾಯಿಸಿದ್ದಾರೆ. ಕುಷ್ಟಗಿ ಪಟ್ಟಣದ ಮತಗಟ್ಟೆ ಸಂಖ್ಯೆ 4ರಲ್ಲಿ ಕನಿಷ್ಠ 26.76ರಷ್ಟು ಮತದಾನವಾಗಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿನ 1125 ಮತದಾರರ ಪೈಕಿ 301 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 11 ಮತಗಟ್ಟೆಗಳಲ್ಲಿ ಶೇ 50ಕ್ಕಿಂತ ಮತದಾನವಾಗಿದೆ.ಕನಕಗಿರಿ ಮತಕ್ಷೇತ್ರದ ಮರ್ಲಾನಹಳ್ಳಿ ಗ್ರಾಮದಲ್ಲಿ ಕನಿಷ್ಠ ಶೇ 30.19ರಷ್ಟು ಮತದಾನವಾಗಿದೆ. ಇದೇ ಕ್ಷೇತ್ರದ ಜಂಗಮರ ಕಲ್ಗುಡಿಯಲ್ಲಿ ಗರಿಷ್ಠ 91.50ರಷ್ಟು ಮತದಾನವಾಗಿದೆ. ಅಲ್ಲದೇ, ಈ ಕ್ಷೇತ್ರದಲ್ಲಿ ಒಟ್ಟು 31 ಮತಗಟ್ಟೆಗಳಲ್ಲಿ ಶೇ 50ಕ್ಕಿಂತ ಮತದಾನವಾಗಿದೆ.

ಪ್ರತಿಕ್ರಿಯಿಸಿ (+)