ಸೋಮವಾರ, ಡಿಸೆಂಬರ್ 16, 2019
18 °C
ದೊಡ್ಡ ಉಳ್ಳಾರ್ತಿ; ಸಂಸ್ಥೆಗಳಿಗೆ ಸಾವಿರಾರು ಎಕರೆ ಭೂಮಿ ನೀಡಿರುವ ಕ್ರಮಕ್ಕೆ ವಿರೋಧ

ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕಿಗೆ ಸೇರಿದ್ದರೂ ಕ್ಷೇತ್ರ ಮರುವಿಂಗಡಣೆಯಿಂದಾಗಿ ಪಕ್ಕದ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ ದೊಡ್ಡ ಉಳ್ಳಾರ್ತಿ ಗ್ರಾಮ.ಇಲ್ಲಿನ ಅಮೃತ ಮಹಲ್, ಕುದಾಪುರ, ವರವು ಕಾವಲುಗಳನ್ನು ಡಿಆರ್‌ಡಿಒ, ಬಾಬಾ ಅಣು ಸಂಶೋಧನಾ ಕೇಂದ್ರ ಹಾಗೂ ಇನ್ನಿತರ ಸಂಸ್ಥೆಗಳಿಗೆ ಸರ್ಕಾರ ಸಾವಿರಾರು ಎಕರೆ ಭೂಮಿ ನೀಡಿರುವ ಕ್ರಮವನ್ನು ಖಂಡಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ತೀರ್ಮಾನ ಕೈಗೊಂಡು ಗುರುವಾರ ಗ್ರಾಮದಲ್ಲಿ ಒಗ್ಗಟ್ಟು ಪ್ರದರ್ಶನ ಹಾಗೂ ಗೋಡೆ ಬರಹಗಳಲ್ಲಿ ಚುನಾವಣೆ ಬಹಿಷ್ಕರಿಸುವ ಬರಹಗಳನ್ನು ಬರೆಯುವ ಮೂಲಕ ತಮ್ಮ ಅಸಹನೆಯನ್ನು ಗ್ರಾಮಸ್ಥರು ಹೊರಹಾಕಿದ್ದಾರೆ.ಅನಾದಿ ಕಾಲದಿಂದಲೂ ಆಸುಪಾಸಿನ ಸುಮಾರು 80ಕ್ಕೂ ಹೆಚ್ಚು ಗ್ರಾಮಗಳ ಜನರು ತಮ್ಮ ಜಾನುವಾರುಗಳನ್ನು ಕಾವಲ್‌ನಲ್ಲಿ ಮೇವಿಗಾಗಿ ಬಿಡುವುದು ಸೇರಿದಂತೆ ಪ್ರತಿಯೊಂದಕ್ಕೂ ಈ ಕಾವಲ್‌ಗಳನ್ನು ಅವಲಂಬಿಸಿ ಜೀವನ ನಿರ್ವಹಿಸಲಾಗುತ್ತಿತ್ತು. ಈಗಲೂ ಈ ಕಾವಲ್‌ಗಳಲ್ಲಿ ಹತ್ತಾರು ಪ್ರಾಣಿ ಸಂಕುಲಗಳು ಇರುವುದರಿಂದ ದೇಶದ ಪ್ರತಿಷ್ಠಿತ ಸಂಸ್ಥೆಗಳ ಪ್ರಾರಂಭದಿಂದ ಇಲ್ಲಿನ ಪ್ರಾಣಿ ಹಾಗೂ ಪಕ್ಷಿ ಸಂಕುಲಗಳು ನಾಶ ಆಗಲಿವೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡರು.ಪಾರಂಪರಿಕವಾಗಿ ಸ್ಥಳೀಯರು ಕಾವಲ್‌ಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಇಂತಹ ಭೂಮಿಯಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳು ಕಾಂಪೌಂಡ್‌ಗಳನ್ನು ನಿರ್ಮಿಸಿಕೊಂಡು ಸ್ಥಳೀಯರನ್ನು ಹೊರಗಿಡುತ್ತಿದೆ. ಆ ಮೂಲಕ ಸರ್ಕಾರ ಇಲ್ಲಿನ ಜನರ ಬದುಕುವ ಹಕ್ಕನ್ನೇ ಕಸಿದುಕೊಂಡಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಹಕ್ಕುಗಳನ್ನು ಕಸಿದುಕೊಂಡು ಆಡಳಿತ ಮಾಡುವ ಸರ್ಕಾರ ನಮಗೆ ಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ನಮಗೆ ನ್ಯಾಯ ಸಿಗುವವರೆಗೂ ಮತದಾನ ಮಾಡುವುದಿಲ್ಲ. ಈ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮದ ನೂರಾರು ಮುಖಂಡರು, ಯುವಕರು, ಜನಪ್ರತಿನಿಧಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)