ಸೋಮವಾರ, ನವೆಂಬರ್ 18, 2019
27 °C
ವಿಧಾನಸಭೆ ಚುನಾವಣೆ 2013

ಮತದಾರರಲ್ಲಿ ಜಾಗೃತಿ ಮೂಡಿಸಿ: ಡಿಸಿ

Published:
Updated:

ಚಾಮರಾಜನಗರ: `ಮತದಾರರಲ್ಲಿ ಜಾಗೃತಿ ಮೂಡಿಸಿ, ಚುನಾವಣೆಯನ್ನು ಯಶಸ್ವಿಯಾಗಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಅತ್ಯಂತ ಮಹತ್ವದ್ದಾ ಗಿದೆ' ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಹೇಳಿದರು.ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಈಚೆಗೆ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು.ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರ ವ್ಯಾಪ್ತಿ ವಿಶಾಲವಾಗಿದೆ. ಇವರ ಸೇವೆಯನ್ನು ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸುವ ಹಾಗೂ ಮತ ಚಲಾಯಿಸುವ ವಿಷಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮುಡಿಸಬಹುದು' ಎಂದು ಹೇಳಿದರು.`ಮತದಾರರಲ್ಲಿ ಅರಿವು ಮೂಡಿಸಲು ಆಯಾ ಭಾಗದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳು ಸೇವಾ ಮನೋಭಾವದಿಂದ ಆಂದೋಲನ ಮಾದರಿ ಯಲ್ಲಿ ಜಾಗೃತಿ ಮೂಡಿಸಬೇಕು. ಯಾವುದೇ ಸರ್ಕಾರ ರಚನೆಗೆ ಚುನಾವಣೆ ಪ್ರಕ್ರಿಯೆ ಪ್ರಮುಖವಾಗಿದ್ದು, ಅರ್ಹ ಮತದಾರ, ಅದನ್ನು ಚಲಾಯಿಸುವ ಮೂಲಕ ತನ್ನ ಕರ್ತವ್ಯ ನಿರ್ವಹಿಸಬೇಕಿದೆ.  ಪ್ರತಿಯೊಂದು ಮತವೂ ಅತ್ಯಂತ ಮಹತ್ವದ್ದಾಗಿದ್ದು, ನಮ್ಮ ಒಂದು ಮತದಿಂದ ಯಾವುದೇ ಪರಿಣಾಮ ಸಾಧ್ಯವಿಲ್ಲ ಎಂಬ ಮತದಾರರ ನಿರ್ಲಕ್ಷ್ಯ ಮನೋಭಾವ ಬದಲಾಗಬೇಕಿದೆ ಎಂದು ಹೇಳಿದರು.ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿಗಳು ಕಟ್ಟು ನಿಟ್ಟಿನಿಂದ ಕಾರ್ಯ ನಿರ್ವಯಿಸ ಬೇಕು. ತಪ್ಪದರೆ ಅಂತವರ ವಿರುದ್ಧ ಕ್ರಮವಹಿ ಸಲಾಗುವುದು ಎಂದ ಅವರು, ಜಾಗೃತಿ ಅಭಿಯಾನ ತೀವ್ರವಾಗಿ ಸಾಗಬೇಕು ಎಂದು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಎಂ.ಆರ್. ಸೋಮಶೇಖರಪ್ಪ ಮಾತ ನಾಡಿ `18 ವರ್ಷ ಮೇಲ್ಪಟ್ಟವರು, ಆಯಾ ಮತಗಟ್ಟೆ ಅಧಿಕಾರಿಗಳ ಬಳಿ ಲಭ್ಯವಿರುವ ನಮೂನೆ-6 ಅನ್ನು ಭರ್ತಿ ಮಾಡಿ ನೀಡಿದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳಲಿದೆ' ಎಂದರು.ಚುನಾವಣೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮತದಾರರ ಗುರುತಿನ ಚೀಟಿಯನ್ನು ಆಯಾ ಮತದಾರರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಆಯಾ ಮತಗಟ್ಟೆ ಅಧಿಕಾರಿಗಳು ಹಾಗೂ ಕ್ಷೇತ್ರ ಚುನಾವಣಾಧಿಕಾರಿ ಗಳು, ಇದನ್ನು ಸಮರ್ಪ ಕವಾಗಿ ಮತದಾರರ ಮನೆ ಬಾಗಿಲಿಗೆ ತಲುಪಿ ಸುವ ವ್ಯವಸ್ಥೆ ಮಾಡಬೇಕು. ಮತ ಚಲಾಯಿಸವ ಸಂದರ್ಭದಲ್ಲಿ ಮಹಿಳಾ ಮತದಾರರ ಪ್ರಮಾಣ ಬಹಳಷ್ಟು ಕಡಿಮೆ ಇದೆ. ಈ ನಿಟ್ಟಿನಲ್ಲಿ ವಿಷಯವನ್ನು ತೀವ್ರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಪರಿಹರಿಸಲು ಯತ್ನಿಸಬೇಕು ಎಂದರು.ಸಭೆಯಲ್ಲಿ ಅಹಾರ ಇಲಾಖೆ ಉಪನಿರ್ದೇಶಕ ಸಂಬಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜೈ ಕೃಷ್ಣ, ಖಾಯಂ ಪೂರ್ವ ಉಪ ವಿಭಾ ಗಾಧಿಕಾರಿ ಜಗದೀಶ್, ತಹ ಶೀಲ್ದಾರ್ ಚಂದ್ರಕಾಂತ್ ಭಜಂತ್ರಿ, ಉಪ ತಹಶೀಲ್ದಾರ್ ಶಂಕರ್ ರಾವ್ ಉಪಸ್ಥಿತರಿದ್ದರು.ಚುನಾವಣೆ ಹಿನ್ನೆಲೆ: ಸರ್ಕಾರಿ ನೌಕರರಿಗೆ ಸೂಚನೆ

ಚಾಮರಾಜನಗರ: ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಯಾವುದೇ ರಾಜಕೀಯ ಪಕ್ಷಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಜೊತೆ ಗುರ್ತಿಸಿಕೊಳ್ಳುವುದು ಹಾಗೂ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಆಯಾ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ವಿ. ಸಾವಿತ್ರಿ ಎಚ್ಚರಿಕೆ ನೀಡಿದ್ದಾರೆ.ಸಾರ್ವಜನಿಕರು ಸಹ ಜಿಲ್ಲೆಯ ಯಾವುದೇ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಲ್ಲಿ ನಿರ್ಭಯದಿಂದ ದೂರು ಸ್ವೀಕಾರ ಕೇಂದ್ರಗಳಿಗೆ ಕರೆಮಾಡಿ ದೂರು ದಾಖಲಿಸಿ ಜಿಲ್ಲಾ ಡಳಿತದೊಂದಿಗೆ ಸಹಕರಿಸುವಂತೆ ಕೋರಿದ್ದಾರೆ.ಅಂಚೆ ಮತಪತ್ರ: ತಂಡ ರಚನೆ

ಚಾಮರಾಜನಗರ: ಸಾರ್ವತ್ರಿಕ ವಿಧಾನ ಸಭೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಪೊಲೀಸ್, ಕೆಎಸ್‌ಆರ್‌ಟಿಸಿ ನೌಕರರು ಹಾಗೂ ಇತರೆ ಅಧಿಕಾರಿ, ಸಿಬ್ಬಂದಿ ಅಂಚೆ ಮತ ಪತ್ರ ಹಾಗೂ ಸೇವಾ ಮತ ಪತ್ರಗಳ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಮಟ್ಟದ ತಂಡವನ್ನು ರಚಿಸಲಾಗಿದೆ.

ತಂಡದ ಉಸ್ತುವಾರಿ ಅಧಿಕಾರಿಗಳಾಗಿ ಚುನಾವಣಾ ತಹಶೀಲ್ದಾರ್ ಎಂ.ಆರ್. ಕಾಂತಾಮಣಿ, ಶಿರಸ್ತೇದಾರ್ ಜಿ.ಜಿ. ಗೀತಾಲಕ್ಷ್ಮೀ ಹಾಗೂ ತಂಡದ ಸದಸ್ಯರಾಗಿ ದ್ವಿತೀಯ ದರ್ಜೆ ಸಹಾಯಕ ವೆಂಕಟಾಚಲ ಮತ್ತು ಎಚ್. ವೇದಾವತಿ ಅವರುಗಳು ನೇಮಕಗೊಂಡಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಚುನಾವಣೆ: ದೂರು ಸ್ವೀಕಾರಕ್ಕೆ ವ್ಯವಸ್ಥೆ

ಚಾಮರಾಜನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಬರುವ ದೂರುಗಳನ್ನು ಸ್ವೀಕರಿಸಲು ನಗರ ಸೇರಿದಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಲಾಗಿದೆ.

ವಿವರ ಇಂತಿದೆ: ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ 112 ದೂರವಾಣಿ ಸಂಖ್ಯೆ 08226-223160), ಜಿಲ್ಲಾಡಳಿತ ಭವನ ಕೊಠಡಿ ಸಂಖ್ಯೆ 241 (ಮಾದರಿ ನೀತಿ ಸಂಹಿತೆ) ದೂರವಾಣಿ ಸಂಖ್ಯೆ 08226-222190, 212-ಹನೂರು ವಿಧಾನಸಭಾ ಕ್ಷೇತ್ರ, ತಾಲ್ಲೂಕು ಕಚೇರಿ, ಕೊಳ್ಳೇಗಾಲ ದೂರವಾಣಿ ಸಂಖ್ಯೆ 08224-252092, 222-ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ, ತಾಲ್ಲೂಕು ಕಚೇರಿ, ಯಳಂದೂರು ದೂರವಾಣಿ ಸಂಖ್ಯೆ 08226-240080, 223-ಚಾಮರಾಜನಗರ ವಿಧಾನಸಭಾ ಕ್ಷೇತ್ರ, ತಾಲ್ಲೂಕು ಕಚೇರಿ, ಚಾಮರಾಜನಗರ ದೂರವಾಣಿ ಸಂಖ್ಯೆ 08226-222046 ಹಾಗೂ 224-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ, ತಾಲ್ಲೂಕು ಕಚೇರಿ, ಗುಂಡ್ಲುಪೇಟೆ ದೂರವಾಣಿ ಸಂಖ್ಯೆ 08229-222129.

ಪ್ರತಿಕ್ರಿಯಿಸಿ (+)