ಗುರುವಾರ , ನವೆಂಬರ್ 21, 2019
26 °C

ಮತದಾರರಿಗೆ ಊಟ: ಬಿರಿಯಾನಿ, ಪಾತ್ರೆ ವಶ

Published:
Updated:

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ವಿಧಾನಸಭೆ ಚುನಾವಣೆಯ ಪಕ್ಷೇತರ ಅಭ್ಯರ್ಥಿ, ಶಾಸಕ ಬಿ.ನಾಗೇಂದ್ರ ಅವರ ಬೆಂಬಲಿಗರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ತಾಲ್ಲೂಕಿನ ಹುಲಿಕೆರೆ ಗ್ರಾಮದ ತೋಟವೊಂದರಲ್ಲಿ ಅಡುಗೆ ಸಿದ್ಧಪಡಿಸಿ ಮತದಾರರಿಗೆ ಹಂಚುತ್ತಿದ್ದ ವೇಳೆ ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡ ಶನಿವಾರ ಮಧ್ಯಾಹ್ನ ದಾಳಿ ನಡೆಸಿ ಪಾತ್ರೆ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ.ಕೂಡ್ಲಿಗಿ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಲಿರುವ ಶಾಸಕ ಬಿ.ನಾಗೇಂದ್ರ ಅವರ ಬೆಂಬಲಿಗರು ಎನ್ನಲಾದ ಕಾಸೀಂ ಸಾಬ್ ಮತ್ತು ಪೀರಾಸಾಬ್ ಎಂಬುವವರು ಗ್ರಾಮದ ವೀರಭದ್ರಸ್ವಾಮಿ ಅವರ ತೋಟದಲ್ಲಿ ಒಂದು ಸಾವಿರ ಜನರಿಗೆ ಮಾಂಸದ ಅಡುಗೆ ತಯಾರಿಸಿದ್ದರು.ವಿಷಯ ತಿಳಿದ ಎಂಸಿಸಿ ತಂಡ, ಪಾತ್ರೆಗಳಲ್ಲಿ ಸಿದ್ಧಪಡಿಸಿದ್ದ ಬಿರಿಯಾನಿ, ಪಾತ್ರೆ ಪಗಡ ವಶಕ್ಕೆ ಪಡೆದಿದ್ದಾರೆ.

ತೋಟದ ಮಾಲೀಕ ವೀರಭದ್ರಸ್ವಾಮಿ  ವಿರುದ್ಧ ಕಾನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಕ್ಷೇತ್ರದಲ್ಲಿರುವ ಮುಸ್ಲಿಂ ಬಾಂಧವರನ್ನು ಈ ಭೋಜನ ಕೂಟಕ್ಕೆ ಆಹ್ವಾನಿಸಲಾಗಿತ್ತು. 200ಕ್ಕೂ ಅಧಿಕ ಜನರು ಊಟ ಮಾಡಿದ್ದರು. ಎಂಸಿಸಿ ತಂಡ ಭೇಟಿ ನೀಡುತ್ತಿದ್ದಂತೆ ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾರರು ಓಡಿ ಹೋದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ತಹಶೀಲ್ದಾರ್ ಜವರೇಗೌಡ, ಪ್ರಮೋದ್ ಮತ್ತು ಪೊಲೀಸ್ ಸಿಬ್ಬಂದಿ, ಪಿಡಿಒ ಬೋರಯ್ಯ ದಾಳಿ ನಡೆಸಿದರು.

ಇದಲ್ಲದೆ ತಾಲ್ಲೂಕಿನ ಗಾಣಗಟ್ಟೆ ಮಾಯಮ್ಮ ದೇವಸ್ಥಾನ ಬಳಿ ದಾವಣಗೆರೆ ಜಿಲ್ಲೆ ಜಗಳೂರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಪರವಾಗಿ ಬಂದಿದ್ದ 56ಕ್ಕೂ ಹೆಚ್ಚು ಆಟೋಗಳನ್ನು ನೀತಿ ಸಂಹಿತೆ ಉಲ್ಲಂಘನೆ ಕಾರಣ ಶುಕ್ರವಾರ ವಶಕ್ಕೆ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)