ಮತದಾರರ ಋಣ ತೀರಿಸಬೇಕು: ಸ್ವಾಮೀ

7

ಮತದಾರರ ಋಣ ತೀರಿಸಬೇಕು: ಸ್ವಾಮೀ

Published:
Updated:

ಚಿಂತಾಮಣಿ:  ಚುನಾಯಿತ ಪ್ರತಿನಿಧಿಗಳು ಸರಳತೆ, ಸಂಯಮ, ಸಹನೆ ಮತ್ತು ಸಹಿಷ್ಣುತೆ ಹೊಂದಿರಬೇಕು. ತಮ್ಮನ್ನು ಆಯ್ಕೆ ಮಾಡಿದ ಮತದಾರರ ಋಣ ತೀರಿಸಲು ಶ್ರಮಿಸಬೇಕು ಎಂದು ಆದಿಚುಂಚನಗಿರಿ ಮಠದ  ಚಿಕ್ಕಬಳ್ಳಾಪುರ ಶಾಖಾ ಮಠದ ನಿರ್ಮಲಾನಂದ ಸ್ವಾಮೀಜಿ ಸಲಹೆ ನೀಡಿದರು.ನಗರ ಹೊರವಲಯದ ಬೂರಗಮಾಕಲಹಳ್ಳಿಯಲ್ಲಿ ಶನಿವಾರ ನಡೆದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಣ, ಅಧಿಕಾರ, ಯೌವನ ಮತ್ತು ಅವಿವೇಕ ಮನುಷ್ಯರು ಕೆಡಲು ಕಾರಣವಾಗುತ್ತವೆ.ಇದರಲ್ಲಿ  ಒಂದು ಗುಣವಿದ್ದರೂ ಬದುಕಿಗೆ ಕಂಟಕವಾಗುತ್ತದೆ. 4 ಗುಣಗಳಿದ್ದರಂತೂ ಸಂಪೂರ್ಣವಾಗಿ ಹಾಳಾಗುತ್ತಾರೆ. ಇಂತಹ ಯಾವ ಗುಣವೂ ಇಲ್ಲದಿರುವ ಕಾರಣದಿಂದಲೆ ಕೆ.ಎಚ್.ಮುನಿಯಪ್ಪ ಸತತವಾಗಿ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದರು.ಹಿರಿಯರನ್ನು ಗೌರವಿಸುವ, ಕೈಲಾಗದವರನ್ನು ಮೇಲೆತ್ತುವ ಹಾಗೂ ದೈವ ಭಕ್ತಿಯಿಂದ ಯಶಸ್ಸು, ಶಕ್ತಿ ಬರುತ್ತದೆ. ವಿಜೇತರಾದಾಗ ಅನೇಕರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬರುತ್ತಾರೆ. ಸೋತಾಗ ಯಾರೂ ಜವಾಬ್ದಾರಿಯನ್ನು ಹೊರಲು ಸಿದ್ಧರಿರುವುದಿಲ್ಲ. ಮುನಿಯಪ್ಪ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಿರುವುದಿಂದ ಹಂತ ಹಂತವಾಗಿ ಮೇಲೇರುತ್ತಿದ್ದಾರೆ ಎಂದರು.ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ಜನತೆಗೆ ನೀಡಿರುವ ಭರವಸೆಯಂತೆ ಕಾರ್ಯ ಚಟುವಟಿಕೆಗಳನ್ನು ರೂಪಿಸಿ ಸೇವೆ ಮಾಡಬೇಕು. ಅಧಿಕಾರ ಜನರಿಂದ, ಜನತೆಗಾಗಿ ಮಾತ್ರ ಎಂಬುದನ್ನು ಅರಿತಿರಬೇಕು ಎಂದರು.ಅಧಿಕಾರ ದುರುಪಯೋಗವಾಗದೆ, ಲೋಪದೋಷಗಳಿಲ್ಲದೆ ನ್ಯಾಯವಾದ ರೀತಿಯಲ್ಲಿ ನಡೆಸಬೇಕು. ಜನತೆಗೆ ಸೇವೆ ಮಾಡಿ ಪ್ರೀತಿ, ವಿಶ್ವಾಸ ಗಳಿಸುವುದು ಮಂತ್ರಿಗಿರಿಗಿಂತ ಹೆಚ್ಚು. ಅಧಿಕಾರ ಇದ್ದರೂ ಇಲ್ಲದಿದ್ದರೂ ಹಗರಣಗಳಿಲ್ಲದೆ ನಿಷ್ಠೆಯಿಂದ ಕೆಲಸ ಮಾಡಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದರು.ಅಧಿಕಾರದಿಂದ  ಸಮಾಜದ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ನಮ್ರತೆ, ವಿನಯ, ಸಭ್ಯತೆ ಹಾಗೂ ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಜನರ ಮಧ್ಯೆ ಉಳಿದುಕೊಳ್ಳುತ್ತೇವೆ. ಅಹಂಕಾರದಿಂದ ಮೆರೆದರೆ ದೂರ ಸರಿಯುತ್ತೇವೆ ಎಂದರು.ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ಶಾಶ್ವತ ನೀರಾವರಿ ಹೋರಾಟ ಮುಂದುವರಿಯಬೇಕು. ಎಲ್ಲವೂ ಮುಗಿಯಿತು ಎಂದು ಸುಮ್ಮನೆ ಕೂಡಬಾರದು. ಮುಂದಿನ ಪೀಳಿಗೆ ನಮ್ಮನ್ನು ಶಪಿಸದಂತೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬರಬೇಕು ಎಂದು ತಿಳಿಸಿದರು.ಸಚಿವ ಮುನಿಯಪ್ಪ ದಂಪತಿಯನ್ನು ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಶಾಸಕರಾದ ವಿ.ಮುನಿಯಪ್ಪ, ಅಮರೇಶ್, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ ಮಾತನಾಡಿದರು. ಕೋಲಾರ ಜಿಲ್ಲಾ ಘಟಕದ ಕಾಂಗ್ರೆಸ್ ಅಧ್ಯಕ್ಷ ಅನಿಲ್‌ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ನಂದನವನಂ ಶ್ರೀರಾಮರೆಡ್ಡಿ, ಮುಖಂಡರಾದ ಡಾ.ಶ್ರೀನಿವಾಸ್, ಆನೂರು ಸುಬ್ಬಣ್ಣ, ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry