ಬುಧವಾರ, ನವೆಂಬರ್ 13, 2019
22 °C

ಮತದಾರರ ಓಲೈಕೆಗೆ ಅಭ್ಯರ್ಥಿಗಳ ಕಸರತ್ತು

Published:
Updated:

ಬೆಳಗಾವಿ: ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ಸುಡು ಬಿಸಿಲಿನಲ್ಲಿಯೇ ಅಭ್ಯರ್ಥಿಗಳು ಪಾದಯಾತ್ರೆ ನಡೆಸುವ ಮೂಲಕ ಮತದಾರರನ್ನು ಓಲೈಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಅಬ್ಬರದ ಪ್ರಚಾರಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಿದ್ದರಿಂದ ಪ್ರಚಾರದ ಆರ್ಭಟವು ಬಹಿರಂಗವಾಗಿ ಕಾಣುತ್ತಿಲ್ಲ. ಮತದಾರರ ಓಲೈಕೆಗೆ `ತಂತ್ರ' ಹೆಣೆಯುವಲ್ಲಿ ಅಭ್ಯರ್ಥಿಗಳು ಕಾರ್ಯೋನ್ಮುಖರಾಗಿದ್ದಾರೆ.ಜಿಲ್ಲೆಯಲ್ಲಿ ಬೆಳಗಾವಿ ನಗರದ ಪ್ರತಿಷ್ಠಿತ ಕ್ಷೇತ್ರವಾಗಿರುವ ದಕ್ಷಿಣ ವಿಧಾನಸಭೆ ಮತಕ್ಷೇತ್ರ ದಲ್ಲಿ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಈ ಕ್ಷೇತ್ರದಲ್ಲಿ ಮರಾಠಿ ಭಾಷಿಕರು ಹಾಗೂ ನೇಕಾರರ ಜನಸಂಖ್ಯೆ ಹೆಚ್ಚಿದ್ದು, ಅವರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ನೇಕಾರರ ಹಾಗೂ ಮರಾಠಿ ಭಾಷಿಕರ ಮತಗಳನ್ನು ಸೆಳೆಯಲು ಎಲ್ಲ ಪಕ್ಷಗಳ ಅಭ್ಯರ್ಥಿಗಳು ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ, ಶಾಸಕ ಅಭಯ ಪಾಟೀಲ, ತಮ್ಮ ಅವಧಿಯಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಚಾರ ಕಾರ್ಯ ಭರದಿಂದ ನಡೆಸಿದ್ದಾರೆ. ನಿತ್ಯ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಗಲ್ಲಿ ಗಲ್ಲಿಗಳಲ್ಲಿ ಪಾದ ಯಾತ್ರೆ ನಡೆಸುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಯ ವೈಫಲ್ಯಗಳನ್ನು ಎತ್ತಿ ತೋರಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪ್ರತಿತಂತ್ರ ರೂಪಿಸಿದೆ. ಸಮಿತಿಯ ಅಧಿಕೃತ ಅಭ್ಯರ್ಥಿ ಸಂಭಾಜಿ ಪಾಟೀಲರ ಪ್ರಚಾರ ಕಾರ್ಯ ಚುರುಕುಗೊಂಡಿದ್ದು, ಅಭಯ ಅವರಿಗೆ ಸೆಡ್ಡು ಹೊಡೆಯಲು ಎಲ್ಲ ತರಹದ ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ.`ವಿವಾದದಲ್ಲಿರುವ ಗಡಿ ಪ್ರದೇಶವನ್ನು ಸಂಪೂರ್ಣವಾಗಿ ಮಹಾರಾಷ್ಟ್ರಕ್ಕೆ ಸೇರಿಸುವುದು ಹಾಗೂ ವಿವಾದ ಬಗೆಹರಿಯುವವರೆಗೆ ಬೆಳಗಾವಿ ಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿ ಸಲು ಒತ್ತಡ ಹೇರುವುದು ಎಂಇಎಸ್‌ನ ಮುಖ್ಯ ಉದ್ದೇಶವಾಗಿದೆ. ಈ ವಿಷಯವನ್ನಿಟ್ಟುಕೊಂಡು ಮತದಾರರ ಬಳಿ ಹೋಗುತ್ತಿದ್ದೇವೆ. ನಮ್ಮ ಪ್ರಣಾಳಿಕೆಯೂ ಇದೇ ಆಗಿದೆ' ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಮಾಳೋಜಿ ಅಷ್ಟೇಕರ ತಿಳಿಸಿದ್ದಾರೆ.ಎಂಇಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅಧಿಕೃತ ಅಭ್ಯರ್ಥಿ ಗೆ ಮತ ನೀಡುವಂತೆ ಮನವಿ ಮಾಡುತ್ತಿದೆ. ಆದರೆ, ಎಂಇಎಸ್‌ಗೆ ಬಂಡಾಯದ ಬಿಸಿ ತಾಗಿದ್ದು, ಸಮಿತಿ ನಾಯಕರಿಗೆ ದೊಡ್ಡ ತಲೆನೋವಾಗಿದೆ.ಸಮಿತಿಯ ಬಂಡಾಯ ಅಭ್ಯರ್ಥಿ ನೇತಾಜಿ ಮನಗೂತ್ಕರ್ ಹಾಗೂ ಶಿವಸೇನೆಯ ಅಭ್ಯರ್ಥಿ ಹನಮಂತ ಮಜುಕರ ಅವರು ಮರಾಠಿ ಭಾಷಿಕರನ್ನು ಓಲೈಸುವತ್ತ ಮಗ್ನರಾಗಿದ್ದಾರೆ. ಈ ಅಭ್ಯರ್ಥಿಗಳು ಎಂಇಎಸ್ ಅಭ್ಯರ್ಥಿಗೆ ತೊಡರುಗಾಲು ಹಾಕಿದ್ದಾರೆ.ಕಾಂಗ್ರೆಸ್ಸಿನ ಅನಿಲ ಪೋತದಾರ ಪ್ರಚಾರದಲ್ಲಿ ಮುಂದಿದ್ದು, ನಿತ್ಯ ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸುತ್ತಿದ್ದಾರೆ. ವಡಗಾವಿ, ಶಹಾಪುರ, ಖಾಸಬಾಗ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಿರುವ ಪೋತದಾರ, ನೇಕಾರರ ಮತ ಪಡೆಯಲು `ತಂತ್ರ' ಹೆಣೆದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕೆಜೆಪಿ ಅಭ್ಯರ್ಥಿ ಡಾ. ಎಸ್.ಎಂ. ದೊಡಮನಿ ಹಾಗೂ ಜೆಡಿಎಸ್ ಅಭ್ಯರ್ಥಿ ಬಸವರಾಜ ಜವಳಿ ಸಹ ಅಬ್ಬರದ  ಪ್ರಚಾರ ನಡೆಸಿದ್ದು, ಮತದಾರರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.ಬಹುತೇಕ ಅಭ್ಯರ್ಥಿಗಳು ಆಟೊರಿಕ್ಷಾಗಳ ಮೂಲಕ ಪ್ರಚಾರ ನಡೆಸಿದ್ದು, ತಮ್ಮ ಹಾಗೂ ತಮ್ಮ ಪಕ್ಷದ ಸಾಧನೆ ಸಾರುವ ಸಿಡಿಗಳನ್ನು ಬಳಸಿಕೊಂಡು ಧ್ವನಿವರ್ಧಕಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಖ್ಯಾತ ಗೀತೆಗಳನ್ನು ಬಳಸಿಕೊಂಡು ಸ್ಥಳೀಯ ಕೇಬಲ್ ನೆಟ್‌ವರ್ಕ್ ಮೂಲಕ ಪ್ರಚಾರ ನಡೆಸಿದ್ದಾರೆ.ಒಟ್ಟಾರೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಎಲ್ಲ ರೀತಿಯ ಕಸರತ್ತುಗಳನ್ನು ನಡೆಸ್ದ್ದಿದು, ನಿತ್ಯ ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಿಸಿಲಿನಲಲ್ಲೂ ಬೆವರು ಸುರಿಸುತ್ತ ಮನೆ ಬಾಗಿಲಿಗೆ ಬರುತ್ತಿರುವ ಅಭ್ಯರ್ಥಿಗಳಿಗೆ ಮತದಾರರು `ಗೋಣು ಆಡಿಸುತ್ತಿದ್ದಾರೆ'.

ಪ್ರತಿಕ್ರಿಯಿಸಿ (+)