ಗುರುವಾರ , ಮೇ 6, 2021
22 °C
ಕುಂದಾಪುರ: ಏರುತ್ತಿರುವ ಚುನಾವಣೆಯ ಕಾವು

ಮತದಾರರ ಓಲೈಕೆಗೆ ಸ್ಪೆಷಲ್‌ ಬಿರಿಯಾನಿ!

ಪ್ರಜಾವಾಣಿ ವಾರ್ತೆ/ ರಾಜೇಶ್‌ ಕೆ.ಸಿ ಕುಂದಾಪುರ Updated:

ಅಕ್ಷರ ಗಾತ್ರ : | |

ಕುಂದಾಪುರ: ಎರಡು ಲೋಕಸಭಾ ಕ್ಷೇತ್ರ ವ್ಯಾಪ್ತಿ­ಯನ್ನು ಹೊಂದಿರುವ ಕುಂದಾಪುರ ತಾಲ್ಲೂಕಿನಲ್ಲಿ ಬಿಸಿಲಿನ ಕಾವು ಏರುತ್ತಿರುವಂತೆ ಚುನಾವಣೆಯ ಕಾವು ಹದವಾಗಿ ಏರಲು ಪ್ರಾರಂಭವಾಗಿದೆ.ಹಿಂದೆ ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿ­ಯನ್ನು ಹೊಂದಿದ್ದ ತಾಲ್ಲೂಕಿನ ಎರಡು ವಿಧಾನ­ಸಭಾ ಕ್ಷೇತ್ರಗಳಾದ ಕುಂದಾಪುರ ಹಾಗೂ ಬೈಂದೂರು, ಕ್ಷೇತ್ರ ಪುನರ್‌ವಿಂಗಡನೆಯ ಬಳಿಕ ಉಡುಪಿ–ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರ್ಪಡೆ­ಯಾಗಿದೆ.ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿ­ಗಳ ನಡುವೆ ನೇರ ಪೈಪೋಟಿ ಕಾಣುತ್ತಿದ್ದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲಿ ಮೇಲ್ನೋಟಕ್ಕೆ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಕಾಣುತ್ತಿದೆ.ತಾಲ್ಲೂಕಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ­ಗಳಿಗೆ ತಳ ಹಂತದ ಕಾರ್ಯಕರ್ತರ ಪಡೆ ಹಾಗೂ ಭದ್ರವಾದ ರಾಜಕೀಯ ಬುನಾದಿಗಳು ಇದೆ. ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಹಾಲಿ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗ್ಡೆ­ಯವರ ಹುಟ್ಟೂರು ಇರುವುದು ಕುಂದಾಪುರ ಸಮೀಪದ ಕೊರ್ಗಿ ಎನ್ನುವ ಕಾರಣಕ್ಕಾಗಿ ಅವರು ಸ್ಥಳೀಯ ಅಭ್ಯರ್ಥಿ. ಪಕ್ಷೇತರರಾಗಿ ಕಣಕ್ಕಿಳಿ­ಯುವ ಹಾಲಾಡಿ­ಯವರ ತೀರ್ಮಾನಗಳಿಂದಾಗಿ ಕಳೆದ ಚುನಾವಣೆ­ಯಲ್ಲಿ ಹೇಳಿಕೊಳ್ಳುವಂತ ಸಾಧನೆ­ಗಳನ್ನು ಮಾಡದ ಬಿಜೆಪಿಗೆ ಈ ಬಾರಿಯ ಚುನಾ­ವಣೆಯಲ್ಲಿ ಹಾಲಾಡಿ­ಯರ ಕೆಲವು ನಿಕಟವರ್ತಿ­ಗಳು ಮರಳಿ ಬಿಜೆಪಿಯನ್ನು ಬೆಂಬಲಿಸುವ ತೀರ್ಮಾ­ನಗಳನ್ನು ಪ್ರಕಟಿಸಿರು­ವುದ­ರಿಂದ ಹೊಸ ಹುಮ್ಮಸ್ಸು ಬಂದಿದೆ.

ಪಕ್ಷೇತರ ಶಾಸಕ­ರಾಗಿರುವ ಹಾಲಾಡಿಯವರ ತಟಸ್ಥ ನಿಲುವುಗಳು ಖಂಡಿತ­ವಾಗಿಯೂ ಚುನಾವಣೆಯ ಮೇಲೆ ನೇರ ಪರಿಣಾಮಗಳನ್ನು ಉಂಟು ಮಾಡಲಿರುವುದ­ರಿಂದ ಕಾಂಗ್ರೆಸ್‌ನ ಮತಗಳಿಗೆ ಹೆಚ್ಚಾಗುತ್ತದೆ ಎನ್ನುವ ಆತ್ಮ­ವಿಶ್ವಾಸಗಳು ಆ ಪಕ್ಷದ ಮುಖಂಡ­ರಲ್ಲಿದೆ.ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲಿ ಕಳೆದ ಚುನಾವಣೆಲ್ಲಿ ಕಾಂಗ್ರೆಸ್‌ ಪಕ್ಷ ಪಡೆದುಕೊಂಡ ಮತಗಳ ಅಂತರವನ್ನು ಉಳಿಸಿಕೊಳ್ಳಲು ಶಾಸಕರು ಹಾಗೂ ಪಕ್ಷದ ಮುಖಂಡರು ನಿರಂತರ ಪ್ರಯತ್ನ­ವನ್ನು ಮಾಡುತ್ತಿ­ದ್ದಾರೆ. ಬಿಜೆಪಿ– ಕೆಜೆಪಿ ಗೊಂದಲ­ಗಳಿಂದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಅಂತರದ ಸೋಲನ್ನು ಕಂಡಿದ್ದ ಬಿಜೆಪಿ ನಾಯಕ­ರುಗಳಲ್ಲಿ ಇದೀಗ ಬಿ.ಎಸ್ ಯಡಿಯೂರಪ್ಪನವರೆ ಇಲ್ಲಿನ ಅಭ್ಯರ್ಥಿಯಾಗಿರುವುದರಿಂದ ಈ ಅಂತರ ಕಡಿಮೆ­ಯಾಗಲಿದೆ ಎನ್ನುವ ಲೆಕ್ಕಾಚಾರಗಳಿವೆ.ಒಂದೊಮ್ಮೆ ತಮ್ಮ ಪಕ್ಷದ ಶಾಸಕರನ್ನ ಹೊಂದಿದ್ದ ಜನತಾ ಪರಿವಾರ ಬದಲಾದ ರಾಜ-­ಕೀಯ ಧ್ರುವೀ­ಕರಣ­ದಿಂದಾಗಿ ಕಳೆದ ಕೆಲವು ಚುನಾವಣೆಗಳಿಂದ ರಾಜ­ಕೀಯ ಪಡಸಾಲೆಯ ನೈಪಥ್ಯಕ್ಕೆ ಸರಿದಿತ್ತು. ಈ ಬಾರಿಯ ಚುನಾವಣೆ­ಯಲ್ಲಿ ಜೆಡಿಎಸ್‌ ಶಿವಮೊಗ್ಗ ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ರಾಜ್ಯದ ಹಿರಿಯ ರಾಜಕೀಯ ಮುತ್ಸದ್ದಿ ದಿ.ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್‌ಕುಮಾರ ಅವರನ್ನು ಅಭ್ಯರ್ಥಿ­ಯಾಗಿ ಕಣಕ್ಕೀಳಿಸಿರುವುದರಿಂದ ಕ್ಷೇತ್ರದಲ್ಲಿ ಜೆಡಿಎಸ್‌ ಮೈಕೊಡವಿಕೊಂಡು ಮೇಲಕ್ಕೇಳುವ ಪ್ರಯತ್ನ ಮಾಡು­ತ್ತಿದೆ. ಬಂಗಾರಪ್ಪ ಹಾಗೂ ರಾಜ್‌ ಕುಟುಂಬ ಸ್ನೇಹಿತರು ಕ್ಷೇತ್ರದಲ್ಲಿ ಬೀಡು ಬಿಟ್ಟು ಮತ ಕ್ರೋಢಿ­ಕರಣ­ಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.ಫೀಲ್ಡ್‌ಗೆ 400?: ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುತ್ತಿರುವ ಹಣದುಬ್ಬರಗಳಿಗೆ ಪೂರಕ­ವಾಗಿ ಚುನಾವಣೆಯಲ್ಲಿನ ಕ್ಷೇತ್ರ ಕಾರ್ಯದ­ಲ್ಲಿಯೂ ದರ ಪಟ್ಟಿಗಳು ಏರಿಕೆಯಾಗುತ್ತಿದೆ­ಯಂತೆ. ಕಳೆದ ಚುನಾ­ವಣೆ­ಯಲ್ಲಿ ಊಟ– ಕಾಫಿ ನೀಡಿ ₨300 ಗೆ ಇದ್ದ ಬಟವಾಡೆ ಈ ಬಾರಿ 400ಕ್ಕೆ ಏರಿಕೆಯಾಗಿದೆಯಂತೆ. ಕಳೆದ ಬಾರಿ ತಾ.ಪಂ ಹಾಗೂ ಜಿ.ಪಂ ಮಟ್ಟದ ಪ್ರಮುಖ ನಾಯಕರುಗಳ ಪಕ್ಷಾಂತರಕ್ಕೆ 5 ಲಕ್ಷ­ವಿದ್ದರೆ, ಈ ಬಾರಿ ಅದು 15ಕ್ಕೆ ಏರಿಕೆಯಾಗಿದೆಯಂತೆ ಎನ್ನುವ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.ಪ್ರಮುಖ ರಾಜಕೀಯ ಪಕ್ಷದ ಮುಖಂಡರ ಹಾಗೂ ಆ ಪಕ್ಷಗಳನ್ನು ಬೆಂಬಲಿಸುವ ಉದ್ಯಮಿ­ಗಳ ಮನೆ ಬಾಗಿಲಿನಲ್ಲಿ ಮುಂಜಾನೆಯಿಂದ ಪಕ್ಷ ನಿಷ್ಠರ ದೊಡ್ಡ ಸಾಲುಗಳೇ ಕಾಣ ಸಿಗುತ್ತದೆ.ಕುಂದಾಪುರದ ಸಮೀಪದಲ್ಲಿ ನಡೆದ ಸಭೆಗೆ ಬಂದಿದ್ದ ಮತದಾರರ ಮನವೊಲಿಸಲು ಮತದಾರ ಪ್ರಭುಗಳಿಗೆ ಬಿರಿಯಾನಿ ರುಚಿ ತಿನ್ನಿಸಲು ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಮುಂದಾಗಿರು­ವುದು ಈ ಬಾರಿಯ ಚುನಾವಣೆಯ ಸ್ಪೆಷಲ್‌.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.