ಶುಕ್ರವಾರ, ನವೆಂಬರ್ 15, 2019
22 °C

ಮತದಾರರ ಜಾಗೃತಿ ಅಭಿಯಾನ

Published:
Updated:

ಬೆಳಗಾವಿ: `ಮತದಾರರಿಗೆ ಮತದಾನದ ಮಹತ್ವ ತಿಳಿಸಲು ಜಿಲ್ಲೆಯಲ್ಲಿ ಈಗಾಗಲೇ ಹಲವು ಜಾಗೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ' ಎಂದು ಜಿಲ್ಲಾ ಚುನಾವಣಾಧಿಕಾರಿ ಮೌನಿಷ್ ಮೌದ್ಗಿಲ್ ಹೇಳಿದರು.ಜಿಲ್ಲಾ ಆಡಳಿತ ವತಿಯಿಂದ ಮತದಾರರಿಗೆ ಜಾಗೃತಿ ಮೂಡಿಸಲು ಸಿದ್ಧ ಪಡಿಸಿರುವ ಪ್ರಚಾರ ಸಾಮಗ್ರಿಗಳನ್ನು ಮಂಗಳವಾರ ಬಿಡುಗಡೆ ಮಾಡಿದ ಅವರು, `ಪ್ರಜಾಪ್ರಭುತ್ವವನ್ನು ಗಟ್ಟಿ ಗೊಳಿಸಲು ಪ್ರತಿಯೊಬ್ಬ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಬೇಕು' ಎಂದು ಮನವಿ ಮಾಡಿದರು.`ಪ್ರತಿಯೊಬ್ಬ ಮತದಾರರಿಗೂ ಅವರ ಹೆಸರು ಯಾವ ಮತಗಟ್ಟೆಯಲ್ಲಿದೆ ಎಂಬ ಮಾಹಿತಿ ಇರುವ ಚೀಟಿಗಳನ್ನು ಚುನಾವಣಾ ಆಯೋಗದ ವತಿಯಿಂದ ಮನೆ ಮನೆಗೆ ತಲುಪಿಸಲಾಗುವುದು. ಮತಗಟ್ಟೆ ಮಾಹಿತಿ ನೀಡುವಂತಹ ಸಹಾಯವಾಣಿಯನ್ನೂ ತೆರೆಯ ಲಾಗುವುದು' ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.`ಮತದಾರರು ಜಾಗೃತರಾಗಿ ಕಡ್ಡಾಯವಾಗಿ ಮತದಾನ ಮಾಡದ ಹೊರತು, ಅತ್ಯುತ್ತಮ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿಯು ವುದಿಲ್ಲ. ಹೀಗಾಗಿ ತಪ್ಪದೇ ಮತದಾನ ಮಾಡುವ ಮೂಲಕ ಯೋಗ್ಯ ಅಭ್ಯರ್ಥಿಯ ಆಯ್ಕೆಗೆ ಮುಂದಾಗಬೇಕು' ಎಂದು ಸಲಹೆ ನೀಡಿದರು.ಜಿಲ್ಲಾ ಮಟ್ಟದ ಸ್ವೀಪ್ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿ. ಶಂಕರ ಅವರು ವಿವಿಧ ಇಲಾಖೆಗಳಿಂದ ಮತದಾರರ ಜಾಗೃತಿಗಾಗಿ ಹಮ್ಮಿಕೊಂಡಿರುವ ಕಾರ್ಯ ಕ್ರಮಗಳ ವಿವರ ನೀಡಿದರು.`ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ತಾಲ್ಲೂಕು ಮಟ್ಟದಲ್ಲಿ ಏಪ್ರಿಲ್ 3ರಿಂದ 5ರವರೆಗೆ ಜಾಗೃತಿ ಜಾಥಾ ಹಾಗೂ ಮುಂಬರುವ ದಿನಗಳಲ್ಲಿ ಯುವಜನರು ಹಾಗೂ ವಿದ್ಯಾರ್ಥಿಗಳಿಂದ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗುವುದು. ಯುವಕ- ಯುವತಿಯರ ಸೈಕಲ್ ರ‌್ಯಾಲಿ ನಡೆಸಲಾ ಗುವುದು' ಎಂದು ಅವರು ವಿವರಿಸಿದರು.ವಾರ್ತಾ ಇಲಾಖೆಯಿಂದ ಹೆದ್ದಾರಿ ಫಲಕಗಳ ಮೇಲೆ ಮತದಾನದ ಮಹತ್ವ ವಿವರಿಸುವ ಪ್ರದರ್ಶನ ಫಲಕ ಹಾಕಲಾಗುತ್ತಿದೆ. ಜಿಲ್ಲಾ ಆಡಳಿತದಿಂದ ಬೆಳಗಾವಿ ನಗರದಲ್ಲಿ 12 ಹಾಗೂ ಪ್ರತಿ ತಾಲ್ಲೂಕಿನಲ್ಲಿ ಮತದಾನ ಮಹತ್ವದ ಸಂದೇಶ ಇರುವ 2ರಿಂದ 3 ಫಲಕಗಳನ್ನು ಅಳವಡಿಸಲಾಗುತ್ತಿದೆ. ಗ್ರಾಮಗಳಲ್ಲಿ ಚಲನಚಿತ್ರ ಪ್ರದರ್ಶನ, ಭಿತ್ತಿಪತ್ರ ಹಾಗೂ ಕರಪತ್ರಗಳ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ರತಿ ಗ್ರಾಮದಲ್ಲೂ ಅಂಗನವಾಡಿ ಕಾರ್ಯಕರ್ತೆಯರಿಂದ ಜಾಥಾ ನಡೆಸಿ ಅರಿವು ಮೂಡಿಸ ಲಾಗುತ್ತಿದೆ. ಮಹಿಳಾ ಮಂಡಳ ಹಾಗೂ ಸ್ತ್ರೀಶಕ್ತಿ ಸಂಘದವರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಪ್ರತಿಯೊಂದು ಅಂಗನವಾಡಿ ಕೇಂದ್ರದ ಮುಂದೆ ಮತದಾನದ ಮಹತ್ವ ವಿವರಿಸುವ ಫಲಕವನ್ನು ಅಂಟಿಸಲಾಗುತ್ತಿದೆ ಎಂದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಶಾ ಕಾರ್ಯಕರ್ತರು ಹಾಗೂ ದಾದಿಯರಿಗೆ ತರಬೇತಿ ನೀಡಿ ಪ್ರತಿ ಮನೆ ಮನೆಗೆ ಹೋಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಮತದಾನ ಮಾಡುವ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.ಪ್ರತಿಯೊಂದು ಆಸ್ಪತ್ರೆಗಳ ಮುಂದೆ ಭಿತ್ತಿ ಪತ್ರ ಹಾಗೂ ಬ್ಯಾನರ್ ಹಾಕಲಾಗುತ್ತಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಸಭೆ ನಡೆಸಿ ಮತದಾನದ ಮಹತ್ವ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.ಶಿಕ್ಷಣ ಇಲಾಖೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ `ಪ್ರಜಾಪ್ರಭುತ್ವದಲ್ಲಿ ಮತದಾರರ ಹಕ್ಕು ಹಾಗೂ ಕರ್ತವ್ಯಗಳು' ಎಂಬ ಕುರಿತು ಕನ್ನಡ, ಇಂಗಿಷ್ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಮತದಾನದ ಮಹತ್ವ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಮತದಾನ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಗುತ್ತಿದೆ ಎಂದು ಹೇಳಿದರು.ಜಿಲ್ಲಾ ಅಗ್ರಣೀಯ ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಪ್ರತಿಯೊಂದು ಬ್ಯಾಂಕ್‌ಗಳ ಎದುರು ಬ್ಯಾನರ್ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ನಾಮಫಲಕಗಳನ್ನು ಹಾಕಲಾಗುವುದು. ನಗರದದ ಬಸ್‌ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಮೈಕ್‌ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.ಬೃಹತ್ ಜಾಥಾ

ಬೆಳಗಾವಿ:
ಮತದಾರರ ನೋಂದಣಿ ಹಾಗೂ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತದ ವತಿಯಿಂದ  ನಗರ ದಲ್ಲಿ ಮಂಗಳವಾರ ಬೃಹತ್ ಜಾಥಾವನ್ನು ನಡೆಸಲಾಯಿತು. ಬಸವೇಶ್ವರ ವೃತ್ತದಲ್ಲಿ ಜಿಲ್ಲಾಧಿಕಾರಿ ಮೌನಿಷ್ ಮೌದ್ಗಿಲ್ ಅವರು ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾ ಮಟ್ಟದ ಸ್ವೀಪ್ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಶಂಕರ ಹಾಜರಿದ್ದರು.ರ‌್ಯಾಲಿಯು ಬಸವೇಶ್ವರ ವತ್ತದಿಂದ ಪ್ರಾರಂಭವಾಗಿ ರೈಲು ನಿಲ್ದಾಣ ವೃತ್ತ, ಸಂಭಾಜಿ ವೃತ್ತ, ಲಿಂಗರಾಜ ಕಾಲೇಜು ಮಾರ್ಗವಾಗಿ ಚನ್ನಮ್ಮ ವೃತ್ತದಲ್ಲಿ ಕೊನೆಗೊಂಡಿತು. ಸುಮಾರು 4 ಕಿ.ಮೀ. ಸಾಗಿದ ರ‌್ಯಾಲಿಯಲ್ಲಿ ಸ್ಕೇಟರ್‌ಗಳು, ಯುವಕ- ಯುವತಿ ಮಂಡಳದ ಸದಸ್ಯರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಸ್ವಯಂ ಸೇವಕರು, ಹಲವು ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು, ಸೈಕ್ಲಿಂಗ್ ಕ್ರೀಡಾಪಟುಗಳು, ನಗರದ ಪ್ರಮುಖ ಕ್ರೀಡಾಪಟುಗಳು, ಕಲಾ ತಂಡಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ರ‌್ಯಾಲಿಯ ಮಾರ್ಗದುದ್ದಕ್ಕೂ ಮತದಾರರಲ್ಲಿ ಜಾಗೃತಿ ಮೂಡಿಸುವಂತಹ ಘೋಷಣೆಗಳನ್ನು ಧ್ವನಿವರ್ಧಕದಲ್ಲಿ ಹೇಳುವ ಮೂಲಕ ಮತ ದಾನದ ಕುರಿತು ಅರಿವು ಮೂಡಿಸಲಾಯಿತು. ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಹಾಗೂ ಮತದಾನದ ದಿನ ಮತಗಟ್ಟೆಗೆ ಹೋಗಿ ಮತ ಹಾಕುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಹಾಗೂ ಕರ್ತವ್ಯ ಎಂದು ಬರೆದಿರುವ ನಾಮಫಲಕಗಳನ್ನು ಪ್ರದರ್ಶಿಸಲಾಯಿತು.

ಪ್ರತಿಕ್ರಿಯಿಸಿ (+)