ಮತದಾರರ ಪಟ್ಟಿ: ಆನ್‌ಲೈನ್ ವ್ಯವಸ್ಥೆ ಸರಿಪಡಿಸಲು ಸಲಹೆ

7

ಮತದಾರರ ಪಟ್ಟಿ: ಆನ್‌ಲೈನ್ ವ್ಯವಸ್ಥೆ ಸರಿಪಡಿಸಲು ಸಲಹೆ

Published:
Updated:

ಬೆಂಗಳೂರು: `ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ ನಡೆಯುವ ಅನೇಕ ದೋಷಪೂರ್ಣ ಪ್ರಕ್ರಿಯೆಗಳಿಂದ ನಮ್ಮ ಚುನಾವಣಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯು ಹದಗೆಡುತ್ತಿದೆ' ಎಂದು ನ್ಯಾಷನಲ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಪ್ರೊ ಪಿ.ಜಿ.ಭಟ್ ಹೇಳಿದರು.ಬೆಂಗಳೂರು ವಿಜ್ಞಾನ ವೇದಿಕೆಯು ನಗರದಲ್ಲಿ ಈಚೆಗೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು `ಚುನಾವಣಾ ವ್ಯವಸ್ಥೆ' ಯ ಕುರಿತು ಉಪನ್ಯಾಸವನ್ನು ನೀಡುತ್ತ ಮಾತನಾಡಿದರು.`ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತಂದಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಆನ್‌ಲೈನ್ ವ್ಯವಸ್ಥೆ ದೋಷದಿಂದ ಕೂಡಿದೆ. ಇದು ಕಳಪೆ ಮಟ್ಟದ ತಂತ್ರಾಂಶವಾಗಿದ್ದು, ತಿದ್ದುಪಡಿಗಳನ್ನು ಮಾಡದ ಸ್ಥಿತಿ ನಿರ್ಮಾಣವಾಗಿದೆ' ಎಂದರು.`ಹಲವು ತಾಂತ್ರಿಕ ದೋಷಗಳಿಂದ ಹಾಗೂ ರಾಜಕೀಯ ಕಾರಣಗಳಿಗಾಗಿ ಮತದಾರರ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಹೆಸರುಗಳನ್ನು ಕಿತ್ತು ಹಾಕುವುದು ಕೂಡ ನಮ್ಮ ಚುನಾವಣಾ ವ್ಯವಸ್ಥೆ ಕುಸಿಯಲು ಪ್ರಮುಖ ಕಾರಣವಾಗಿದೆ. ರಾಜ್ಯದಲ್ಲಿ ಸುಮಾರು 12.75 ಲಕ್ಷ ಮತದಾರರ ಗುರುತಿನ ಚೀಟಿಗಳು ಖಾಲಿ ಗುರುತಿನ ಚೀಟಿಗಳಾಗಿವೆ. ಅಭ್ಯರ್ಥಿಗಳ ಹೆಸರು ಬದಲಾವಣೆ ಹಾಗೂ ರಾಜಕೀಯ ಕಾರಣಗಳಿಂದ ಕಳೆದ ಏಪ್ರಿಲ್‌ನಲ್ಲಿ ಶೇ 20ರಷ್ಟು ಅಂದರೆ, ಸುಮಾರು 13 ಲಕ್ಷ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಸರಿಯಾಗಿ ಗಮನವನ್ನು ಹರಿಸುತ್ತಿಲ್ಲ' ಎಂದರು.ಮತದಾರರ ಪಟ್ಟಿಗೆ ಅಭ್ಯರ್ಥಿಗಳು ಸೇರ್ಪಡೆಯಾಗಲು ಹಿಂಜರಿಯುತ್ತಿರುವುದು, ನಕಲಿ ಗುರುತಿನ ಚೀಟಿಗಳ ಹಾವಳಿ ಮತದಾನ ವ್ಯವಸ್ಥೆ ಕುಸಿಯಲು ಅತಿ ದೊಡ್ಡ ಕಾರಣವಾಗಿದೆ. ಒಂದೇ ಹೆಸರಿನ ಗುರುತಿನ ಚೀಟಿಗಳು ಹಲವು ಬಾರಿ ನೋಂದಣಿಯಾಗುವುದನ್ನು ತಪ್ಪಿಸದೇ ಇರುವುದು ಇನ್ನು ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ' ಎಂದರು.`ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳ ಜತೆ ಸರಿಯಾಗಿ ಸಂಪರ್ಕ ಸಾಧಿಸಬೇಕು. ಜನರು ಅಧಿಕಾರಿಗಳಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದು ಹಾಕಿದ್ದರೆ ಅಥವಾ ವಿಳಾಸ ಬದಲಾವಣೆಯಾಗಿದ್ದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು' ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry