ಸೋಮವಾರ, ಜೂನ್ 14, 2021
21 °C
ಲೋಕಸಭೆ ಚುನಾವಣೆ ಪೂರ್ವಸಿದ್ಧತಾ ಸಭೆ

ಮತದಾರರ ಪಟ್ಟಿ ಪರಿಶೀಲನೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲ ಮತದಾರರ ಪಟ್ಟಿ ಪರಿಶೀಲನೆ ಮಾಡುವುದು ಕಡ್ಡಾಯ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ.ರವಿ ಹೇಳಿದರು.ನಗರದ ಜಿಲ್ಲಾ ಪಂಚಾಯತಿ ಸಭಾಂಗಣ­ದಲ್ಲಿ ಗುರುವಾರ ಲೋಕಸಭೆ  ಚುನಾವಣೆ ಮೊದಲ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ವಿಳಾಸವನ್ನು ತೊರೆದಿರುವವರು, ನಿಧನರಾದವರು ಮತ್ತು ಸ್ಥಳದಲ್ಲಿ ಲಭ್ಯವಿಲ್ಲದವರ ಕುರಿತ ಖಚಿತ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.ಅದಕ್ಕಾಗಿ ಎಲ್ಲ ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಬ್ಬ ಮತದಾರರ ಮನೆಗೂ ಕ್ಷಿಪ್ರಗತಿಯಲ್ಲಿ ಭೇಟಿ ನೀಡಿ ವಾಸ್ತವಿಕ ಪಟ್ಟಿಯನ್ನು ಸಿದ್ಧಪಡಿಸಿ ತಹಶೀಲ್ದಾರರಿಗೆ ನೀಡಬೇಕು ಎಂದು ಹೇಳಿದರು.ಈ ರೀತಿಯಲ್ಲಿ ಹೊಸದಾಗಿ ಸಿದ್ಧಪಡಿಸಿದ ಪಟ್ಟಿಯ ಒಂದು ಪ್ರತಿಯನ್ನು ಆಯಾ ತಾಲ್ಲೂಕು ತಹಶೀಲ್ದಾರರು ತಮ್ಮ ಬಳಿ ಹೊಂದಿರಬೇಕು. ಮತದಾನದ ದಿನ ಅದೇ ಪಟ್ಟಿಯ ಪ್ರತಿಯೊಂದನ್ನು ಮತದಾನ ಸಿಬ್ಬಂದಿಗೆ ನೀಡಬೇಕು. ಅದನ್ನು ಆಧರಿಸಿಯೇ ಮತದಾನ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.ಸೇರ್ಪಡೆ: ಮತದಾರರ ಪಟ್ಟಿಗೆ ಹೆಸರು ಸೇರಿ­ಸಲು ಆಸಕ್ತರಾದ ಅರ್ಹರಿಗೆ ಅವಕಾಶ ಕಲ್ಪಿಸುವ ಸಲುವಾಗಿಯೇ ಮಾ.9ರ ಭಾನು­ವಾರ­ದಂದು ಎಲ್ಲ ಬೂತ್‌ಗಳನ್ನು ತೆರೆದು ಅರ್ಜಿ­ಗಳನ್ನು ವಿತರಿಸಬೇಕು. ಸಾಕಷ್ಟು ಅರ್ಜಿ­ಗಳನ್ನು ತಹಶೀಲ್ದಾರರು ಮುಂಚಿತವಾಗಿಯೇ ಬೂತ್‌ ಮಟ್ಟದ ಅಧಿಕಾರಿಗಳಿಗೆ ನೀಡಬೇಕು. ಅರ್ಹರಾದ ಯಾರಿಗೂ ಮತದಾನದ ಅವಕಾಶ ತಪ್ಪದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಕಡ್ಡಾಯ ಹಾಜರಿ:

ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೊದಲ ದಿನವಾದ ಬುಧ­ವಾರದಂದು ಹಲವು ಸಹಾಯಕ ಚುನಾವಣಾಧಿಕಾರಿ­ಗಳು ಕಾರ್ಯಸ್ಥಾನವನ್ನು ತೊರೆದಿದ್ದು ಗಮನಕ್ಕೆ ಬಂದಿದೆ. ಅದು ಜವಾಬ್ದಾರಿಯುತ­ವಲ್ಲದ ನಡೆವಳಿಕೆ, ಸಹಾಯಕ ಚುನಾವಣಾ­ಧಿಕಾರಿಗಳು, ನೀತಿ ಸಂಹಿತೆ ಅಧಿಕಾರಿಗಳು ಸೇರಿದಂತೆ ಚುನಾವಣಾ ಜವಾಬ್ದಾರಿಗಳನ್ನು ಹೊಂದಿರುವ ಯಾವ ಅಧಿಕಾರಿ, ಸಿಬ್ಬಂದಿಯೂ ಕ್ಷೇತ್ರದಲ್ಲಿ ಕಡ್ಡಾಯವಾಗಿ ಇರಲೇಬೇಕು. ಗೈರುಹಾಜರಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಮತಗಟ್ಟೆ ಗುರುತಿಸಿ: ಕ್ಷೇತ್ರದ ಎಲ್ಲೆಡೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಕ್ಷಿಪ್ರಗತಿಯಲ್ಲಿ ಗುರುತಿಸುವ ಕೆಲಸವೂ ಆಗ­ಬೇಕಾ­ಗಿದೆ.ಈ ಮುಂಚಿನ ಚುನಾವಣೆಗಳ ಹಿನ್ನೆಲೆಯಲ್ಲಿಯೇ ತಹಶೀಲ್ದಾರರ ನೇತೃತ್ವ­ದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಮತಗಟ್ಟೆಗಳನ್ನು ಗುರುತಿಸಿ ಪಟ್ಟಿ ನೀಡಬೇಕು. ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಅದನ್ನು ಕೂಲಂಕಷವಾಗಿ ಪರಿಶೀಲಿಸಿ ಅಂತಿಮ­ಗೊಳಿಸಬೇಕು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಅಗತ್ಯ ಸಿಬ್ಬಂದಿ ನಿಯೋಜಿಸ­ಬೇಕು ಎಂದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.­ವಿನೋತ್ ಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್‌ಕುಮಾರ್‌ ರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ.ಎಂ.ಜಮೀಲ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.