ಸೋಮವಾರ, ಮೇ 17, 2021
31 °C

ಮತದಾರರ ಪಟ್ಟಿ ಪರಿಷ್ಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿಯೊಬ್ಬ ಮತದಾರನಿಗೂ ಕಡ್ಡಾಯವಾಗಿ ವಿದ್ಯುನ್ಮಾನ ಭಾವಚಿತ್ರವಿರುವ ಗುರುತಿನ ಚೀಟಿ ಒದಗಿಸಬೇಕೆಂಬ ಚುನಾವಣಾ ಆಯೋಗದ ನಿರ್ದೇಶನದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಇದೇ 16ರಿಂದ ಪ್ರಾರಂಭಿಸುತ್ತಿದೆ.`ದೇಶದ ಬೇರೆ ಬೇರೆ ಮಹಾನಗರಗಳಲ್ಲಿ ವಿದ್ಯುನ್ಮಾನ ಭಾವಚಿತ್ರವಿರುವ ಗುರುತಿನ ಚೀಟಿ ವಿತರಣೆ ಪ್ರಕ್ರಿಯೆ ಶೇ 95ರಿಂದ 97ರಷ್ಟು ಪೂರ್ಣಗೊಂಡಿದ್ದರೆ, ಬೆಂಗಳೂರು ನಗರದಲ್ಲಿ ಮಾತ್ರ ಅದು ಕೇವಲ ಶೇ 80ರಷ್ಟಿದೆ.ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಶೇ ನೂರರಷ್ಟು ಮತದಾರರಿಗೆ ವಿದ್ಯುನ್ಮಾನ ಭಾವಚಿತ್ರವಿರುವ ಗುರುತಿನ ಚೀಟಿ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಇದೀಗ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಾರಂಭಿಸಲಾಗುತ್ತಿದೆ~ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಏಪ್ರಿಲ್ 16ರಿಂದ 30ರವರೆಗೆ 15 ದಿನಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆ-ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಿಸಲಿದ್ದಾರೆ. ಏ. 16ರಿಂದ ಮೇ 8ರವರೆಗೆ ಮತದಾರರು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಮೇ 23ರ ವೇಳೆಗೆ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಜೂನ್ 15ರಂದು ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದರು.ಈ ಬಾರಿ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಿಸುವ ಸಂದರ್ಭದಲ್ಲಿ ಬೀಗ ಹಾಕಿದ್ದಲ್ಲಿ ಬಾಗಿಲಿಗೆ ಚೀಟಿ ಅಂಟಿಸಲಾಗುತ್ತದೆ. ಅದರಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನೂ ನಮೂದಿಸಲಾಗುತ್ತದೆ. ಆನಂತರ ಮತದಾರರು ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಬಹುದು ಎಂದರು.ಇದೇ ಪ್ರಥಮ ಬಾರಿಗೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಗಳನ್ನು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಶನಿವಾರದಿಂದಲೇ ಮತದಾರರಲ್ಲಿ ಜಾಗೃತಿ ಮೂಡಿಸುವ ಆಂದೋಲನ ಪ್ರಾರಂಭಿಸಲಾಗಿದೆ ಎಂದು ಆಯುಕ್ತರು ವಿವರಿಸಿದರು. 2012ರ ಜನವರಿ 1ಕ್ಕೆ ಅನ್ವಯವಾಗುವ ರೀತಿ ಪರಿಷ್ಕರಿಸಿದ ಪಟ್ಟಿಯನ್ವಯ ನಗರದಲ್ಲಿ ಅಂತಿಮವಾಗಿ 65,42,118 ಮತದಾರರಿದ್ದಾರೆ. ಈ ಪೈಕಿ 52,19,725 ಮಂದಿಗೆ ವಿದ್ಯುನ್ಮಾನ ಭಾವಚಿತ್ರವಿರುವ ಗುರುತಿನ ಚೀಟಿ ನೀಡಿದ್ದರೆ, ಇನ್ನೂ 13,22,393 ಮಂದಿಗೆ ಗುರುತಿನ ಚೀಟಿ ನೀಡಬೇಕಾಗಿದೆ ಎಂದರು.ಮತದಾರರ ಪಟ್ಟಿ ಪರಿಷ್ಕರಣೆಗಾಗಿ 5,828 ಮಂದಿ ಸಿಬ್ಬಂದಿಯನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಈ ಹಿಂದೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಕೈಬಿಟ್ಟ ಅರ್ಹ ಮತದಾರರ ಹೆಸರನ್ನು ನಿಯಮ 21ರ ಪ್ರಕಾರ ಮತದಾರರ ನೋಂದಣಿ ನಿಯಮ 1960ರಂತೆ ಮತದಾರರ ಪಟ್ಟಿಯಲ್ಲಿ ಪುನರ್ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಅದಕ್ಕಾಗಿ ಪುನಃ ನಮೂನೆ-6 ಸಲ್ಲಿಸುವ ಅಗತ್ಯವಿಲ್ಲ. ಆದರೆ, ಮತದಾರರು ವಿಳಾಸಕ್ಕೆ ಸಂಬಂಧಿಸಿದ ದಾಖಲಾತಿ ನೀಡಬೇಕಾಗುತ್ತದೆ ಎಂದರು.ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಅಥವಾ ಪಟ್ಟಿಯಲ್ಲಿ ಹೆಸರಿದ್ದೂ ಭಾವಚಿತ್ರವಿಲ್ಲದ ಪಕ್ಷದಲ್ಲಿ ನಮೂನೆ 8ರಲ್ಲಿ ಭಾವಚಿತ್ರ ಪಡೆದು ವಿದ್ಯುನ್ಮಾನ ಭಾವಚಿತ್ರವಿರುವ ಗುರುತಿನ ಚೀಟಿ ನೀಡಲಾಗುತ್ತದೆ. ಹೆಸರು ಪುನರಾವರ್ತನೆ, ಸ್ಥಳಾಂತರ, ಸಾವನ್ನಪ್ಪಿರುವುದು ಅಥವಾ ವಾಸವಿಲ್ಲವೆಂದು ಕಂಡು ಬಂದಲ್ಲಿ ನಿಯಮಾನುಸಾರ ನಮೂನೆ 7ರಲ್ಲಿ ಅರ್ಜಿ ಪಡೆದು ಕೈಬಿಡಲಾಗುತ್ತದೆ. ಅದೇ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳಾಂತರವಾದ ಪಕ್ಷದಲ್ಲಿ ನಮೂನೆ 8 `ಎ~  ಪಡೆದು ಹೊಸದಾಗಿ ಭಾವಚಿತ್ರವಿರುವ ಗುರುತಿನ ಚೀಟಿ ನೀಡಲಾಗುತ್ತದೆ ಎಂದು ಹೇಳಿದರು.ಈ ಬಾರಿ ಆನ್‌ಲೈನ್‌ನಲ್ಲಿಯೂ ಹೆಸರು ಸೇರ್ಪಡೆ ಅಥವಾ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಚುನಾವಣಾ ಆಯೋಗದ ವೆಬ್‌ಸೈಟ್ ವಿಳಾಸ: www.ceo.karnic.in

ಸಂಪರ್ಕಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.