ಮಂಗಳವಾರ, ನವೆಂಬರ್ 12, 2019
19 °C

ಮತದಾರರ ಪಟ್ಟಿ ಪರಿಷ್ಕರಣೆ: 66 ಸಾವಿರ ಅರ್ಜಿ ಸ್ವೀಕಾರ

Published:
Updated:

ಹಾಸನ: `ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವುದು, ತಿದ್ದುಪಡಿ, ಹೆಸರು ತೆಗೆಸುವುದು ಹಾಗೂ ವರ್ಗಾವಣೆ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 66,889 ಅರ್ಜಿಗಳು ಸ್ವೀಕೃತಗೊಂಡಿವೆ' ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ತಿಳಿಸಿದರು.2013ರ ಜನವರಿ 16ರಂದು ಪ್ರಕಟಿಸಿದ ಹೆಚ್ಚುವರಿ ಪಟ್ಟಿಯೂ ಸೇರಿದಂತೆ ಹಾಸನದಲ್ಲಿ 12,63,170 ಅರ್ಹ ಮತದಾರರಿದ್ದಾರೆ. ಇವರಲ್ಲಿ ಶೇ 99.78ರಷ್ಟು ಮತದಾರರಿಗೆ ಗುರುತಿನ ಚೀಟಿ ನೀಡಿ ಆಗಿದೆ. ಈ ಬಾರಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಅವಧಿ ಮುಗಿದಿದ್ದು ಏ.14ರ ಬಳಿಕ ಆಯೋಗ ನಮಗೆ ಸೂಕ್ತ ಸೂಚನೆಗಳನ್ನು ನೀಡಲಿದೆ. ಅದರಂತೆ ಉಳಿದವರಿಗೂ ಗುರುತಿನ ಚೀಟಿ ನೀಡಲಾಗುವುದು ಎಂದರು.ಚೀಟಿ ಕಡ್ಡಾಯ: ಈವರೆಗೆ ಚುನಾವಣಾ ಗುರುತಿನ ಚೀಟಿ ಅಥವಾ ಆಯೋಗ ಗುರುತಿಸಿದ 14ದಾಖಲೆಗಳಲ್ಲಿ ಒಂದನ್ನು ತಂದರೆ ಮತದಾನಕ್ಕೆ ಅವಕಾಶ ನೀಡುವ ವ್ಯವಸ್ಥೆ ಇತ್ತು. ಈ ಬಾರಿ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆಯೋಗದ ಮೂಲಕವೇ ಮನೆಮನೆಗೆ ಹೋಗಿ ಮತದಾರರಿಗೆ ಚೀಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಎಪಿಕ್ ಕಾರ್ಡ್ ಇಲ್ಲದಿರುವವರು ಆ ಚೀಟಿ ತರಲೇಬೇಕು, ಬೇರೆ ದಾಖಲೆಗಳನ್ನು ಪರಿಗಣಿಸುವುದಿಲ್ಲ ಎಂದರು.ಕಠಿಣ ಕ್ರಮ: ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ವೆಚ್ಚ ಕಡಿವಾಣಕ್ಕೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸುವ ಸಲುವಾಗಿಯೇ ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ. ಯಾರೇ ಆದರೂ ಇಲ್ಲಿಗೆ ದೂರು ನೀಡಿದರೆ 24ಗಂಟೆಯೊಳಗೆ ಆ ಬಗ್ಗೆ ಜಿಲ್ಲಾಧಿಕಾರಿಗೆ ಸಂಬಂಧಪಟ್ಟ ಸಮಿತಿಯವರು ವರದಿ ನೀಡಬೇಕಾಗುತ್ತದೆ.ಇದಕ್ಕಾಗಿ ಆಯೋಗ ವೀಕ್ಷಕರನ್ನೂ ಕಳುಹಿಸಲಿದೆ.  ಈಗಾಗಲೇ ಅರಕಲಗೂಡು ತಾಲ್ಲೂಕಿನಲ್ಲಿ 3 ಹಾಗೂ ಚನ್ನರಾಯಪಟ್ಟಣದಲ್ಲಿ 2 ದೂರುಗಳು ದಾಖಲಾಗಿವೆ.ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲು ಪ್ರತ್ಯೇಕವಾಗಿ ನಾಲ್ಕು ಮಂದಿ ವೀಕ್ಷಕರು ಬರಲಿದ್ದಾರೆ. ಸಕಲೇಶಪುರ, ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಸೇರಿ ಒಬ್ಬರು, ಹಾಸನ ಮತ್ತು ಬೇಲೂರು ಕ್ಷೇತ್ರಗಳಿಗೆ ಒಬ್ಬರು ಹಾಗೂ ಅರಸೀಕೆರೆ ಮತ್ತು ಹೊಳೆನರಸೀಪುರ ಕ್ಷೇತ್ರಗಳಿಗೆ ತಲಾ ಒಬ್ಬರು ವೀಕ್ಷಕರು ಬರಲಿದ್ದಾರೆ. ಅಭ್ಯರ್ಥಿಗಳ ಚಲನವಲನಗಳ ಮೇಲೆ ವಿಡಿಯೋ ಕೆಮರಾ ಕಣ್ಣಿರುತ್ತದೆ ಎಂದು ಡಿ.ಸಿ. ಮೋಹನರಾಜ್ ತಿಳಿಸಿದರು.ಬಂದೋಬಸ್ತ್ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್,  ಜಿಲ್ಲೆಯ ಒಟ್ಟು 1882 ಮತಗಟ್ಟೆಗಳಲ್ಲಿ 571 ಸೂಕ್ಷ್ಮ ಹಾಗೂ 386 ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ ಈ ಮತಗಟ್ಟೆಗಳ ಭದ್ರತೆಗೆ ಹೆಚ್ಚಿನ ಗಮನ ಹರಿಸಲಾಗುವುದು. ಇದಲ್ಲದೆ ಜಿಲ್ಲೆಯ ಸೂಕ್ಷ್ಮ ಎನ್ನಿಸಿಕೊಂಡ 79 ಪ್ರದೇಶಗಳ ಮೇಲೆ ನಿಗಾ ಇಡಲಾಗುತ್ತಿದೆ. ರೌಡಿ ಶೀಟ್‌ನಲ್ಲಿರುವ ಹಾಗೂ ಅಪಾಯಕಾರಿ ಎನ್ನಿಸುವಂಥ 692 ಮಂದಿಗೆ ನೋಟಿಸ್ ನೀಡಿ ಅವರಿಂದ ಮುಚ್ಚಳಿಕೆ ಬರೆಯಿಸಿ ಕಳುಹಿಸುವ ಕೆಲಸ ನಡೆಯುತ್ತಿದೆ. 29 ಮಂದಿಯನ್ನು ಗಡೀಪಾರು ಮಾಡುವ ಬಗ್ಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.ಜಿಲ್ಲೆಯ 24 ಕಡೆ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗುವುದು. ಈಗಾಗಲೇ 10 ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಸಂದೇಹ ಬಂದಲ್ಲಿ ಯಾವುದೇ ವಾಹನವನ್ನು ತಡೆದು ತಪಾಸಣೆ ನಡೆಸಲಾಗುವುದು. ಹಟಾತ್ತನೆ ತಪಾಸಣೆ ನಡೆಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಕಟ್ಟಾಯ ಹೋಬಳಿಯಲ್ಲಿ ಮಂಗಳವಾರ ರಾತ್ರಿ ಮದ್ಯ ಸಾಗಾಟ ಮಾಡುತ್ತಿದ್ದಂಥ ಒಂದು ವಾಹನ ವಶಪಡಿಸಿಕೊಳ್ಳಲಾಗಿದ್ದು, ಸೂಕ್ತ ದಾಖಲೆಗಳನ್ನು ನೀಡದಿದ್ದಲ್ಲಿ ಚುನಾವಣೆ ಮುಗಿಯುವವರೆಗೆ ಆ ವಾಹನ ಮಾತ್ರವಲ್ಲದೆ ಅಂಗಡಿಯನ್ನೂ ಮುಚ್ಚಿ ಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಆನೆ ಹಾವಳಿ ಪ್ರದೇಶದಲ್ಲಿರುವ ಮತಗಟ್ಟೆಗಳ ರಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿ ಇಲ್ಲಿ ವಿಶೇಷವಾಗಿ 24  ಗಂಟೆ ಕಾಲ ಕಾರ್ಯ ನಿರ್ವಹಿಸಲಿದ್ದಾರೆ. 178 ಗ್ರಾಮಗಳ 68 ಬೂತ್‌ಗಳನ್ನು ಆನೆ ಪೀಡಿದ ಪ್ರದೇಶದವುಗಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ, ಇತರ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)