ಮತದಾರರ ಮನವೊಲಿಸಲು ಅಭ್ಯರ್ಥಿಗಳ ವಿವಿಧ ಕಸರತ್ತು

7

ಮತದಾರರ ಮನವೊಲಿಸಲು ಅಭ್ಯರ್ಥಿಗಳ ವಿವಿಧ ಕಸರತ್ತು

Published:
Updated:
ಮತದಾರರ ಮನವೊಲಿಸಲು ಅಭ್ಯರ್ಥಿಗಳ ವಿವಿಧ ಕಸರತ್ತು

ಬೆಂಗಳೂರು: ಯುಗಾದಿ ಹಬ್ಬದ ಮರುದಿನವಾದ ಮಂಗಳವಾರ ರಾಜಧಾನಿ ವ್ಯಾಪ್ತಿಯ ಮೂರೂ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರದ ಅಬ್ಬರ ತುಸು ಕಡಿಮೆ ಇತ್ತು. ಕೆಲವೇ ಅಭ್ಯರ್ಥಿಗಳು ಮಾತ್ರ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ ಮತದಾರ­ರನ್ನು ಸಂಪರ್ಕಿಸಿ, ಮನವೊಲಿಸುವ ಯತ್ನಿಸಿದರು.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಂದನ್‌ ನಿಲೇಕಣಿ ಅವರಿಗೆ ಕೆಲವು ಸಾಹಿತಿಗಳು, ಕಲಾವಿದರು ಮಂಗಳ­ವಾರವೂ ‘ಸಾಥ್’ ನೀಡಿದರು. ಬೆಳಿಗ್ಗೆ ಲಾಲ್‌ಬಾಗ್‌ನಲ್ಲಿ ಅವರು ಮತ ಯಾಚಿಸಿದರು.ಹಿರಿಯ ಸಾಹಿತಿಗಳಾದ ಗಿರೀಶ್ ಕಾರ್ನಾಡ್,  ಪ್ರೊ.ಕೆ.ಮರುಳಸಿ­ದ್ಧಪ್ಪ, ನಟ ಹಾಗೂ ಬರಹಗಾರ ಪ್ರೊ.ಜಿ.ಕೆ.ಗೋವಿಂದರಾವ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್‌ ಮತ್ತಿತರರು ಕಾಂಗ್ರೆಸ್‌ ಅಭ್ಯರ್ಥಿ ನಿಲೇಕಣಿ ಅವರೊಂದಿಗೆ ಮತದಾರರನ್ನು ಭೇಟಿಮಾಡಿ ಬೆಂಬಲ ಕೋರಿದರು.ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ಬೆಂಬಲಿ­ಗರ ಜೊತೆಗೂಡಿ ಹಲಸೂರು ಕೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರಚಾರ ನಡೆಸಿದರು. ಬೆಳಿಗ್ಗೆ ಕೆರೆಯ ಏರಿ ಮೇಲೆ ವಾಯುವಿಹಾರಕ್ಕೆ ಬಂದವರನ್ನು ಭೇಟಿ ಮಾಡಿದ ಅವರು, ಚುನಾವಣೆ­ಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿ­ದರು. ನಂತರ ಸುತ್ತಲಿನ ಹಲವು ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು.ಇದೇ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರು ಇಂದಿರಾನಗರದ ಆಚಾರ್ಯ ಶ್ರೀ ರಾಕುಂ ಅಂಧರ ಶಾಲೆಗೆ ಬೆಳಿಗ್ಗೆ ಭೇಟಿ ನೀಡಿ­ದರು. ಅಲ್ಲಿನ ಸಿಬ್ಬಂದಿ ಹಾಗೂ ಮಕ್ಕಳೊಂದಿಗೆ ಮಾತನಾಡಿದ ಅವರು, ತಮ್ಮ ಗುರಿ ಮತ್ತು ಉದ್ದೇಶಗಳ ಕುರಿತು ಮಾಹಿತಿ ಹಂಚಿಕೊಂಡರು.ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿ.ನಾರಾಯಣಸ್ವಾಮಿ ಬ್ಯಾಟರಾಯನ­ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು. ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಜೊತೆಗಿದ್ದರು. ಹಬ್ಬದ ಸಡಗರದ ನಡುವೆಯೇ ಮತ­ದಾರರನ್ನು ಭೇಟಿಮಾಡಿ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದರು.ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಮತ್ತು ಬೆಂಗ­ಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಮಂಗಳವಾರ ಪ್ರವಾಸದಲ್ಲಿದ್ದರು. ಹೀಗಾಗಿ ಇಬ್ಬರೂ ಮಂಗಳ­ವಾರ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿಲ್ಲ.ದೇವೇಗೌಡ ಸಮಾಲೋಚನೆ

ನಗರದ ಮೂರೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳ ಗೆಲುವಿನ ಕಾರ್ಯತಂತ್ರದ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮಂಗಳವಾರ ಸಮಾಲೋಚನೆ ನಡೆಸಿದರು.

ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ನಂದಿನಿ ಆಳ್ವ, ಉತ್ತರ ಕ್ಷೇತ್ರದ ಅಭ್ಯರ್ಥಿ ಅಬ್ದುಲ್‌ ಅಜೀಂ, ದಕ್ಷಿಣ ಕ್ಷೇತ್ರದ ಅಭ್ಯರ್ಥಿ ರೂತ್‌ ಮನೋರಮಾ ಭಾಗವಹಿಸಿದ್ದರು. ಕಾಂಗ್ರೆಸ್, ಬಿಜೆಪಿ ಸೋಲಿಸಲು ಅನುಸರಿಸಬೇಕಾದ ಕಾರ್ಯತಂತ್ರ. ಚುನಾವಣಾ ವೆಚ್ಚ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್, ಬಿಜೆಪಿ ಆಡಳಿತದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಪಕ್ಷದ ಅಭ್ಯರ್ಥಿಗಳು, ಕಾರ್ಯಕರ್ತರು ಶ್ರಮಿಸಬೇಕು ಎಂದು ಸೂಚಿಸಿದರು.ಆದಿಚುಂಚನಗಿರಿ ಮಠಕ್ಕೆ ಭೇಟಿ: ಅಬ್ದುಲ್‌ ಅಜೀಂ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಮಂಗಳವಾರ ಭೇಟಿ ಮಾಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗೆಲುವು ಖಚಿತ. ಮತದಾರರು ಜೆಡಿಎಸ್ ಪರವಾಗಿ ಇದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry