ಮತದಾರ ಚೀಟಿ: ಇನ್ನು ಸುಲಭ- ಆನ್‌ಲೈನ್ ಅರ್ಜಿಗೆ ಅವಕಾಶ

7

ಮತದಾರ ಚೀಟಿ: ಇನ್ನು ಸುಲಭ- ಆನ್‌ಲೈನ್ ಅರ್ಜಿಗೆ ಅವಕಾಶ

Published:
Updated:

ಬೆಂಗಳೂರು: ಹದಿನೆಂಟು ವರ್ಷ ತುಂಬಿದವರು ಮತದಾರರ ಗುರುತಿನ ಚೀಟಿ ಹೊಂದುವ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಿದೆ.ಹೊಸ ಮತದಾರರು ಅರ್ಜಿ ಸಲ್ಲಿಸುವುದು ಮಾತ್ರವಲ್ಲದೆ, ವಿಳಾಸ ಬದಲಾವಣೆ, ಈಗಾಗಲೇ ನೀಡಲಾಗಿರುವ ಮತದಾರರ ಗುರುತಿನ ಚೀಟಿಯಲ್ಲಿ ಇರಬಹುದಾದ ತಪ್ಪುಗಳನ್ನು ಸರಿಪಡಿಸುವ ಅವಕಾಶವೂ ಲಭ್ಯವಾಗಲಿದೆ.ಈ ಕುರಿತು ಇಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಡಾ.ಸಿ.ಎಸ್. ಸುರಂಜನ ಅವರು, `ಅಂತರ್ಜಾಲದಲ್ಲಿ ಈ ಸೌಲಭ್ಯ ಕಲ್ಪಿಸುವ ವೆಬ್‌ಸೈಟ್‌ಗೆ (ಡಿಡಿಡಿ.ಟಠಿಛ್ಟ್ಟಿಛಿಜ.ಚ್ಟ.್ಞಜ್ಚಿ.ಜ್ಞಿ) ಇದೇ ಒಂದರಿಂದ ಚಾಲನೆ ನೀಡಲಾಗಿದೆ. ಇಲ್ಲಿಯವರೆಗೆ 48 ಸಾವಿರ ಮಂದಿ ಇದರಿಂದ ಮಾಹಿತಿ ಪಡೆದಿದ್ದಾರೆ~ ಎಂದು ತಿಳಿಸಿದರು.ಎಂಟು ಸಾವಿರ ಮಂದಿ ಈ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ, 3,800 ಮಂದಿ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡ ನಂತರ, ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಗತ್ಯ ಮಾಹಿತಿ ಭರ್ತಿ ಮಾಡಿ, ಸಹಿ ಮಾಡಿದ ಅರ್ಜಿಯನ್ನು ಸಹಾಯಕ ಚುನಾವಣಾ ನೋಂದಣಾಧಿಕಾರಿ (ಎಇಆರ್‌ಒ) ಅವರಿಗೆ ಕಳುಹಿಸಬೇಕು. ಇದರ ಜೊತೆ ಅರ್ಜಿದಾರರ ವಿಳಾಸ ಮತ್ತು ವಯಸ್ಸನ್ನು ಧೃಡೀಕರಿಸುವ ಅಗತ್ಯ ದಾಖಲೆಗಳನ್ನೂ ಸಲ್ಲಿಸಬೇಕು ಎಂದು ಹೇಳಿದರು.ಎಇಆರ್‌ಒ ಮತ್ತು ಚುನಾವಣಾ ನೋಂದಣಾಧಿಕಾರಿಗಳ ವಿಳಾಸವನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಇಲ್ಲಿಯವರೆಗೆ ಆನ್‌ಲೈನ್ ಮೂಲಕ ಅರ್ಜಿ ನೀಡಲಾಗುತ್ತಿರಲಿಲ್ಲ. ಈಗ ಜಾರಿಗೆ ಬಂದಿರುವ ವ್ಯವಸ್ಥೆಯ ಕಾರಣ ಎಇಆರ್‌ಒ ಬಳಿ ಆನ್‌ಲೈನ್ ಮತ್ತು ಲಿಖಿತ ಅರ್ಜಿಯ ಪ್ರತಿಗಳಿರುತ್ತವೆ. ಇದರಿಂದಾಗಿ ಮತದಾರರ ಗುರುತಿನ ಚೀಟಿಯಲ್ಲಿ ತಪ್ಪುಗಳು ನುಸುಳುವುದು ಕಡಿಮೆಯಾಗುತ್ತದೆ ಎಂದು ಹೇಳಿದರು.ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಅರ್ಜಿ ನಮೂನೆ 6, ಪಟ್ಟಿಯಿಂದ ತೆಗೆಯಲು ಅರ್ಜಿ ಸಮೂನೆ 7, ಬದಲಾವಣೆಗೆ ಅರ್ಜಿ ನಮೂನೆ 8 ಮತ್ತು ಸ್ಥಳ ಬದಲಾವಣೆಗೆ 8ಎ ನಮೂನೆಯ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿದಾರರು ಆನ್‌ಲೈನ್ ಮೂಲಕವೇ ತಮ್ಮ ಭಾವಚಿತ್ರವನ್ನು ಆಯೋಗಕ್ಕೆ ಸಲ್ಲಿಸಬೇಕು.ಅರ್ಜಿದಾರರಿಗೆ `ಅರ್ಜಿ ಸಂಖ್ಯೆ~ಯನ್ನು ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಬಹುದು. ಈ ಪ್ರಕ್ರಿಯೆ ಪೂರ್ಣಗೊಳ್ಳಲು 15 ದಿನ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry