ಮತದಾರ ಪಟ್ಟಿ ಸಿದ್ಧತೆಯಲ್ಲಿ ಗೋಲ್‌ಮಾಲ್: ಆಕ್ರೋಶ

7

ಮತದಾರ ಪಟ್ಟಿ ಸಿದ್ಧತೆಯಲ್ಲಿ ಗೋಲ್‌ಮಾಲ್: ಆಕ್ರೋಶ

Published:
Updated:

ಲಿಂಗಸುಗೂರ: ಸ್ಥಳೀಯ ಪುರಸಭೆ ಚುನಾವಣೆಗೆ ಸಂಬಂಧಿಸಿ ಸಿದ್ಧಗೊಳ್ಳುತ್ತಿರುವ ಮತದಾರಪಟ್ಟಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಜಕೀಯ ದೊಂಬರಾಟ ನಡೆಸುವ ಮೂಲಕ ಮನಸೋ ಇಚ್ಛೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಒಂದು ರಾಜಕೀಯ ಗುಂಪಿಗೆ ಬೆಂಬಲಿಸುವ ಸಾಧ್ಯತೆಗಳು ಸ್ಪಷ್ಟವಾಗಿವೆ. ಇಂತಹ ದೋಷಪೂರಿತ ಮತದಾರಪಟ್ಟಿ ಸರಿಪಡಿಸದೆ ಹೋದಲ್ಲಿ ಹೋರಾಟ ಅನಿವಾರ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಮುಖಂಡ ಪಾಮಯ್ಯ ಮುರಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಮುದ್ರಣಗೊಂಡು ಬಂದಿರುವ ಮತದಾರಪಟ್ಟಿಗಳನ್ನು ಪರಿಶೀಲಿಸಲಾಗಿ ಪ್ರತಿಯೊಂದು ವಾರ್ಡ್‌ನಲ್ಲಿ ನಿಗದಿತ ಮತದಾರರಿಗಿಂತ ದುಪ್ಪಟ್ಟು ಮತದಾರರ ಹೆಸರು ಮುದ್ರಣಗೊಂಡಿರುವುದು ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ. ವಾರ್ಡ್ ನಂಬರ 18ರ ಮತದಾರ ಪಟ್ಟಿ ಪರಿಶೀಲಿಸಲಾಗಿ ಇದರಲ್ಲಿ ಇತರೆ ವಾರ್ಡ್‌ಗಳ ಮತಪಟ್ಟಿಯಲ್ಲಿರುವ ಹೆಸರುಗಳನ್ನು ಮನಸೋ ಇಚ್ಚೆ ಸೇರ‌್ಪಡೆ ಮಾಡಿ 3302 ಮತದಾರರ ಪಟ್ಟಿ ಸಿದ್ಧಗೊಂಡಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಾಬೀತುಪಡಿಸುತ್ತದೆ ಎಂದು ಕ್ರಮಬದ್ಧವಾಗಿ ವಿವರಿಸಿದರು.ಮತದಾರಪಟ್ಟಿಯಲ್ಲಿ 18 ವರ್ಷ ತುಂಬಿದವರ ಹೆಸರು ಸೇರ‌್ಪಡೆ. ಈಗಾಗಲೆ ಮತದಾರಪಟ್ಟಿಯಲ್ಲಿ ಇದ್ದವರು ವರ್ಗಾವಣೆ ಅಥವಾ ತೆಗೆದು ಹಾಕಲು ಅರ್ಜಿ ಸಲ್ಲಿಸಿ ಮತದಾರ ಪಟ್ಟಿ ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅರ್ಜಿ ನೀಡದ, ವರ್ಗಾವಣೆ ಬಯಸದ ಸಾವಿರಾರು ಮತದಾರರು ಪ್ರತಿ ವಾರ್ಡ್‌ನಲ್ಲಿ ಸೇರ‌್ಪಡೆಯಾಗಿದ್ದು ಯಾವ ಆಧಾರದಲ್ಲಿ.

ಕೆಲ ಮತದಾರರ ಹೆಸರು 70-80 ಕಡೆಗಳಲ್ಲಿ ಮುದ್ರಣಗೊಂಡಿರುವುದನ್ನು ಕೂಡ ಕೂಲಂಕುಷವಾಗಿ ತಹಸೀಲ್ದಾರ ಜಿ. ಮುನಿರಾಜಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಾಗ ತಹಸೀಲ್ದಾರ ಕೂಡ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡಿದ್ದರು.

ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತದಾರಪಟ್ಟಿ ದೋಷಗಳ ಕುರಿತು ಇಷ್ಟೊಂದು ಸಮಗ್ರ ಮಾಹಿತಿ ನೀಡಿದಾಗ್ಯೂ ಕೂಡ ಸಿಬ್ಬಂದಿ ವಹಿಸುತ್ತಿರುವ ನಿರ್ಲಕ್ಷ್ಯ ನಾಚಿಗೇಡು.

ಪುರಸಭೆ ಸಿಬ್ಬಂದಿ ಇಷ್ಟೊಂದು ನಿರ್ಲಕ್ಷ್ಯ ವಹಿಸುತ್ತಾರೆ ಎಂದು ನಂಬಿರಲಿಲ್ಲ. ಒಂದೆರಡು ತಪ್ಪುಗಳು ಆಗುವುದು ಸಹಜ. ಸಾವಿರಾರು ಮತದಾರರ ಹೆಸರು ಎಲ್ಲೆಂದರೆಲ್ಲಿ ಮುದ್ರಣಗೊಂಡಿರುವುದು ವಿಷಾಧನೀಯ. ಇಡಿ ಪುರಸಭೆ ವ್ಯಾಪ್ತಿಯ ಮತದಾರಪಟ್ಟಿಗಳನ್ನು ಪರಿಶೀಲಿಸಿ ದೋಷರಹಿತ ಮುದ್ರಣಕ್ಕೆ ಸಹಕಾರ ನೀಡಬೇಕು. ಇಲ್ಲದೆ ಹೋದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಮಾನಪ್ಪ ಚವ್ಹಾಣ, ಪುರಸಭೆ ಸದಸ್ಯರಾದ ಬಸವರಾಜ ಗುತ್ತೆದಾರ, ರುದ್ರಪ್ಪ ಬ್ಯಾಗಿ. ಯುವ ಕಾಂಗ್ರೆಸ್ ಅಧ್ಯಕ್ಷ ಅಮೀನ್ ಪಟೇಲ್. ಮುಖಂಡರಾದ ಶರಣಯ್ಯ ಹಿರೇಮಠ, ಶ್ರೀನಿವಾಸ ಮನ್ನೂರು, ಬಸವರಾಜ ಮೇಟಿ, ಬಸವರಾಜಗೌಡ, ಅಬ್ದುಲ್ ಕೆಕೆಎಸ್‌ಆರ್, ವಿಶ್ವನಾಥ ಬಡಿಗೇರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry