ಬುಧವಾರ, ನವೆಂಬರ್ 13, 2019
23 °C

`ಮತದ ಮೂಲಕ ನೀರಿನ ಹಕ್ಕು ಪಡೆಯಿರಿ'

Published:
Updated:

ಮಂಡ್ಯ: ಕಾವೇರಿ ನೀರು ವಿವಾದದಲ್ಲಿ ನೀರು ಉಳಿಸಿಕೊಳ್ಳುವ ನಿರ್ಧಾರ ನೀವು ಚಲಾಯಿಸುವ ಮತದಲ್ಲಿದೆ. ನೀರಿನ ವಿಷಯದಲ್ಲಿ ನ್ಯಾಯ ಸಿಗಬೇಕಾದರೆ ಹಿತ ಕಾಪಾಡದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಬಿಟ್ಟು ಜೆಡಿಎಸ್ ಬೆಂಬಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು.ತಾಲ್ಲೂಕಿನ ಮಲ್ಲನಾಯಕನಕಟ್ಟೆಯಲ್ಲಿ ಸೋಮವಾರ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಅವರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಾಂಗ್ರೆಸ್‌ನ ನಾಲ್ವರು ಕೇಂದ್ರ ಸಚಿವರಿದ್ದರೂ ನೀರಿನ ವಿಷಯದಲ್ಲಿ ಚಕಾರ ಎತ್ತಲಿಲ್ಲ. ರಾಜ್ಯವನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್‌ನ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ನೀರು ನಿರ್ವಹಣಾ ಸಮಿತಿಯನ್ನು ರಚಿಸದಂತೆ ಒತ್ತಡ ತರುವ ಕೆಲಸವನ್ನು ಮುಂದುವರೆಸಲಾಗಿದೆ. ಅಗತ್ಯ ಬಿದ್ದರೆ, ಅಮರಣಾಂತ ಉಪವಾಸ ಮಾಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹೇಳಿದ್ದಾರೆ ಎಂದರು.ಹಗಲು ಹೊತ್ತಿನಲ್ಲಿ ಹಸಿರು ಟವೆಲ್ ಹಾಕಿಕೊಂಡು ಹೋರಾಟದ ಫೋಜು ನೀಡುವ ನಾಯಕರು, ರಾತ್ರಿ ವೇಳೆ ಬೇರೆ, ಬೇರೆ ರಾಜಕೀಯ ಪಕ್ಷಗಳ ನಾಯಕರ ಮನೆಯಲ್ಲಿರುತ್ತಾರೆ. ಅಂಥವರ ಬಗ್ಗೆ ಎಚ್ಚರದಿಂದಿರಬೇಕು ಎಂದರು.ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಲಾಗುವುದು. ವೃದ್ಧರು, ವಿಧೆಯರ ಮಾಸಾಶನವನ್ನು ರೂ 1400ಗೆ ಏರಿಸಲಾಗುವುದು. 70 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ರೂ 5 ಸಾವಿರ  ನೀಡಲಾಗುವುದು ಎಂದರು.ಕೃಷಿಯಲ್ಲಿ ತೊಡಗಿಸಿಕೊಂಡಿರುವ 87 ಲಕ್ಷ ಖಾತಾದಾರರಿಗೆ ಪ್ರತಿ ವರ್ಷ ಸಂಕ್ರಾಂತಿಗೆ ಕೃಷಿ ಚಟುವಟಿಕೆಗಾಗಿ ರೂ 5 ಸಾವಿರ ನೀಡಲಾ ಗುವುದು. ಆದ್ದರಿಂದ ಸಿ.ಎಸ್. ಪುಟ್ಟರಾಜು ಅವರನ್ನು ಗೆಲ್ಲಿಸುವ ಮೂಲಕ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕು ಎಂದು ಕೋರಿದರು.

ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ಹಸಿರು ಟವೆಲ್ ಹಾಕಿಕೊಂಡು ಜನರನ್ನು ಮೋಸ ಮಾಡುತ್ತೇನೆ ಎಂಬ ಭ್ರಮೆಯನ್ನು ರೈತ ನಾಯಕರು ಬಿಡಬೇಕು ಎಂದರು.ಮಾಜಿ ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಜಿ.ಬಿ. ಶಿವಕುಮಾರ್, ಎಚ್.ಬಿ. ರಾಮು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಂಕರೇಗೌಡ ಮಾತನಾ ಡಿ ದರು. ಜಿಲ್ಲಾ ಘಟಕದ ಅಧ್ಯಕ್ಷ ಡಿ. ರಮೇಶ್, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಅಶೋಕ್ ಜಯರಾಂ, ಜಿ.ಪಂ. ಸದಸ್ಯರಾದ ಮಾದಪ್ಪ, ಮಂಜುಳಾ ಪರಮೇಶ್, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎಚ್.ಎಲ್. ಶಿವಣ್ಣ ಇತರರು ಹಾಜರಿದ್ದರು.`ಅಂಬರೀಷ್ ಉತ್ತಮ ಸ್ನೇಹಿತ'

ಮಂಡ್ಯ:
ಚಲನಚಿತ್ರ ನಟ ಅಂಬರೀಷ್ ಉತ್ತಮ ಸ್ನೇಹಿತರು. ಆದರೆ ಚುನಾವಣೆಯಲ್ಲಿ ಮಾತ್ರ ಜೆಡಿಎಸ್ ಮಹಾಭಾರತದ ಪಾಂಡವರ ನಿಲುವನ್ನೇ ಅನುಸರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಮಂಡ್ಯ ತಾಲ್ಲೂಕಿನ ಮಲ್ಲನಾಯಕನಕಟ್ಟೆಯಲ್ಲಿ ಮೇಲುಕೋಟೆ ವಿಧಾನಸಭಾ ಚುನಾವಣೆ ಪ್ರಚಾರ ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಯವನ್ನು ರಕ್ಷಿಸಲು ಮಹಾಭಾರತದಲ್ಲಿ ಪಾಂಡವರು ಸಹೋದರರ ವಿರುದ್ಧವೇ ಯುದ್ಧ ಮಾಡಿದರು. ಅದೇ ನೀತಿಯನ್ನು ಅನುಸರಿಸಲಾಗುವುದು. ಮಂಡ್ಯ ವಿಧಾನಸಭೆ ಕ್ಷೇತ್ರದಲ್ಲಿ ಒಂದಷ್ಟು ಗೊಂದಲಗಳಿವೆ. ಅವುಗಳನ್ನು ಬಗೆಹರಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗವುದು ಎಂದರು. ಮಾ.10 ರಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)