ಶುಕ್ರವಾರ, ನವೆಂಬರ್ 15, 2019
24 °C

ಮತಬೇಟೆಯ ಹಾವು-ಏಣಿ ಆಟಕ್ಕೆ ಸನ್ನದ್ಧ

Published:
Updated:

ಗುಲ್ಬರ್ಗ: ಗುಲ್ಬರ್ಗ ಜಿಲ್ಲೆಯ ಒಂಬತ್ತು ವಿಧಾನಸಭಾ ಚುನಾವಣಾ ಕ್ಷೇತ್ರಗಳ ಚುನಾವಣಾ ಹಾವು- ಏಣಿ ಆಟಕ್ಕೆ ಕಣ ಸಿದ್ಧವಾಗಿದೆ. ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಮೈಕ್ ಪ್ರಚಾರ ಕಡಿಮೆ. ಬ್ಯಾನರ್, ಪೋಸ್ಟರ್‌ಗಳೇ ಇಲ್ಲ. ಜೊತೆಗೆ ಹಿಂದಿನ ಸಲದಂತೆ ನೇರ ಸ್ಪರ್ಧೆಯ ಸಾಧ್ಯತೆಯೂ ಇಲ್ಲದೆ ಅಭ್ಯರ್ಥಿಗಳು `ನುಂಗುವ ಹಾವು- ಏರಲು ಸಿಗುವ ಏಣಿಯನ್ನು' ಎದುರಿಸಿ ಮುಂದುವರಿಯಬೇಕಾದ ಸ್ಥಿತಿ ಎಲ್ಲೆಡೆ ಕಾಣಿಸಿದೆ.

ನೀರಿಲ್ಲ, ಹೆಣ್ಮಕ್ಕಳಿಗೆ ಸಂಡಾಸ್ ಇಲ್ಲ. ಜಾನುವಾರುಗಳಿಗೆ ನೀರಿನ ಸಮಸ್ಯೆ- ಇವು ಸ್ವತಃ ಸಚಿವರೇ ಆಗಿರುವ ರೇವುನಾಯಕ ಬೆಳಮಗಿ ಪ್ರತಿನಿಧಿಸಿದ ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಗಳ ಎದುರಿನ ಸವಾಲುಗಳು. `ಪಾರ್ಟಿ ನೋಡ್ಬೇಕ್ರಿ ಸರ' ಎಂಬ ಮಾತು ಇಲ್ಲಿನ ನಿವಾಸಿ ಬಸವರಾಜ ಕುಲಕರ್ಣಿ ಅವರದಾದರೆ, `ಜನ ಭಾಳ ಉಶಾರ್ ಅದಾರ. ಆದ್ರೂ ಊರು ಹಿಂದ ಬಿದ್ದೇತಿ ನೋಡ್ರಿ' ಎಂದು ಶಂಭುಲಿಂಗಯ್ಯ ವಿವರಿಸುತ್ತಾರೆ.`ಹಳ್ಳ ಒಣಗೈತ್ರಿ; ಬಾವ್ಯಾಗ ನೀರಿಲ್ರಿ' ಎಂದು ಇದೇ ಕ್ಷೇತ್ರದ ಇಟಗಾದ ನಿವಾಸಿ ಅಬ್ಬಾಸ್ ಪಟೇಲ್ ನೋವು ತೋಡಿಕೊಳ್ಳುತ್ತಾರೆ. ಇತ್ತ ಗುಲ್ಬರ್ಗ ಉತ್ತರ ಕ್ಷೇತ್ರದಲ್ಲಿ ಮಾಜಿ ಸಚಿವ ಖಮರುಲ್ ಇಸ್ಲಾಂ ಮತ್ತೊಮ್ಮೆ ಪರೀಕ್ಷೆಗೆ ಇಳಿದಿದ್ದಾರೆ. ಕೆಜೆಪಿ- ಬಿಜೆಪಿ ಸ್ಪರ್ಧೆ ಎದುರಿಸುತ್ತಿದ್ದಾರೆ.ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ (ಪ್ರಿಯಾಂಕ ಖರ್ಗೆ) - ಕೆಜೆಪಿ (ಸಿ. ಗುರುನಾಥ) ಹವಾ ಇದೆ ಎಂದು ಹೆಬ್ಬಾಳದ ಶಿವರಾಜ ಸಣ್ಣೂರ ವಿಶ್ಲೇಷಣೆ ಮಾಡುತ್ತಾರೆ. ಇಲ್ಲಿ ಗೌಡ್ರು (ಹಿಂದಿನ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ) ಚಲೋ ಕೆಲ್ಸ ಮಾಡ್ಯಾರ. ಕಾಂಗ್ರೆಸ್‌ಗೇ ಚಾನ್ಸ್ ಐತ್ರಿ' ಎಂದು ಜಗನ್ನಾಥ ನುಡಿಯುತ್ತಾರೆ. `ಹಾಲಿ ಶಾಸಕ ಬಿಜೆಪಿ ವಾಲ್ಮೀಕಿ ನಾಯಕ ಜೊತೆಗಿದ್ದ ಹಲವಾರು ನಾಯಕರು ಬಿಜೆಪಿಯಿಂದ ಕೆಜೆಪಿಗೆ ವಲಸೆ ಹೋದ ಕಾರಣ ಪ್ರಿಯಾಂಕ ಚಾನ್ಸ್ ಜಾಸ್ತಿ ಆಗಿದೆ. ಆದರೆ ಕೆಜೆಪಿಯ ಅಭ್ಯರ್ಥಿ, ಮಾಜಿ ಸಚಿವ ಸಿ. ಗುರುನಾಥ ಅವರು ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕಿದರೆ ಲೆಕ್ಕಾಚಾರ ತಲೆಕೆಳಗಾದೀತು' ಎಂದು ಚಿತ್ತಾಪುರದ ನಿವಾಸಿ ಮಂಜುನಾಥ ವಿವರಿಸುತ್ತಾರೆ.ಅಫಜಲಪುರದಲ್ಲಿ ಸ್ಥಳೀಯರೇ ಹೇಳುವಂತೆ ಹುಲಿಗಳ ನಡುವೆ ಕಾದಾಟ ನಡೆಯುತ್ತಿದೆ. ಕಾಂಗ್ರೆಸ್‌ನ ಮಾಲೀಕಯ್ಯ ಗುತ್ತೇದಾರ, ಕೆಜೆಪಿಯ ಎಂ.ವೈ.ಪಾಟೀಲ ಕಣದಲ್ಲಿ ಗೆಲುವಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇತ್ತ ಆಳಂದದಲ್ಲೂ ಜೆಡಿಎಸ್‌ನ ಸುಭಾಷ್ ಗುತ್ತೇದಾರ ಮತ್ತು ಕೆಜೆಪಿಯ ಬಿ.ಆರ್. ಪಾಟೀಲರ ನಡುವೆ ಪೈಪೋಟಿ ಎದ್ದು ಕಾಣುತ್ತಿದೆ.ಜೇವರ್ಗಿಯಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ಎಂಟು ಬಾರಿ ಗೆಲುವಿನ ಸರದಾರ ಧರ್ಮಸಿಂಗ್ ಅವರನ್ನು ಸೋಲಿಸಿದ್ದ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮತ್ತು ಧರ್ಮಸಿಂಗ್ ಅವರ ಪುತ್ರ ಡಾ. ಅಜಯಸಿಂಗ್ (ಕಾಂಗ್ರೆಸ್) ಶಾಸಕ ಸ್ಥಾನ ಗೆಲ್ಲಲು ಜಿದ್ದಾಜಿದ್ದಿ ನಡೆಸುತ್ತಿದ್ದಾರೆ.ಒಂದೇ ಆಗಿದ್ದ ಬಿಜೆಪಿ ಇದೀಗ ಮೂರು ಪಕ್ಷವಾಗಿ (ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್) ಬೇರ್ಪಟ್ಟಿರುವುದು, 371ನೇ ವಿಧಿ ಕುರಿತ ತಿದ್ದುಪಡಿಗೆ ಅಂಕಿತ ಬಿದ್ದಿರುವುದನ್ನು ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಜನರ ಮುಂದಿಡುತ್ತಿದೆ.`ಅಭಿ ಕುಛ್ ಭೀ ಬೋಲ್ ನಹಿ ಸಕ್ತಾ ಹೈ. ಎಲೆಕ್ಷನ್ ಕೇ ದೋ ತೀನ್ ದಿನ್ ಪೆಹಲೇ ಕುಛ್ ತೋ ಬೋಲ್ ಸಕ್ತಾ ಹೈ' ಎಂದು ಚಿತ್ತಾಪುರ ಕ್ಷೇತ್ರದ ದಂಡೋತಿ ನಿವಾಸಿ ಮಶಾಕ್ ಸಾಬ್ ಹೇಳುತ್ತಾರೆ. ಚುನಾವಣೆ ರಂಗ ನಿಧಾನವಾಗಿ ರಂಗೇರುತ್ತಿದೆ. ಜನರಲ್ಲಿ ಚುನಾವಣೆ ಬಂದಿದೆ ಎಂಬ ಅರಿವು ಮೂಡಿದೆ. ಯಾರಿಗೆ ಮತ ಎಂಬುದೂ ನಿರ್ಧಾರವಾಗಿದೆ. ಜಾಣ ಮತದಾರರು ಯಾರನ್ನು ಅಧಿಕಾರದ ಗದ್ದುಗೆಗೆ ಏರಿಸುತ್ತಾರೆ ಎಂಬ ಯಕ್ಷಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಲಭಿಸಲಿದೆ.

ಜಿಲ್ಲಾ ಅಧ್ಯಕ್ಷರ ಕಾದಾಟ

ಗುಲ್ಬರ್ಗ:
ಸೇಡಂ ಎರಡು ಪ್ರಮುಖ ಪಕ್ಷಗಳ ಜಿಲ್ಲಾ ಘಟಕದ ಅಧ್ಯಕ್ಷರ ಸೆಣಸಾಟದ ಕಣ. ಕಾಂಗ್ರೆಸ್‌ನಿಂದ ಆ ಪಕ್ಷದ ಜಿಲ್ಲಾಧ್ಯಕ್ಷರೂ ಆಗಿರುವ ಡಾ. ಶರಣಪ್ರಕಾಶ ಪಾಟೀಲರು ಎರಡು ಬಾರಿ ಗೆದ್ದಿರುವ ಕ್ಷೇತ್ರವಿದು.

ಇವರ ಎದುರಾಳಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವ ವಹಿಸಿದ ರಾಜಕುಮಾರ ಪಾಟೀಲ ತೇಲ್ಕೂರರಿಗೂ ಇದು ಪ್ರತಿಷ್ಠೆಯ ಕ್ಷೇತ್ರ. ಈ ಎರಡು ಕಲಿಗಳ ನಡುವೆ ಹೈ ಕ ಭಾಗವನ್ನುಸಂವಿಧಾನದ 371ನೇ ವಿಧಿಯಲ್ಲಿ ಸೇರಿಸಲು ನಿರಂತರ ಹೋರಾಟ ಮಾಡಿದ ವೈಜನಾಥ ಪಾಟೀಲರೂ ಕೆಜೆಪಿಯಿಂದ ಸ್ಪರ್ಧಿಸಿದ್ದು ತಮ್ಮ ಭವಿಷ್ಯ ನಿರ್ಧಾರಕ್ಕೆ ಸಜ್ಜಾಗಿದ್ದಾರೆ.ಎರಡು ಬಾರಿ ಸೋತಿರುವ ತೇಲ್ಕೂರರು ಈ ಬಾರಿ ಕಣಕ್ಕೆ ಇಳಿಯುವ ಮೊದಲೇ ಕಾರ್ಯಕರ್ತರ ಸಭೆ ಸೇರಿಸಿ ಗೆಲ್ಲಿಸಲು ಶ್ರಮಿಸುವ ಭರವಸೆ ಪಡೆದವರು.ಬಿಜೆಪಿಯಲ್ಲಿ ಚಿಂಚೋಳಿಯಿಂದ ಹಿಂದಿನ ಬಾರಿ ಗೆದ್ದಿದ್ದ ಮತ್ತು ನಂತರ ಸಚಿವರಾಗಿದ್ದ ಸುನೀಲ ವಲ್ಯಾಪುರೆ ಈ ಬಾರಿ ಅದೇ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ. ಅವರು ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಹೌದು.

ಹಿಂದಿನ ಕಾದಾಟ

ಗುಲ್ಬರ್ಗ:
ಕಳೆದ ಬಾರಿ (2008) ನಡೆದ ಚುನಾವಣೆಯಲ್ಲಿ ಗುಲ್ಬರ್ಗ ಉತ್ತರ, ಸೇಡಂ, ಚಿತ್ತಾಪುರ, ಅಫಜಲಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಗುಲ್ಬರ್ಗ ದಕ್ಷಿಣ, ಗುಲ್ಬರ್ಗ ಗ್ರಾಮೀಣ, ಚಿಂಚೋಳಿ ಮತ್ತು ಜೇವರ್ಗಿ ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ಆಳಂದ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಮೆರೆದಿತ್ತು.

ಚಿತ್ತಾಪುರದಿಂದ ಗೆದ್ದ ಮಲ್ಲಿಕಾರ್ಜುನ ಖರ್ಗೆ ಅನಂತರ ರಾಜೀನಾಮೆ ಕೊಟ್ಟು ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದಿದ್ದರು (ಅಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಜಿಲ್ಲೆಯಲ್ಲಿ ಶಾಸಕರ ಸಂಖ್ಯೆಯನ್ನು ಐದಕ್ಕೆ ಏರಿಸಿಕೊಂಡಿತ್ತು). ಸುಮಾರು ಎರಡೂವರೆ ವರ್ಷಗಳ ನಂತರ ಗುಲ್ಬರ್ಗ ದಕ್ಷಿಣ ಕ್ಷೇತ್ರದ ಶಾಸಕ ಚಂದ್ರಶೇಖರ ಪಾಟೀಲ ರೇವೂರರ ನಿಧನದಿಂದ ಆ ಕ್ಷೇತ್ರಕ್ಕೆ ಚುನಾವಣೆ ಅನಿವಾರ್ಯವಾಯಿತು. ಪಾಟೀಲರ ಪತ್ನಿ ಅಥವಾ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಲು ಒಪ್ಪಲಿಲ್ಲ. ಪರಿಣಾಮವಾಗಿ ಪಾಟೀಲರ ಪತ್ನಿ ಅರುಣಾ ಪಾಟೀಲ ರೇವೂರ ಜೆಡಿಎಸ್ ಸೇರಿ ಸ್ಪರ್ಧಿಸಿ ಶಾಸಕರ ಗದ್ದುಗೆ ಏರಿದ್ದರು. ಜೆಡಿಎಸ್ ಎರಡನೇ ಖಾತೆ ತೆರೆದಿತ್ತು.

ವಲಸೆ ಪರಿಣಾಮ

ಗುಲ್ಬರ್ಗ:
ಪಕ್ಷದಿಂದ ಪಕ್ಷಕ್ಕೆ ವಲಸೆ (ಗುಳೆ) ಹೋಗುವ ಪ್ರವೃತ್ತಿ ಈ ಬಾರಿ ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಗರಿಷ್ಠ ಪರಿಣಾಮವನ್ನು ಬೀರಿದೆ.

ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಇಳಿದ ಶಶಿಲ್ ನಮೋಶಿ ಇದೀಗ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದ ಅರುಣಾ ಪಾಟೀಲರ ಮಗ ದತ್ತಾತ್ರೇಯ ಪಾಟೀಲ ಆ ಪಕ್ಷಕ್ಕೆ ವಿದಾಯ ಹೇಳಿ ಬಿಜೆಪಿ ಸೇರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಲವು ವರ್ಷಗಳಿಂದ ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದ ಕಾರ್ಮಿಕ ಮುಂದಾಳು ಎಸ್.ಕೆ. ಕಾಂತಾ ಅವರು ಪಾಲಿಕೆ ಚುನಾವಣೆ ವೇಳೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದಿದ್ದಾರೆ. ಅಲ್ಲದೆ ಅವರು ಕೆಜೆಪಿ ಸೇರಿ ಮತ ಬೇಟೆಯಲ್ಲಿ ತೊಡಗಿದ್ದಾರೆ.

 

ಪ್ರತಿಕ್ರಿಯಿಸಿ (+)