ಮತಾಂತರಕ್ಕೆ ಧರ್ಮಗುರು ದಲೈಲಾಮಾ ವಿರೋಧ

7

ಮತಾಂತರಕ್ಕೆ ಧರ್ಮಗುರು ದಲೈಲಾಮಾ ವಿರೋಧ

Published:
Updated:

ಬೆಂಗಳೂರು:‘ಉನ್ನತವಾದ ಆಧ್ಯಾತ್ಮಿಕ ತಳಹದಿ ಹೊಂದಿರುವ ಸಮುದಾಯ­ಗಳಲ್ಲಿ ಮತಾಂತರ ನಡೆಸುವುದು ಸಂಘರ್ಷಕ್ಕೆ ಕಾರಣವಾಗುತ್ತದೆ’ ಎಂದು ಬೌದ್ಧರ ಧರ್ಮ ಗುರು ದಲೈ ಲಾಮಾ ಕಿವಿಮಾತು ಹೇಳಿದರು.ಇಲ್ಲಿನ ಬಿಷಪ್ ಕಾಟನ್‌ ಪ್ರೌಢ­ಶಾಲೆಯಲ್ಲಿ ಭಾನುವಾರ ನಡೆದ ಭಾರತದ ಆಂಗ್ಲೊ–ಇಂಡಿಯನ್ ಶಾಲೆ­ಗಳ ಪ್ರಾಂಶುಪಾಲರ 92ನೇ ಸಮ್ಮೇಳ­ನದ ಉದ್ಘಾಟನಾ ಕಾರ್ಯ­ಕ್ರಮ­ದಲ್ಲಿ ಅವರು ಮಾತನಾಡಿದರು. ‘ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯ ಅತ್ಯುತ್ಕೃಷ್ಟ ಸೇವೆ ಸಲ್ಲಿಸಿದೆ’ ಎಂದು ಶ್ಲಾಘಿಸಿದರು.‘ಮತಾಂತರ ಸರಿಯಲ್ಲ ಎಂದು ನಾನು ಮಂಗೋಲಿಯಾದ ಕೆಲವು ಕ್ರೈಸ್ತ ಮಿಷನರಿಗಳಿಗೂ ಹೇಳಿದ್ದೇನೆ. ಮಂಗೋ­ಲಿಯಾ ಬೌದ್ಧ ರಾಷ್ಟ್ರ. ಅಲ್ಲಿ ಮತಾಂತರ ಸರಿಯಲ್ಲ ಎಂಬುದು ನನ್ನ ನಿಲುವು’ ಎಂದರು.‘ಬೌದ್ಧೇತರ ರಾಷ್ಟ್ರಗಳಲ್ಲಿ ಬೌದ್ಧ ಧರ್ಮದ ಪ್ರಚಾರಕ್ಕೆ ನಾನು ಎಂದೂ ಪ್ರಯತ್ನಿಸಿಲ್ಲ. ಕೆಲವು ಮಿಷನರಿಗಳು ಈ ಕಾರ್ಯಕ್ಕೆ ಯತ್ನಿಸಿವೆ. ಇದು ಸರಿ­ಯಲ್ಲ’ ಎಂದು ದಲೈ ಲಾಮಾ ನುಡಿದರು.ಶಿಕ್ಷಣದಲ್ಲಿ ಬದಲಾವಣೆ:  ‘ಒಬ್ಬ ವ್ಯಕ್ತಿ ಒಂದು ನೌಕರಿಗೆ ಸೇರಿದ ನಂತರ, ಜೀವನ­ಪರ್ಯಂತ ಅಲ್ಲೇ ಕೆಲಸ ಮಾಡುತ್ತಾನೆ ಎಂಬ ಸನ್ನಿವೇಶ ಈಗ ಇಲ್ಲ. ಬದಲಾ­ಗುತ್ತಿರುವ ಕಾಲದ ಅವಶ್ಯಕತೆಗೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಸಂಶೋಧನೆಯ ಮನೋಭಾವವನ್ನು ಇಂದಿನ ಶಿಕ್ಷಣ ರೂಪಿಸಬೇಕು’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಆಧಾರ್‌) ಮುಖ್ಯಸ್ಥ ನಂದನ್‌ ನಿಲೇಕಣಿ ಹೇಳಿದರು.‘ದೇಶದಲ್ಲಿ ಬಹಳಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿ­ದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿ­ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry