`ಮತೀಯ-ಜಾತ್ಯತೀತ ಘರ್ಷಣೆ ಹೊಸದಲ್ಲ'

7
`ಟಾಲ್ ಇಸ್ಲಾಂ ಅಂಡ್ ಶಾರ್ಟ್ ಮುಸ್ಲಿಮ್ಸ' ಕೃತಿ ಬಿಡುಗಡೆ

`ಮತೀಯ-ಜಾತ್ಯತೀತ ಘರ್ಷಣೆ ಹೊಸದಲ್ಲ'

Published:
Updated:

ಬೆಂಗಳೂರು: `ಮುಸ್ಲಿಮರೂ ಸೇರಿದಂತೆ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸಂಗತಿಗಳಿಗೆ ರಾಜಕೀಯ ಬಣ್ಣ ಹಚ್ಚುವ ಪ್ರವೃತ್ತಿ ಸಲ್ಲ' ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಭಿಪ್ರಾಯಪಟ್ಟರು.ರಾಜಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪ್ರೊ. ಮುಮ್ತಾಜ್ ಅಲಿ ಖಾನ್ ಅವರ `ಟಾಲ್ ಇಸ್ಲಾಂ ಅಂಡ್ ಶಾರ್ಟ್ ಮುಸ್ಲಿಮ್ಸ' ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.`ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅರಸು. ಆತನ ಹೆಸರಿನಲ್ಲಿ ಅಲ್ಪ ಸಂಖ್ಯಾತರಿಗಾಗಿ ವಿಶ್ವವಿದ್ಯಾಲಯ ಸ್ಥಾಪಿಸಿದರೆ ತಪ್ಪೇನು' ಎಂದು ಪ್ರಶ್ನಿಸಿದರು.`ಸ್ವಾತಂತ್ರ್ಯ ಪೂರ್ವದಿಂದಲೂ ದೇಶದಲ್ಲಿ ಮತೀಯ ಮತ್ತು ಜಾತ್ಯತೀತ ಸಿದ್ಧಾಂತಗಳ ನಡುವೆ ಘರ್ಷಣೆ ನಡೆಯುತ್ತಿದ್ದು, ಈಗಲೂ ಮುಂದುವರಿದಿದೆ. ದೇಶದಲ್ಲಿ ಯಾವ ಅಲ್ಪ ಸಂಖ್ಯಾತರ ಮೇಲೆ ದಾಳಿ ನಡೆದರೂ ಅದು ನಮ್ಮ ಸಾಕ್ಷಿಪ್ರಜ್ಞೆ ಮೇಲೆ ನಡೆದ ದಾಳಿಯೇ ಆಗಿದೆ. ದೇಶದ ಯಾವುದೇ ಭಾಗದಲ್ಲಾದರೂ ಅಲ್ಪ ಸಂಖ್ಯಾತರಿಗೆ ಸೂಕ್ತ ರಕ್ಷಣೆ ಸಿಗಬೇಕು' ಎಂದು ಹೇಳಿದರು.`ಮದರಸಾಗಳಲ್ಲಿ ಉರ್ದು ಮತ್ತು ಪರ್ಷಿಯನ್ ಭಾಷೆಗಳನ್ನು ಹೇಳಿಕೊಡಲಾಗುತ್ತದೆ. ಪವಿತ್ರ ಖುರಾನ್ ಗ್ರಂಥದ ಪರಿಚಯವನ್ನೂ ಮಾಡಿಕೊಡಲಾಗುತ್ತದೆ. ಅವುಗಳ ವಿಷಯವಾಗಿ ವೃಥಾ ಟೀಕೆ ಸಲ್ಲ' ಎಂದು ತಿಳಿಸಿದರು. `ಮುಸ್ಲಿಮರ ಸಮುದಾಯದಲ್ಲಿ ಮಹಿಳೆಯರನ್ನು ಕೀಳಾಗಿ ಕಾಣಲಾಗುತ್ತದೆ ಎನ್ನುವ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಮಮ್ತಾಜ್ ನೆನಪಿನಲ್ಲಿ ತಾಜ್ ಮಹಲ್ ಕಟ್ಟುವ ಮೂಲಕ ಆಕೆಯನ್ನು ಅಜರಾಮರವಾಗಿಸಿದ್ದು ಮುಸ್ಲಿಂ ದೊರೆಯೇ ಅಲ್ಲವೆ' ಎಂದು ಕೇಳಿದರು. `ಭಾರತ ಮುಸ್ಲಿಮರ ದೇಶವೂ ಹೌದು. ಅವರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಸರ್ಕಾರಗಳು ನೀಡಬೇಕು' ಎಂದು ಹೇಳಿದರು.`ಮಂಗಳೂರಿನಲ್ಲಿ ಪ್ರೇಮ ಪ್ರಕರಣಗಳ ವಿರುದ್ಧ ಹೋರಾಡುವ ನೆಪದಲ್ಲಿ ಮುಸ್ಲಿಂ ಹುಡುಗರಿಗೆ ಕಿರುಕುಳ ನೀಡಲಾಗುತ್ತಿತ್ತು. ಅದನ್ನು ತಪ್ಪಿಸಲು ನಾನೇ ಮಧ್ಯೆ ಪ್ರವೇಶಿಸಬೇಕಾಯಿತು' ಎಂದು ತಿಳಿಸಿದರು.`ಸರ್ಕಾರದಲ್ಲಿ ಈ ಹಿಂದೆ ಬದಲಾವಣೆ ಆಗಿದ್ದಾಗ ಸಮರ್ಥರಾದ ಉರ್ದು ಅಕಾಡೆಮಿ ಅಧ್ಯಕ್ಷರನ್ನು ಆ ಹುದ್ದೆಯಿಂದ ಕೈಬಿಡಲಾಗಿತ್ತು. ಅಕಾಡೆಮಿಗಳು ರಾಜಕೀಯ ವ್ಯವಸ್ಥೆಯ ಭಾಗವಲ್ಲ. ಸರ್ಕಾರ ಬದಲಾದೊಡನೆ ಅವುಗಳ ಅಧ್ಯಕ್ಷರನ್ನು ಬದಲಾಯಿಸುವ ಅಗತ್ಯ ಇಲ್ಲ' ಎಂದರು.ಕೃತಿ ಲೇಖಕ ಮುಮ್ತಾಜ್ ಅಲಿ ಖಾನ್, `ಖುರಾನ್ ಸಂದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಮುಸ್ಲಿಮರು ಆದರ್ಶ ಸಮಾಜದ ನಿರ್ಮಾಣಕ್ಕೆ ಕಾರಣವಾಗಲಿದ್ದಾರೆ' ಎಂದು ಹೇಳಿದರು.`ಮಹಿಳೆಗೆ ಸರಿಯಾದ ಸ್ಥಾನಮಾನ ನೀಡಬೇಕು, ವರದಕ್ಷಿಣೆ ಪಿಡುಗು ತೊಲಗಿಸಬೇಕು, ಬಾಲ್ಯ ವಿವಾಹವನ್ನು ನಿಷೇಧಿಸಬೇಕು, ಭಯೋತ್ಪಾದನೆಯಂತಹ ಚಟುವಟಿಕೆಗಳಿಗೆ ಬೆಂಬಲ ನೀಡಬಾರದು ಎಂಬ ಆಶಯಗಳು ಖುರಾನ್‌ನಲ್ಲಿವೆ' ಎಂದು ವಿವರಿಸಿದರು. `ಹಿಂದೂ-ಮುಸ್ಲಿಂ ಭಾವೈಕ್ಯದ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ' ಎಂದು ಅಭಿಪ್ರಾಯಪಟ್ಟರು.ಬೇಲಿಮಠದ ಶಿವರುದ್ರ ಸ್ವಾಮೀಜಿ, `ಶರಣರ ವಚನ ಮತ್ತು ಪ್ರವಾದಿ ಮಹಮ್ಮದರ ಖುರಾನ್ ಎರಡರ ಬೋಧನೆಯೂ ಒಂದೇ ಆಗಿದೆ' ಎಂದು ಹೇಳಿದರು.ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ನಾರಾಯಣಗೌಡ, ಸಿಟಿ ಮಾರ್ಕೆಟ್ ಮಸೀದಿ ಧರ್ಮಗುರು ಮಕ್ಸೂದ್ ಇಮ್ರಾನ್ ಖಾನ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry