ಮತೀಯ ವಿಷವರ್ತುಲದಿಂದ ಮಕ್ಕಳನ್ನು ಕಾಪಾಡಿ

7

ಮತೀಯ ವಿಷವರ್ತುಲದಿಂದ ಮಕ್ಕಳನ್ನು ಕಾಪಾಡಿ

Published:
Updated:

`ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್~ ಲೇಖನ (ಪ್ರ.ವಾ. ಫೆ.2. ಸಿ.ಎಸ್.ದ್ವಾರಕಾನಾಥ್)ಸಮಾಜದ ಸ್ವಾಸ್ಥ್ಯ ಬಯಸುವ ಎಲ್ಲರಿಗೂ ದಿಗ್ಭ್ರಮೆ ಮೂಡಿಸಿದೆ.  

ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಹಬಾಳ್ವೆಯನ್ನು ರೂಪಿಸುವುದರಲ್ಲಿ ಶಿಕ್ಷಣದ ಪಾತ್ರ ಹಿರಿದು. ಇದುವರೆಗಿನ ಪ್ರಾಥಮಿಕ ಪಠ್ಯದಲ್ಲಿ ಒಂದಷ್ಟರ ಮಟ್ಟಿಗೆ ಈ ಅಂಶಗಳಿದ್ದವು.ರಾಷ್ಟೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಮಂಡಳಿಯ ಶಿಫಾರಸಿನಂತೆ, ಈ ಮೊದಲೇ ರಚನೆಯಾಗಿದ್ದ ಪಠ್ಯಕ್ರಮವನ್ನು ಬದಿಗೊತ್ತಿ, ತನ್ನ ಹಿಂದುತ್ವದ ವಿಚಾರಧಾರೆಯ ಆಧಾರದ ಮೇಲೆ ತನ್ನ ಮೂಗಿನ ನೇರಕ್ಕೆ ರೂಪಿಸಿದ ಪಠ್ಯಕ್ರಮವನ್ನು ಜಾರಿಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ.ಮಕ್ಕಳ ಭವಿಷ್ಯವನ್ನು ರೂಪಿಸುವುದರಲ್ಲಿ ಬುನಾದಿಯಾಗಿರುವ ಪ್ರಾಥಮಿಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದರಲ್ಲಿ, ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರಲ್ಲಿ, ವಿದ್ಯಾರ್ಥಿಗಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರನ್ನು ನೇಮಿಸುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ರಾಜ್ಯ ಸರ್ಕಾರ, ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೋಗಿ, ಉಚ್ಚನ್ಯಾಯಾಲಯದಿಂದ ಛೀಮಾರಿಗೊಳಗಾಗಿದ್ದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದಾಗಿದೆ.ಶಿಕ್ಷಣ ಹಕ್ಕಿನ ಕಾಯಿದೆಯನ್ನು ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿರುವ ಸರ್ಕಾರ, ಅದರ ಜಾರಿಗೆ ಸಂಬಂಧಿಸಿದ ನೀತಿ ನಿಯಮಾವಳಿಗಳನ್ನು ಅಂತಿಮಗೊಳಿಸದೆ ಕಳೆದ ಎರಡು ವರ್ಷಗಳಿಂದ ಕಾಲಹರಣ ಮಾಡುತ್ತಿದೆ!ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಹಕ್ಕನ್ನು, ಒಂದು ಕಡೆ ಹೀಗೆ ನಿರಾಕರಿಸುವುದರ ಜೊತೆಗೆ, ಮತ್ತೊಂದು ಕಡೆ ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣಕ್ಕೆ ಕುಮ್ಮಕ್ಕು ನೀಡುತ್ತಿರುವ ಸರ್ಕಾರ ಪೂರ್ವಗ್ರಹಪೀಡಿತ ಆಲೋಚನೆಗಳನ್ನು ಎಳೆ ಮನಸ್ಸುಗಳ ಮೆದುಳಿನಲ್ಲಿ ತುರುಕುವ ಮೂಲಕ ಬುದ್ಧ, ಬಸವ, ಅಲ್ಲಮ, ಕನಕದಾಸ, ಅಂಬೇಡ್ಕರ್, ಶರೀಫ, ಕುವೆಂಪು ಅವರಂತಹ ಸಮಾಜ ಪರಿವರ್ತನಕಾರರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ನಾಶಗೊಳಿಸುವತ್ತ ಹೊರಟಿದೆ.

ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ದೂರಗಾಮಿ ದುರಾಲೋಚನೆ ಹೊಂದಿರುವಂತಿದೆ.ಸಾಮಾಜಿಕ ಬದಲಾವಣೆಯಲ್ಲಿ ಶಿಕ್ಷಣದ ಮಹತ್ವವನ್ನು ಮನಗಂಡೇ ಸಂಘ ಪರಿವಾರದ ಹಿನ್ನೆಲೆ ಇರುವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿ.ಎಸ್. ಆಚಾರ್ಯ ಅವರಂಥವರು ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಸಚಿವರಾಗಿ ಹಿಂದುತ್ವದ ಕಾರ್ಯಸೂಚಿಯ ಜಾರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಅವರ ಕಾರ್ಯ ವೈಖರಿಯಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.ಇವರು ಪ್ರತಿನಿಧಿಸುವ ಇಲಾಖೆಗಳಿಂದಲೇ ಭಗವದ್ಗೀತಾ ಅಭಿಯಾನ ಮತ್ತು ಭಯೋತ್ಪಾದನೆ, ಮತಾಂತರ ಹಾಗೂ ಗೋಹತ್ಯೆಯ ವಿರುದ್ಧ ಶಾಲಾ ಕಾಲೇಜುಗಳಲ್ಲಿ ಸರ್ಕಾರಿ ಪ್ರಾಯೋಜಿತ ಅಭಿಯಾನಗಳು ನಡೆದಿರುವುದು ರಾಜ್ಯದ ಜನತೆಗೆ ತಿಳಿದ ವಿಷಯವಾಗಿದೆ.ಆದರೆ, ಡಾ.ಸಿ.ಎಸ್.ದ್ವಾರಕಾನಾಥ್ ಪ್ರಸ್ತಾಪಿಸಿರುವ ಅಂಶಗಳು ಇವುಗಳಿಗಿಂತಲೂ ಅಪಾಯಕಾರಿಯಾಗಿವೆ. `ಜಾತ್ಯತೀತ~ವೆಂದು ಕರೆದುಕೊಳ್ಳುವ ಎಲ್ಲಾ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು ದೊಡ್ಡಮಟ್ಟದ ಜನಾಂದೋಲನವನ್ನು ರೂಪಿಸುವುದರ ಮೂಲಕ ರಾಜ್ಯ ಸರ್ಕಾರದ ಹಿಂದುತ್ವದ ಪ್ರಣಾಳಿಕೆಯ ವಿಷವರ್ತುಲದಿಂದ ಎಳೆಯ ಮನಸ್ಸುಗಳನ್ನು ಕಾಪಾಡಬೇಕಾಗಿದೆ.

 - ವೈ. ಮರಿಸ್ವಾಮಿ, ಬೆಂಗಳೂರು

***ಈಗ ಮಾತ್ರವಲ್ಲ, ಬಹಳ ಹಿಂದಿನಿಂದಲೂ ಇತಿಹಾಸವನ್ನು ತಿರುಚಲು ಕಾಣದ ಕೈಗಳು ಕೆಲಸ ಮಾಡುತ್ತಲೇ ಇವೆ. ಇತಿಹಾಸವನ್ನು ಇತಿಹಾಸವಾಗಿ ಮಾತ್ರ ನೋಡುವ ಪ್ರಬುದ್ಧರನ್ನು ಪಠ್ಯರಚನೆಗೆ ನೇಮಿಸಬೇಕು. ಇದರಿಂದಾಗಿ `ಎಲ್ಲ ಜನ ನನ್ನ ಜನ~ ಎಂಬ ಭಾವನೆ ಮಗುವಲ್ಲಿ ಬೆಳೆಯುತ್ತದೆ. ಆದರೆ ಇತಿಹಾಸಕಾರನೇ ಹಿಂದು ಅಥವಾ ಮತ್ತೊಂದು ಧರ್ಮದ ಪರ ನಿಂತು ಇತಿಹಾಸ ಬರೆದರೆ ಅದು ಕೆಟ್ಟ ಇತಿಹಾಸವಾಗುತ್ತದೆ. ಪ್ರೊ. ವಿಜಯ್ ಪೂಣಚ್ಚ ಅವರಂಥ ಒಳ್ಳೆಯ ಇತಿಹಾಸ ಬರಹಗಾರರು ಪಠ್ಯವನ್ನು ಸಾಕಷ್ಟು ಸುಧಾರಿಸಿದ್ದಾರೆ. ಆಗಿರುವ ಲೋಪಗಳನ್ನು ತಕ್ಷಣವೇ ತಿದ್ದಿ ತಮ್ಮ ವೃತ್ತಿ ಧರ್ಮವನ್ನು ಮೆರೆಯಲಿ.

- ಡಾ.ಜಿ.ಶಿವಪ್ಪ. ಸಹಾಯಕ ಪ್ರಾಧ್ಯಾಪಕರು, ಕೋಲಾರ

*** ಲೇಖಕ ಸಿ.ಎಸ್.ದ್ವಾರಕಾನಾಥ್ ಅವರು ಮುಂದಿನ ವರ್ಷದಿಂದ ಜಾರಿಗೆ ಬರಲಿರುವ ಪಠ್ಯ ಪುಸ್ತಕಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅದರಲ್ಲಿ ಸೇರಿಸಲಾದ ಕೋಮು ಅಂಶಗಳನ್ನು ಗುರುತಿಸಿ ಸಾರ್ವಜನಿಕರಿಗೆ ತಿಳಿಸಿರುವುದು ಅವರ ಹಾಗೂ ಪ್ರಜಾವಾಣಿಯ ಸಾಮಾಜಿಕ ಕಳಕಳಿಯ ದ್ಯೋತಕವಾಗಿದೆ.ಮುಗ್ಧ ಮನಸ್ಸುಗಳಲ್ಲಿ ವೈಮನಸ್ಸು ಬೆಳೆಸಿ ಸಮಾಜ ಒಡೆಯುವ ತೀವ್ರವಾದಿಗಳ ಆಸೆ ಈಡೇರದಂತೆ ಲೇಖಕರು ಹಾಗೂ ಪತ್ರಿಕೆ ಇದೇ ರೀತಿ ಶ್ರಮಿಸುವ ವಿಶ್ವಾಸವಿದೆ.

- ಮುಹಮ್ಮದ್ ನಿಝಾಮುದ್ದೀನ್, ಬೀದರ್ರಾಷ್ಟ್ರೀಯ ಪಠ್ಯಕ್ರಮ 2005ರ ಅನ್ವಯ ಸಿದ್ಧಪಡಿಸಬೇಕಿರುವ 5 ಮತ್ತು 8 ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕಗಳಲ್ಲಿ ಬಿಜೆಪಿಯು ತನ್ನ ಬಲಪಂಥೀಯ ರಾಜಕೀಯ ಸಿದ್ಧಾಂತದ ಗುಪ್ತ ಪ್ರಣಾಳಿಕೆಯನ್ನು ಅಳವಡಿಸಿರುವುದು ತಿಳಿದು ಆಘಾತವಾಯಿತು.

 

ಮಾಜಿ ಶಿಕ್ಷಣ ಸಚಿವರಾದ ಎಚ್. ವಿಶ್ವನಾಥ ಮತ್ತು ಪ್ರೊ. ಬಿ. ಕೆ ಚಂದ್ರಶೇಖರ್ ಅವರು ಸಲಹೆಗಾರರಾಗಿದ್ದರೂ ಬಲಪಂಥೀಯ ಚಿಂತನೆಗಳು ಪಠ್ಯದಲ್ಲಿ ಸೇರಿವೆ ಎಂದರೆ ಗಾಬರಿಯಾಗುತ್ತದೆ. ಪಠ್ಯಪುಸ್ತಕದಲ್ಲಿ ವಿಶಾಲ ಭಾರತೀಯ ದೃಷ್ಟಿಕೋನವಿರಬೇಕೆಂದು ಮಾರ್ಗದರ್ಶಿ ಸೂತ್ರವಿದ್ದರೂ ಬಹುಸಂಸ್ಕೃತಿಗಳನ್ನು ಧಿಕ್ಕರಿಸಿ ಹಿಂದೂ (ವೈದಿಕ) ಮತೀಯತೆಯೇ ರಾಷ್ಟ್ರೀಯ ದೃಷ್ಟಿಕೋನವೆಂದು ಅಳವಡಿಸಿರುವುದು ರೋಗಗ್ರಸ್ಥ ಮನಸ್ಸಿನ ಲಕ್ಷಣ. ಜಾತೀಯತೆ, ಅಸ್ಪೃಶ್ಯತೆ, ಅಜ್ಞಾನ, ದಾಸ್ಯ ಪ್ರವೃತ್ತಿಗಳ ಕರಾಳ ಕೂಪದಂತಿರುವ ಧಾರ್ಮಿಕ ವ್ಯವಸ್ಥೆಯನ್ನೇ ಉದಾತ್ತವೆಂದು ಕೀರ್ತಿಸಿರುವ ಈ ಪಠ್ಯದಿಂದ ಎಳೆಯ ಮಕ್ಕಳ ಮನಸ್ಸು ಕೊಳೆತು ಹೋಗುವುದೇ ಹೊರತು ಅರಳುವುದಿಲ್ಲ.ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರನ್ನು ಭಯೋತ್ಪಾದಕರೆಂದು ಶಂಕಿಸುವ ಹಾಗೂ ಬ್ರಾಹ್ಮಣೇತರ ಜನವರ್ಗಗಳನ್ನು ಶತ್ರುಗಳ ಸ್ಥಾನದಲ್ಲಿ ನಿಲ್ಲಿಸಿರುವ ಈ ಪಠ್ಯಪುಸ್ತಕಗಳನ್ನು ನಿಷೇಧಿಸಿ, ಜಾತ್ಯತೀತ ಮತ್ತು ಸಾಮರಸ್ಯದ ಪಠ್ಯಗಳನ್ನು ರೂಪಿಸಬೇಕು.-ವಡ್ಡಗೆರೆ ನಾಗರಾಜಯ್ಯ, ಆಂಗ್ಲ ಭಾಷಾ ಉಪನ್ಯಾಸಕರು (ಬೆಂಗಳೂರು) ಮತ್ತು ಎ. ಎಸ್. ಪ್ರಭಾಕರ, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry