ಮತ್ತಷ್ಟು ಎತ್ತರಕ್ಕೆ ಗೌತಮ್

7

ಮತ್ತಷ್ಟು ಎತ್ತರಕ್ಕೆ ಗೌತಮ್

Published:
Updated:

ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ನಿಭಾಯಿಸುವುದು ಸುಲಭದ ಕೆಲಸವಲ್ಲ. ಆದರೆ   ಕಳೆದ ಮೂರು ಋತುಗಳಿಂದ ಸಿ. ಮುರಳೀಧರನ್ ಗೌತಮ್ ಆ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಕಳೆದ ವಾರ ವಿದರ್ಭ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಭರ್ಜರಿ ದ್ವಿಶತಕ (257; 576ನಿ, 394ಎಸೆತ, 20ಬೌಂಡರಿ) ಹೊಡೆಯುವ ಮೂಲಕ  ಕರ್ನಾಟಕದ ರಣಜಿ ಟ್ರೋಫಿ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ವೈಯಕ್ತಿಕ ಸ್ಕೋರ್ ಗಳಿಸಿದ ವಿಕೆಟ್‌ಕೀಪರ್      ಬ್ಯಾಟ್ಸ್‌ಮನ್ ಆಗಿದ್ದಾರೆ.

ಅಲ್ಲದೇ ದ್ವಿಶತಕ ಗಳಿಸಿದ ಎರಡನೇ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕೂಡ ಹೌದು. 1977-78ರಲ್ಲಿ ಚಿಕ್ಕಮಗಳೂರಿನಲ್ಲಿ ಕೇರಳ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕದ ವಿಕೆಟ್ ಕೀಪರ್ ಸಂಜಯ ದೇಸಾಯಿ ದ್ವಿಶತಕ (218) ಗಳಿಸಿದ್ದರು. ಒಟ್ಟು ಏಳು ಶತಕ ಗಳಿಸಿರುವ ಗೌತಮ್, ಕರ್ನಾಟಕದ ಅತಿ ಹೆಚ್ಚು ಶತಕಗಳಿಸಿದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿದ್ದಾರೆ.

ಸೈಯ್ಯದ್ ಕಿರ್ಮಾನಿ ಮತ್ತು ತಿಲಕ್‌ನಾಯ್ಡು ತಲಾ ಐದು ಶತಕ ಗಳಿಸಿದ್ದರು. 2009-10ರಲ್ಲಿ ತಿಲಕ್ ನಾಯ್ಡು ಅವರ ಸ್ಥಾನ ತುಂಬಿದ ಗೌತಮ್ ಶತಕ ಗಳಿಕೆಯಲ್ಲಿ ಅವರನ್ನೂ ಹಿಂದಿಕ್ಕಿ ಮುಂದೆ ಸಾಗಿದ್ದಾರೆ.

ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಲು ತಾವು ಸಿದ್ಧ ಎನ್ನುವುದನ್ನೂ ವೆುಸೂರಿನಲ್ಲಿ ಅವರು ತೋರಿಸಿಕೊಟ್ಟರು.

ಯಾವಾಗಲೂ ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದ ಗೌತಮ್, ಮೈಸೂರಿನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬಂದಿದ್ದರು. ಕೆ.ಎಲ್. ರಾಹುಲ್ ಜೊತೆಗೆ 253 ರನ್‌ಗಳ ಜೊತೆಯಾಟವಾಡಿ ಕರ್ನಾಟಕಕ್ಕೆ ಬೃಹತ್ ಮೊತ್ತ ಗಳಿಸಲು ಕಾರಣರಾಗಿದ್ದರು.`ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯಿಂದ ನನ್ನ ವಿಕೆಟ್ ಕೀಪಿಂಗ್ ಕೌಶಲ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ. ನಾನು ಎರಡನ್ನೂ ನಿಭಾಯಿಸಬಲ್ಲೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ ದೊಡ್ಡ ಮೊತ್ತ ಗಳಿಸುವ ಅವಕಾಶ ಹೆಚ್ಚಾಗಿ ಸಿಗುತ್ತಿರಲಿಲ್ಲ.

ಇನ್ನೊಂದು ತುದಿಯಿಂದ ಸೂಕ್ತ ಬೆಂಬಲದ ಅವಶ್ಯಕತೆಯೂ ಇರುತ್ತದೆ. ಆದ್ದರಿಂದ ಮೇಲಿನ ಕ್ರಮಾಂಕದಲ್ಲಿ ಬಂದಾಗ ಹೆಚ್ಚು ರನ್ ಗಳಿಸುವ ಮತ್ತು ಉತ್ತಮ ಇನಿಂಗ್ಸ್ ಕಟ್ಟುವ ಅವಕಾಶವಿರುತ್ತದೆ' ಎನ್ನುವ ಗೌತಮ್ ಅವರ ಏಳು ಶತಕಗಳಲ್ಲಿ ಐದು, ಅವರು ಏಳನೇ ಕ್ರಮಾಂಕದಲ್ಲಿ ಆಡಿಯೇ ಗಳಿಸಿದ್ದು.

2010ರ ಋತುವಿನಲ್ಲಿ ಲೀಗ್ ಮತ್ತು ನಾಕೌಟ್            ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನ ಆಧಾರಸ್ತಂಭವಾಗಿದ್ದವರು ಗೌತಮ್ ಮತ್ತು  ಅಮಿತ್ ವರ್ಮಾ.

ಇಂದೋರ್‌ನ ಕ್ವಾರ್ಟರ್‌ಫೈನಲ್ ಅವರ ಭರ್ಜರಿ ಆಟದಿಂದಲೇ ಕರ್ನಾಟಕ ಸೆಮಿಫೈನಲ್‌ಗೆ ಸಾಗಿತ್ತು.

2008ರಲ್ಲಿ ಓಡಿಶಾ ವಿರುದ್ಧ ಬ್ಯಾಟ್ಸ್‌ಮನ್ ಆಗಿ ಪದಾರ್ಪಣೆ ಮಾಡಿದ್ದ ಅವರು, 2009ರಲ್ಲಿ ತಿಲಕ್‌ನಾಯ್ಡು ಅವರ ಬದಲಿಗೆ ವಿಕೆಟ್ ಕೀಪರ್ ಸ್ಥಾನ ಪಡೆದರು. ಎಡಬದಿಗೆ ಹಾರಿ ಕ್ಯಾಚ್ ಪಡೆಯುವಲ್ಲಿ ಇನ್ನೂ ಪರಿಣಿತಿ ಸಾಧಿಸಬೇಕು ಎಂಬ ಟೀಕೆಗಳು ಅವರ ಸುತ್ತ ಸುಳಿದಾಡಿದವು. ಆದರೆ ಆ ಸಮಸ್ಯೆಯಿಂದ ಈಗ ಅವರು ಹೊರಬಂದಿದ್ದಾರೆ.`ವಿಕೆಟ್‌ಕೀಪಿಂಗ್‌ನಲ್ಲಿ ಎಡಬದಿಗೆ ಹಾರಿ ಕ್ಯಾಚ್ ಮಾಡುವ ಬಗ್ಗೆ ಮತ್ತು ಚುರುಕಾಗಿ ಸ್ಟಂಪಿಂಗ್‌ಮಾಡುವುದನ್ನು   ರೂಢಿಸಿಕೊಂಡಿದ್ದೇನೆ. ಕಳೆದ ಋತುವಿನಲ್ಲಿ ಬ್ಯಾಟಿಂಗ್ ಮಾಡುವಾಗ ಬಹಳಷ್ಟು ಬಾರಿ ಎಲ್‌ಬಿಡಬ್ಲ್ಯು ಆಗಿ ಔಟಾಗುತ್ತಿದ್ದೆ.

ಆ ಸಮಸ್ಯೆಯನ್ನೂ ಪರಿಹರಿಸಿಕೊಂಡಿದ್ದೇನೆ.  ತರಬೇತುದಾರರ ನೆರವಿನಿಂದ ಪ್ರದರ್ಶನ ಉತ್ತಮಪಡಿಸಿಕೊಂಡಿದ್ದೇನೆ' ಎಂದು ಗೌತಮ್ ಹೇಳುತ್ತಾರೆ. ಮೈಸೂರಿನಲ್ಲಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನ ಚೊಚ್ಚಲ ಶತಕ ದಾಖಲಿಸಿದ ಕೆ.ಎಲ್. ರಾಹುಲ್, ಗೌತಮ್ ಅವರಲ್ಲಿರುವ ಇನ್ನೊಂದು ವಿಶೇಷತೆಯನ್ನು ಗುರುತಿಸಿದ್ದಾರೆ.`ಗೌತಮ್ ಅವರು ಜೊತೆಯಾಟ ಕಟ್ಟುವುದರಲ್ಲಿ ಪರಿಣಿತರು. ಅವರ ಎದುರಿಗೆ ಬ್ಯಾಟಿಂಗ್ ಮಾಡುವವರು ಅವರಿಗಿಂತ ಕಿರಿಯರೇ ಇರಲಿ, ಇಲ್ಲ ಹಿರಿಯರೇ ಇರಲಿ. ಅವರಿಗೂ ಅವಕಾಶ ಕೊಟ್ಟು, ತಾವು ರನ್ ಗಳಿಸುತ್ತ ಹೋಗುವ ಅವರ ಪರಿ ಅನನ್ಯ. ಕ್ರೀಸ್‌ನಲ್ಲಿ ಮತ್ತು ಹೊರಗೆ ಅವರು ಉತ್ತಮ ಸ್ನೇಹಿಜೀವಿ. ನಗುಮುಖದಿಂದಲೇ ಸವಾಲುಗಳನ್ನು ಎದುರಿಸುತ್ತಾರೆ' ಎಂದು ರಾಹುಲ್ ಹೇಳುತ್ತಾರೆ.37 ಪಂದ್ಯಗಳನ್ನು ಆಡಿರುವ 26 ಹರೆಯದ ಗೌತಮ್ 56.86ರ ಸರಾಸರಿಯಲ್ಲಿ ಒಟ್ಟು 2171 ರನ್ ಗಳಿಸಿದ್ದಾರೆ. ಎಂಟು ಅರ್ಧಶತಕಗಳೂ, 7 ಶತಕಗಳು ಮತ್ತು ಒಂದು ದ್ವಿಶತಕ ಅವರ ಖಾತೆಯಲ್ಲಿವೆ. ಬೆಂಗಳೂರಿನ ವಿಜಯಾ ಬ್ಯಾಂಕ್ ಉದ್ಯೋಗಿಯಾಗಿರುವ ಅವರು, ವಿಕೆಟ್ ಹಿಂದೆ 117 ಕ್ಯಾಚ್‌ಗಳನ್ನು ಪಡೆದು 6 ಸ್ಪಂಪಿಂಗ್ ಕೂಡ ಮಾಡಿದ್ದಾರೆ.  ಭಾರತ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಟ್ಟಿಕೊಂಡು ಮಹೇಂದ್ರಸಿಂಗ್ ದೋನಿಯ ಹಿಂದೆ ಸಾಲುಗಟ್ಟಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗಳಲ್ಲಿ ಗೌತಮ್ ಕೂಡ ಒಬ್ಬರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry