ಭಾನುವಾರ, ಫೆಬ್ರವರಿ 28, 2021
24 °C
ತುರ್ತುಪರಿಸ್ಥಿತಿ ವಿರೋಧಿ ಹೋರಾಟಗಾರರಿಗೆ ಸನ್ಮಾನ

ಮತ್ತೆಂದೂ ಬಾರದಿರಲಿ ಆ ಕರಾಳ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆಂದೂ ಬಾರದಿರಲಿ ಆ ಕರಾಳ ದಿನ

ಬೆಂಗಳೂರು: ‘ಜನರ ಹಕ್ಕು ದಮನಿಸಿ, ಹಕ್ಕುಗಳನ್ನು ಕಿತ್ತುಕೊಳ್ಳುವ ಮತ್ತು ಪ್ರಜಾಪ್ರಭುತ್ವಕ್ಕೆ ಆಘಾತ ಮಾಡುವಂತಹ ತುರ್ತುಪರಿಸ್ಥಿತಿ ಭವಿಷ್ಯದಲ್ಲಿ ಎಂದಿಗೂ ಬರಬಾರದು. ಈ ವಿಚಾರದಲ್ಲಿ ಯುವ ಜನತೆ ಎಚ್ಚೆತ್ತುಕೊಳ್ಳಬೇಕು’ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ ಎಚ್ಚರಿಸಿದರು.ಭಾರತ ಯಾತ್ರಾ ಕೇಂದ್ರ, ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಮಾಜಿ ಪ್ರಧಾನಿ ಚಂದ್ರಶೇಖರ್‌ ಅವರ ಪಾದಯಾತ್ರೆ ನೆನಪಿನಲ್ಲಿ ಆಯೋಜಿಸಿದ್ದ ‘ಭಾರತ ಪಾದಯಾತ್ರಿಗಳ ಸಮಾವೇಶ ಮತ್ತು ತುರ್ತುಪರಿಸ್ಥಿತಿ ಆತಂಕದ ದಿನಗಳು’ ಎಂಬ ಕಾರ್ಯಕ್ರಮದಲ್ಲಿ ತುರ್ತುಪರಿಸ್ಥಿತಿ ವಿರೋಧಿ ಹೋರಾಟಗಾರರಿಗೆ ಸನ್ಮಾನಿಸಿ ಅವರು ಮಾತನಾಡಿದರು.‘ತುಂಬಾ ದಿಟ್ಟೆಯಾಗಿದ್ದ ಇಂದಿರಾ ಗಾಂಧಿ ಕುರ್ಚಿ ಮೇಲಿನ ಆಸೆಯಿಂದ ತುರ್ತುಪರಿಸ್ಥಿತಿ ಹೇರಿ, ಪ್ರಜಾಪ್ರಭುತ್ವ ಕೊಂದದ್ದು ಅಕ್ಷಮ್ಯ ಅಪರಾಧ. ಜನ ಅದಕ್ಕೆ ಸರಿಯಾದ ಪಾಠ ಕೂಡ ಕಲಿಸಿ, ಮನೆಗೆ ಅಟ್ಟಿದರು. ಅದು ಪ್ರಜಾಪ್ರಭುತ್ವಕ್ಕೆ ಸಂದ ಜಯ’ ಎಂದು  ಬಣ್ಣಿಸಿದರು.ಮಾಜಿ ಶಾಸಕ ಮೈಕಲ್‌ ಫರ್ನಾಂಡಿಸ್‌ ಮಾತನಾಡಿ, ‘ಖಾಸಗಿ ಜೀವನದಲ್ಲಿ ಕಷ್ಟವೇ ಅರಿಯದ ನಾವು ಮೂವರು ಸಹೋದರರು ಜನರಿಗಾಗಿ, ಪ್ರಜಾಪ್ರಭುತ್ವಕ್ಕಾಗಿ ಜೈಲಿಗೆ ಹೋಗಿದ್ದೆವು. ತುರ್ತುಪರಿಸ್ಥಿತಿ ರುಚಿ ನೋಡದಿದ್ದರೆ ನಮಗೆ ಪ್ರಜಾಪ್ರಭುತ್ವದ ಬೆಲೆ ಗೊತ್ತಾಗುತ್ತಿರಲಿಲ್ಲ. ಅದನ್ನು ಎತ್ತಿಹಿಡಿದು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.ಕಲಾವಿದ ಚಿ.ಸು.ಕೃಷ್ಣಶೆಟ್ಟಿ ಮಾತ ನಾಡಿ, ‘ಜೈಲಿನೊಳಗೆ ಹೈದರಾಬಾದ್ ಗೋಲಿ, ಏರೋಪ್ಲೇನ್‌ ಶಿಕ್ಷೆ ಅನುಭವಿಸಿದವರಿಗಷ್ಟೇ ತುರ್ತುಪರಿಸ್ಥಿತಿಯ ಕರಾಳ ಮುಖದ ಪರಿಚಯವಿದೆ. ಆದರೆ, ಆ ಅನುಭವಗಳು ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿದ್ದು ಬಹಳ ಕಡಿಮೆ.  ತುರ್ತುಪರಿಸ್ಥಿತಿಯಲ್ಲಿ ಜೈಲು ಕಂಡವರು ಇನ್ನಾದರೂ, ಪುಸ್ತಕ ಬರೆದರೆ ಅವು ಮುಂದಿನ ಪೀಳಿಗೆಗೆ ದಾರಿದೀಪಗಳಾಗುತ್ತವೆ’ ಎಂದರು.ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಮಾತನಾಡಿ, ‘ಪ್ರಜಾಪ್ರಭುತ್ವ ಮತ್ತು ಪ್ರಜೆಗಳ ಹಕ್ಕು ಮೊಟಕುಗೊಳಿಸುವ ಕೃತ್ಯವನ್ನು ಯಾವ ಪಕ್ಷದವರೂ ಮಾಡಿದರೂ ಅದು ಅಕ್ಷಮ್ಯ. ಆ ಕರಾಳ ದಿನಗಳು ಕಳೆದು 42 ವರ್ಷಗಳು ಸಂದರೂ ಈಗಲೂ ಸಹ ದೇಶದಲ್ಲಿ ಮತ್ತೊಮ್ಮೆ ತುರ್ತುಪರಿಸ್ಥಿತಿ ಬರಲಾರದು ಎಂದು ಹೇಳದ ಸ್ಥಿತಿಯಿದೆ’ ಎಂದರು.ಹಿರಿಯ ರಾಜಕಾರಣಿ ಪಿ.ಜಿ.ಆರ್‌ ಸಿಂಧ್ಯಾ ಮಾತನಾಡಿ, ‘ಪ್ರಜಾಪ್ರಭುತ್ವಕ್ಕೆ ಕಂಟಕರಾದವರು, ಸರ್ವಾಧಿಕಾರಿ ಧೋರಣೆ ಉಳ್ಳವರು ಬಹಳ ದಿನ ಉಳಿಯುವುದಿಲ್ಲ ಎನ್ನುವ ಪಾಠ ತುರ್ತುಪರಿಸ್ಥಿತಿ ಕಲಿಸಿದೆ. ಯಾರೇ ಆಗಲಿ ಮತ್ತೊಬ್ಬರ ವಿಚಾರಗಳಿಗೆ ಮನ್ನಣೆ ನೀಡಬೇಕು ಎನ್ನುವುದನ್ನು ಯುವ ಪೀಳಿಗೆ ಇದರಿಂದ ಕಲಿಯಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.‘ಆರು ಚದರಡಿ ಜೈಲಿನ ಕೋಣೆಯಲ್ಲಿ ನನ್ನನ್ನು ಸೇರಿದಂತೆ ಆರು ಜನ ಹೋರಾಟಗಾರರನ್ನು ಬಂಧಿಸಿಟ್ಟಿದ್ದರು. ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಬೇಕಾದ ದರಿದ್ರ ಸ್ಥಿತಿ ಅಲ್ಲಿತ್ತು. ಪೊಲೀಸರ ಕ್ರೂರ ಹಿಂಸೆ ನಮಗೆ ಅರಿವಾಗಿದ್ದು ಅಲ್ಲಿಯೇ’ ಎಂದು ಶಾಸಕ ಸುರೇಶ್‌ ಕುಮಾರ್‌ ತಮ್ಮ ಕರಾಳ ನೆನಪಿನ ಬುತ್ತಿ ಬಿಚ್ಚಿದರು.‘ತುರ್ತು ಪರಿಸ್ಥಿತಿಯಿಂದ ನಾವು ಸಾರ್ವಜನಿಕ ಮತ್ತು ರಾಜಕೀಯ ಬದುಕಿನಲ್ಲಿ ಕಲಿಯಬೇಕಾದ ಅನೇಕ ಪಾಠಗಳಿವೆ. ಇತಿಹಾಸ ಮರೆತರೆ ಭವಿಷ್ಯದಲ್ಲಿ ಅಪಾಯ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯಿಂದ ನಾವೆಲ್ಲರೂ ಜಾಗೃತರಾಗಬೇಕು’ ಎಂದು ಹೇಳಿದರು.ವಂಶಾಡಳಿತ, ಪ್ರಜಾಪ್ರಭುತ್ವ ದಮನ ಮತ್ತು ಭ್ರಷ್ಟಾಚಾರದ ವಿರುದ್ಧ ಬೊಬ್ಬೆ ಹಾಕಿ, ತುರ್ತುಪರಿಸ್ಥಿತಿಯಲ್ಲಿ ಜೈಲಿಗೆ ಹೋದವರೇ, ಇಂದು ಅವುಗಳ ಬೆನ್ನು ಬಿದ್ದಿರುವುದು ನೋವಿನ ಸಂಗತಿ

ವಿ.ಎಸ್‌.ಉಗ್ರಪ್ಪ,
ವಿಧಾನ ಪರಿಷತ್‌ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.