ಮತ್ತೆ ಅಮೆರಿಕ ಸಾಹಸ ಉಗ್ರ ಇಲ್ಯಾಸ್ ಹತ್ಯೆ

ಮಂಗಳವಾರ, ಜೂಲೈ 23, 2019
24 °C

ಮತ್ತೆ ಅಮೆರಿಕ ಸಾಹಸ ಉಗ್ರ ಇಲ್ಯಾಸ್ ಹತ್ಯೆ

Published:
Updated:

ಇಸ್ಲಾಮಾಬಾದ್ (ಪಿಟಿಐ):ಜಗತ್ತಿನ ಅತ್ಯಂತ ಅಪಾಯಕಾರಿ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಹಾಗೂ ಮುಂಬೈ ದಾಳಿಯ ಪ್ರಮುಖ ಸೂತ್ರಧಾರ ಎಂದೇ ಪರಿಗಣಿಸಲಾಗಿದ್ದ ಇಲ್ಯಾಸ್ ಕಾಶ್ಮೀರಿಯನ್ನು ಅಮೆರಿಕವು ಪಾಕಿಸ್ತಾನದಲ್ಲಿ ಡ್ರೋಣ್ (ಚಾಲಕರಹಿತ ವಿಮಾನ) ದಾಳಿ ನಡೆಸಿ ಕೊಂದುಹಾಕಿದೆ.ದಕ್ಷಿಣ ವಜೀರಿಸ್ತಾನದ ಘ್ವಾಕ್ವಾ ಪ್ರದೇಶದಲ್ಲಿ ಇರುವ ಸೇಬಿನ ಹಣ್ಣಿನ ತೋಟದ ಮೇಲೆ ಶುಕ್ರವಾರ ತಡರಾತ್ರಿ ಡ್ರೋಣ್ ಮೂಲಕ ಹಾರಿಸಿದ ನಾಲ್ಕು ಕ್ಷಿಪಣಿಗಳಿಗೆ ಆತನ ಜೊತೆಯಲ್ಲಿ ಇತರ 9 ಉಗ್ರರೂ ಬಲಿಯಾಗಿದ್ದಾರೆ. ಪಾಕಿಸ್ತಾನದ ಸೇನೆಯ ಮಾಜಿ ಕಮಾಂಡೊ ಸಹ ಆಗಿದ್ದ 47 ವರ್ಷದ ಕಾಶ್ಮೀರಿ  ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಸಂಘಟನೆಗೆ ಸೇರಿದವನು; ಉಳಿದವರೆಲ್ಲರೂ ಪಾಕಿಸ್ತಾನಿ ಪಂಜಾಬಿ ತಾಲಿಬಾನ್ ಸದಸ್ಯರು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಮುಖ ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ನನ್ನು ಪಾಕಿಸ್ತಾನದ ಅಬೊಟೊಬಾದ್‌ನಲ್ಲಿ ಅಮೆರಿಕದ ಕಮಾಂಡೊ ಪಡೆಗಳು ಹತ್ಯೆ ಮಾಡಿದ ಕೇವಲ ಒಂದು ತಿಂಗಳಿನಲ್ಲಿ ಈ ಘಟನೆ ನಡೆದಿದೆ. ಕಾಶ್ಮೀರಿಯ ಸಾವನ್ನು ಟಿ.ವಿ ವಾಹಿನಿಗಳಿಗೆ ಕಳುಹಿಸಿರುವ ಫ್ಯಾಕ್ಸ್ ಸಂದೇಶದಲ್ಲಿ `ಹುಜಿ~ಯು ದೃಢಪಡಿಸಿದೆ.ಈ ಕೃತ್ಯಕ್ಕಾಗಿ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಹುಜಿ ವಕ್ತಾರ ಅಬು ಹಂಜಾಲ ಲಿಖಿತ ಹೇಳಿಕೆಯಲ್ಲಿ ಗುಡುಗಿದ್ದಾನೆ. ಅಲ್‌ಖೈದಾ ಜೊತೆಗೆ ಉತ್ತಮ ನಂಟು ಹೊಂದಿದ್ದ ಕಾಶ್ಮೀರಿ, ಒಸಾಮ ನಂತರ ಅದರ ಹೊಣೆ ಹೊರಲಿದ್ದಾನೆ ಎಂಬ ವದಂತಿಗಳು ದಟ್ಟವಾಗಿದ್ದವು.ಈತನ ತಲೆಗೆ ಅಮೆರಿಕ 50 ಲಕ್ಷ ಡಾಲರ್ ಬಹುಮಾನ ಘೋಷಿಸಿತ್ತು. ಅಲ್ಲದೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಸಲ್ಲಿಸಿದ್ದ ಅತ್ಯಂತ ಬೇಕಾದ ಐವರು ಭಯೋತ್ಪಾದಕರ ಪಟ್ಟಿಯಲ್ಲಿ ಈತನ ಹೆಸರೂ ಇತ್ತು. ಪಟ್ಟಿಯಲ್ಲಿರುವ ಇತರರಲ್ಲಿ ಅಲೈಖೈದಾದ ಎರಡನೇ ನಾಯಕ ಐಮನ್ ಅಲ್ ಜವಾಹಿರಿ, ಕಾರ್ಯಾಚರಣೆ ಘಟಕದ ಮುಖ್ಯಸ್ಥ ಅತಿಯ ಅಬ್ದೆಲ್ ರೆಹಮಾನ್, ತಾಲಿಬಾನ್ ನಾಯಕ ಮುಲ್ಲಾ ಒಮರ್ ಇದ್ದು, ಇವರೆಲ್ಲರೂ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.ಈ ವ್ಯಕ್ತಿಗಳ ಶೋಧಕ್ಕೆ ಜಂಟಿ ತನಿಖಾ ತಂಡ ರಚಿಸುವುದಾಗಿ ಉಭಯ ದೇಶಗಳೂ ಘೋಷಿಸಿವೆ. ದಾಳಿ ನಡೆದ ಸೇಬಿನ ತೋಟಕ್ಕೆ ಸಹಚರರೊಂದಿಗೆ ಕೆಲ ಹೊತ್ತಿನ ಹಿಂದಷ್ಟೇ ಆತ ಬಂದಿದ್ದ ಎಂದು ಹೇಳಲಾಗಿದೆ. ಶನಿವಾರ ತೋಟದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳ ಸಂಸ್ಕಾರವನ್ನು ಸಮೀಪದ ಸ್ಮಶಾನದಲ್ಲಿ ತಾವು ನಡೆಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry