ಮತ್ತೆ ಆರ್ಥಿಕ ಹಿಂಜರಿತ ಭೀತಿ

7

ಮತ್ತೆ ಆರ್ಥಿಕ ಹಿಂಜರಿತ ಭೀತಿ

Published:
Updated:

ಬ್ರುಸೆಲ್ಸ್(ಐಎಎನ್‌ಎಸ್): ಏಕರೂಪದ ಕರೆನ್ಸಿ ಚಲಾವಣೆ ಹೊಂದಿರುವ ಹದಿನೇಳು ದೇಶಗಳನ್ನೊಳಗೊಂಡ `ಯೂರೋ' ವಲಯದಲ್ಲಿ ಮತ್ತೆ `ಆರ್ಥಿಕ ಹಿಂಜರಿತ'ದ ಆತಂಕ ಮನೆ ಮಾಡಿದೆ. ಈ ವಲಯದ ಆರ್ಥಿಕ ಪ್ರಗತಿ ಸತತ ಎರಡನೇ ತ್ರೈಮಾಸಿಕ ಅವಧಿಯಲ್ಲಿಯೂ ಕುಸಿತ ಕಂಡಿದೆ.ಯೂರೋ ವಲಯದಲ್ಲಿ ಏಪ್ರಿಲ್-ಜೂನ್ ನಡುವಿನ 2ನೇ ತ್ರೈಮಾಸಿಕದಲ್ಲಿ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ ಪ್ರಮಾಣದಲ್ಲಿ(ಜಿಡಿಪಿ) ಶೇ 0.2ರಷ್ಟು ಇಳಿಕೆಯಾಗಿದ್ದಿತು. ಜುಲೈ-ಸೆಪ್ಟೆಂಬರ್‌ನ ಮೂರನೇ ತ್ರೈಮಾಸಿಕದಲ್ಲಿಯೂ ಕುಸಿತ ಮುಂದುವರಿದಿದ್ದು, ಜಿಡಿಪಿ ಶೇ 0.6ಕ್ಕೆ ತಗ್ಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 0.1ರಷ್ಟು ಕುಸಿತವಾಗಿದೆ ಎಂದು ಯೂರೋಪ್ ಒಕ್ಕೂಟದ ಅಂಕಿ-ಅಂಶಗಳ ಸಂಸ್ಥೆ `ಯೂರೋಸ್ಟ್ಯಾಟ್' ತಿಳಿಸಿದೆ.ಅಲ್ಲದೆ, ಈ ಭಾಗದಲ್ಲಿನ ನಿರುದ್ಯೋಗ ಪ್ರಮಾಣ ಅಕ್ಟೋಬರ್‌ನಲ್ಲಿ   ಶೇ 11.7ರ ಗರಿಷ್ಠ ಮಟ್ಟಕ್ಕೇರಿದೆ. ಅದರಲ್ಲೂ ಸ್ಪೇನ್‌ನಲ್ಲಿನ ನಿರುದ್ಯೋಗ ಮಟ್ಟ ಶೇ 26.2ಕ್ಕೇರಿ ಕಳವಳಕ್ಕೀಡು ಮಾಡಿದೆ. ಇದು ಸೆಪ್ಟೆಂಬರ್‌ನಲ್ಲಿ  ಶೇ 25.8ರಷ್ಟಿದ್ದಿತು. ನಿರುದ್ಯೋಗಿಗಳ ಸಂಖ್ಯೆ ಗ್ರೀಸ್‌ನಲ್ಲಿ ಶೇ 25.4ಕ್ಕೂ ಪೋರ್ಚುಗಲ್‌ನಲ್ಲಿ ಶೇ 16.3ಕ್ಕೂ ಏರಿದೆ.ನಿರುದ್ಯೋಗಿಗಳ ಸಂಖ್ಯೆ ಇಡೀ ಯೂರೋಪ್ ಒಕ್ಕೂಟದಲ್ಲಿ 2.60 ಕೋಟಿಯಷ್ಟಿದ್ದರೆ, `ಯೂರೋ' ಕರೆನ್ಸಿ ವಲಯದಲ್ಲಿ 1.87 ಕೋಟಿಯಷ್ಟಿದೆ ಎಂದು `ಯೂರೋಸ್ಟ್ಯಾಟ್' ವಿವರ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry