ಮತ್ತೆ ಎಚ್ಡಿಕೆ ಕಣ್ಣೀರು: ಚಿಕ್ಕಬಳ್ಳಾಪುರದಿಂದ ಸ್ಪರ್ಧೆ

ರಾಮನಗರ: ‘ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಮನಸ್ಸಿಲ್ಲ. ಆದರೂ ತಂದೆ ಮಾತನ್ನು ಪಾಲಿಸಬೇಕಾದ ಅಗತ್ಯ ಬಂದೊದಗಿದೆ’
ರಾಮನಗರದ ಶಾಸಕ ಎಚ್.ಡಿ. ಕುಮಾರಸ್ವಾಮಿ ಮತ್ತೆ ಸಾರ್ವಜನಿಕವಾಗಿ ಕಣ್ಣೀರು ಹಾಕಿ ಗದ್ಗದಿತ ಕಂಠದಲ್ಲಿ ಉಸುರಿದ ನುಡಿಗಳಿವು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರ ರೆಡ್ಡಿ ಸೋಮವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನಡೆದ ಮೆರವಣಿಗೆ ವೇಳೆ ಬಹಿರಂಗ ಭಾಷಣ ಮಾಡಿದ ಕುಮಾರಸ್ವಾಮಿ, ಮತ್ತೆ ಮತ್ತೆ ಭಾವನಾತ್ಮಕ ವಿಷಯಗಳ ಮೂಲಕ ಜನರ ಮುಂದೆ ಹಲವು ವಿಷಯಗಳನ್ನು ಬಿಡಿಸಿಟ್ಟರು.
ಕಾರ್ಯಕರ್ತರ ಸಮ್ಮುಖದಲ್ಲಿ ಅರ್ಧಗಂಟೆ ಮಾತನಾಡಿದ ಅವರು ಗದ್ಗದಿತರಾಗಿಯೇ ಮಾತುಗಳನ್ನು ಆರಂಭಿಸಿದ್ದು ವಿಶೇಷವಾಗಿತ್ತು. ಭಾಷಣದುದ್ದಕ್ಕೂ ಬಿಕ್ಕಳಿಕೆ, ಕಣ್ಣೀರು ಹಾಗೂ ಭಾವೋದ್ವೇಗಗಳ ನಡುವೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸ್ಪಷ್ಟ ಇಂಗಿತವನ್ನೂ ರವಾನಿಸಿದರು.
‘ನನ್ನ ತಂದೆ ಜೀವನದ ಕೊನೆಯ ರಾಜಕೀಯ ಹೋರಾಟ ನಡೆಸಿದ್ದಾರೆ. ಅವರಿಗೆ ಶಕ್ತಿ ತುಂಬಬೇಕಾದ್ದು ಮಗನ ಕರ್ತವ್ಯ. ಒಂದೊಂದು ಸ್ಥಾನ ಗೆಲ್ಲುವುದೂ ಜೆಡಿಎಸ್ಗೆ ಮುಖ್ಯವಾಗಿದೆ’ ಎಂದ ಅವರು, ‘ಭಾನುವಾರ ರಾತ್ರಿ 12.30ಕ್ಕೆ ಕರೆ ಮಾಡಿದ್ದ ತಂದೆಯ-ವರು ನೀನು ಚುನಾವಣೆಗೆ ನಿಲ್ಲದಿದ್ದರೆ ನನ್ನ ಮಗ ಎಂದು ಹೇಗೆ ಕರೆಯಲಿ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಅವರಿಗೆ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಬೇರೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ನಾನು ತಂದೆಯ ಮಾತನ್ನು ಕೇಳಬೇಕೋ, ಬೇಡವೋ ನೀವೇ ಹೇಳಿ’ ಎಂದು ಕಣ್ಣೀರು ಸುರಿಸುತ್ತಲೇ ಪ್ರಶ್ನಿಸಿದರು.
‘ಸಿದ್ದರಾಮಯ್ಯನವರಿಗೆ ಹೆಂಗಸರ ಬಗ್ಗೆ ಕೀಳು ಅಭಿರುಚಿ ಇದೆ’
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ರಾಜ್ಯದಲ್ಲಿ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದಿದ್ದಾರೆ. ಈ ಸವಾಲನ್ನು ಸ್ವೀಕರಿಸಿದ್ದೇನೆ. ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅವರಿಗೆ ಪ್ರತ್ಯುತ್ತರ ಕೊಡುತ್ತೇನೆ. ಚಿಕ್ಕಬಳ್ಳಾಪುರದ ಜನ ನನ್ನನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ರಾಮನಗರದ ಜನರ ಒಪ್ಪಿಗೆ ಪಡೆದು ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅವರಿಗೆ ಹೇಳಿದ್ದೇನೆ’ ಎಂದಾಗ ಮತ್ತೆ ಅವರ ಕಣ್ಣಿನಿಂದ ನೀರು ತಂತಾನೆ ಹನಿದವು.
‘ಅಳುವ ಗಂಡಸನ್ನು, ನಗುವ ಹೆಂಗಸನ್ನು ನಂಬಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. ಈ ಮೂಲಕ ಅವರು ಹೆಂಗಸರ ಬಗ್ಗೆ ಕೀಳು ಅಭಿರುಚಿ ಹೊಂದಿರುವ ಮುಖ್ಯಮಂತ್ರಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹೃದಯದಲ್ಲಿ ಕೃತಜ್ಞತೆ ಇಲ್ಲದವರಿಗೆ ನಗು ಮತ್ತು ಅಳುವಿನ ಭಾವನೆ ಗೊತ್ತಿರುವುದಿಲ್ಲ. ಅಂತಹ ವ್ಯಕ್ತಿಯಿಂದ ಪ್ರಮಾಣ ಪತ್ರ ಪಡೆಯುವ ಅಗತ್ಯವೂ ನನಗಿಲ್ಲ’ ಎಂದು ಅವರು ಗದ್ಗದಿತರಾಗಿಯೇ ನುಡಿದರು.
‘ಅಧಿಕಾರಕ್ಕಾಗಿ ನಾನು ಕಣ್ಣೀರು ಸುರಿಸುತ್ತಿಲ್ಲ. ಇಲ್ಲಿನ ಜನರ ಪ್ರೀತಿ ವಿಶ್ವಾಸ ನೋಡಿ ನನಗೆ ಕಣ್ಣೀರು ಬರುತ್ತದೆ’ ಎಂದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷ ಕಟ್ಟಿ ಬೆಳೆಸುವ ಯೋಗ್ಯತೆ ಇಲ್ಲದೆ ಕಾಂಗ್ರೆಸ್ಗೆ ಹೋಗಿ, ಅಲ್ಲಿ ರಾಹುಲ್ ಗಾಂಧಿ ಕಾಲು ಹಿಡಿದು ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದು ಶಾಶ್ವತ ಅಲ್ಲ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ಸಿಗರೇ ನಿಮ್ಮನ್ನು ಆ ಸ್ಥಾನದಲ್ಲಿ ಮುಂದುವರೆಯಲು ಬಿಡುವುದಿಲ್ಲ. ಆಗ ನಿಮಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಮನೆ ಬಾಗಿಲಿಗೆ ಬರುವ ಕಾಲ ಬರುತ್ತದೆ’ ಎಂದು ಭವಿಷ್ಯ ನುಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.