ಮತ್ತೆ ಕಲಿಯಲು ಬಾರದ ಶಾಲೆ ಬಿಟ್ಟ ಮಕ್ಕಳು

7

ಮತ್ತೆ ಕಲಿಯಲು ಬಾರದ ಶಾಲೆ ಬಿಟ್ಟ ಮಕ್ಕಳು

Published:
Updated:

ತುಮಕೂರು: ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಸಾವಿರ ಮೀರಿದ್ದು, ಮತ್ತೆ ಶಾಲೆಗೆ ಕರೆತರಲು ಸಾಧ್ಯವಾಗಿರುವುದು ನೂರರ ಸಂಖ್ಯೆಯಲ್ಲಿ ಮಾತ್ರ. ಶಿಕ್ಷಣ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಪ್ರಯತ್ನಪಟ್ಟರೂ ಮಕ್ಕಳನ್ನು ಮತ್ತೆ ಶೈಕ್ಷಣಿಕ ಅಂಗಳಕ್ಕೆ ಕರೆ ತರಲು ಸಾಧ್ಯವಾಗಿಲ್ಲ.ಶಿಕ್ಷಣ ಇಲಾಖೆ ಕಳೆದ ಜುಲೈ- ಆಗಸ್ಟ್‌ನಲ್ಲಿ ವಿಶೇಷ ದಾಖಲಾತಿ ಆಂದೋಲನ ಮತ್ತು ಚಿಣ್ಣರ ಅಂಗಳ ಕಾರ್ಯಕ್ರಮ ರೂಪಿಸಿತ್ತು. ಅರ್ಧದಲ್ಲಿ ಶಾಲೆ ಬಿಟ್ಟ 7ರಿಂದ 14 ವರ್ಷದ ಮಕ್ಕಳನ್ನು ಮತ್ತೆ ಶಾಲೆಗೆ ಕರೆ ತರುವುದು ಈ ಆಂದೋಲನದ ಉದ್ದೇಶವಾಗಿತ್ತು.ಆದರೆ ಈ ವರ್ಷ ಶೇ 30ರಷ್ಟು ಮಕ್ಕಳನ್ನು ಸಹ ಶಾಲೆಗೆ ಕರೆತರಲು ಸಾಧ್ಯವಾಗಿಲ್ಲ. ಅದರಲ್ಲೂ ಶಾಲೆ ಬಿಟ್ಟ ಮಕ್ಕಳಲ್ಲಿ ಮುಸ್ಲಿಂ ಜನಾಂಗದ ಮಕ್ಕಳು ಅತಿ ಹೆಚ್ಚಾಗಿದ್ದಾರೆ.ಈ ವರ್ಷ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 1155 ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 445 ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲಾಗಿತ್ತು. ಇದರಲ್ಲಿ ತುಮಕೂರಿನಲ್ಲಿ 325, ಮಧುಗಿರಿಯಲ್ಲಿ 265 ಮಕ್ಕಳನ್ನು ಶಾಲೆಗೆ ಕರೆ ತರಲಾಗಿದೆ. ಉಳಿದ 1095 ಮಕ್ಕಳು ಶಾಲೆ ಕಡೆ ಮುಖ ಮಾಡಲು ಮುಂದಾಗಿಲ್ಲ.ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 1ರಿಂದ 5ನೇ ತರಗತಿವರೆಗೆ 157 ಹೆಣ್ಣು ಮಕ್ಕಳು, 206 ಪರಿಶಿಷ್ಟ ಜಾತಿ ಮಕ್ಕಳು ಶಾಲೆ ಬಿಟ್ಟಿದ್ದರು. 6ರಿಂದ 8ನೇ ತರಗತಿವರೆಗೆ 170 ಹೆಣ್ಣು ಮಕ್ಕಳು, 189 ಪರಿಶಿಷ್ಟ ಜಾತಿ ಮಕ್ಕಳು ಶಾಲೆ ಬಿಟ್ಟಿದ್ದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 1ರಿಂದ 5ನೇ ತರಗತಿವರೆಗೆ 78 ಹೆಣ್ಣು ಮಕ್ಕಳು, 33 ಪರಿಶಿಷ್ಟ ಜಾತಿ ಮಕ್ಕಳು ಶಾಲೆ ಬಿಟ್ಟಿದ್ದರು. 6ರಿಂದ 8ನೇ ತರಗತಿವರೆಗೆ 107 ಹೆಣ್ಣು ಮಕ್ಕಳು, 51 ಪರಿಶಿಷ್ಟ ಜಾತಿ ಮಕ್ಕಳು ಶಾಲೆ ಬಿಟ್ಟಿದ್ದಾರೆ.ಕಳೆದ ವರ್ಷ ಜಿಲ್ಲೆಯಲ್ಲಿ 773 ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಲಾಗಿತ್ತು. ಇದರಲ್ಲಿ 263 ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲಾಗಿತ್ತು. ಆದರೆ ಈ ವರ್ಷ ಮತ್ತೆ ಇಂತಹ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪೋಷಕರು ಮಕ್ಕಳನ್ನು ದುಡಿಮೆಗೆ ಹಚ್ಚುತ್ತಿರುವುದು ಮತ್ತು ಪೋಷಕರು ಕೆಲಸಕ್ಕಾಗಿ ವಲಸೆ ಹೋಗುತ್ತಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.ಬಾರದ ಮದರಸ ಮಕ್ಕಳು

ತುಮಕೂರು ಜಿಲ್ಲೆಯಲ್ಲಿ 11 ಮದರಸಗಳಿವೆ. ಇವುಗಳಲ್ಲಿ 400ಕ್ಕೂ ಹೆಚ್ಚು ಮಕ್ಕಳು ಮದರಸ ಶಿಕ್ಷಣ ಪದ್ಧತಿಯಲ್ಲಿ ಕಲಿಯುತ್ತಿದ್ದಾರೆ. ಈ ಮಕ್ಕಳನ್ನು ಸಾಮಾನ್ಯ ಶಿಕ್ಷಣ ಪದ್ಧತಿಗೆ ಪರಿವರ್ತಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

 

ಕುಣಿಗಲ್ ಮದರಸದ ಮುಖಂಡರೊಂದಿಗೆ ಮಾತನಾಡಿ 35 ಮಕ್ಕಳಿಗೆ ಪರ್ಯಾಯ ಶಿಕ್ಷಣ ನೀಡಲು ಒಪ್ಪಿಗೆ ಪಡೆಯಲಾಗಿದೆ. ಉಳಿದ ಮದರಸ ಮುಖ್ಯಸ್ಥರೊಂದಿಗೆ ಮಾತನಾಡಲಾಗಿದ್ದು, ಇನ್ನೂ ಒಪ್ಪಿಗೆ ಚಿಕ್ಕಿಲ್ಲ ಎನ್ನುತ್ತಾರೆ ಅಧಿಕಾರಿಗಳು.ಈಗಾಗಲೇ ಕಾಂಗ್ರೆಸ್ ಮುಖಂಡ ಶಫೀಅಹ್ಮದ್ ಸೇರಿದಂತೆ ಹಲವು ಮುಸ್ಲಿಂ ನಾಯಕರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ. ಎಲ್ಲ ಮದರಸ ಮುಖಂಡರ ಸಭೆ ಕರೆದು ಇಲಾಖೆ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಈ ಬಗ್ಗೆ   ವಕ್ಫ್‌ಬೋರ್ಡ್ ಅಧಿಕಾರಿಗಳು, ಮದರಸ ಮಂಡಳಿ ಮುಖ್ಯಸ್ಥರು ಸಭೆ ನಡೆಸಿದ್ದಾರೆ. ಪರ್ಯಾಯ ಶಿಕ್ಷಣ ನೀಡುವ ಬಗ್ಗೆ ಹಂತ ಹಂತವಾಗಿ ಮುಸ್ಲಿಂ ಮುಖಂಡರ ಮನವೊಲಿಸಲಾಗುತ್ತಿದೆ.ಶಿರಾ ತಾಲ್ಲೂಕಿನಲ್ಲಿ ಕಳೆದ 4 ವರ್ಷದ ಹಿಂದೆ ಪ್ರಯತ್ನ ಯಶಸ್ವಿಯಾಗಿತ್ತು. ಮದರಸ ಮುಖ್ಯಸ್ಥರ ಮನವೊಲಿಸಿ 4 ಮದರಸ ಮಕ್ಕಳನ್ನು ಸಾಮಾನ್ಯ ಶಿಕ್ಷಣ ಪದ್ಧತಿಗೆ ಕರೆ ತರಲಾಗಿತ್ತು ಎಂದು ಸರ್ವ ಶಿಕ್ಷಣ ಅಭಿಯಾನ ಅಧಿಕಾರಿ ಕೃಷ್ಣಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.ಮದರಸ ಮಕ್ಕಳು ಮತ್ತೆ ಸಾಮಾನ್ಯ ಶಾಲೆಗೆ ಬಂದರೆ ಉರ್ದು ಶಿಕ್ಷಕರ ನೇಮಕ ಮಾಡಲಾಗುವುದು. ಮಕ್ಕಳು ಇಷ್ಟಪಟ್ಟರೆ ಬಿಸಿಯೂಟ ಯೋಜನೆ ವಿಸ್ತರಿಸಲಾಗುವುದು. ಮದರಸದಲ್ಲಿಯೇ ಸಾಮಾನ್ಯ ಶಿಕ್ಷಣವನ್ನು ಕಲಿಯಲು ಅವಕಾಶ ಕಲ್ಪಿಸಲಾಗುತ್ತದೆ. ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry