ಮತ್ತೆ ಕಳೆಗಟ್ಟಿದ ಬೃಂದಾವನ

7

ಮತ್ತೆ ಕಳೆಗಟ್ಟಿದ ಬೃಂದಾವನ

Published:
Updated:

ಶ್ರೀರಂಗಪಟ್ಟಣ: ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29 ರಿಂದ ಬಂದ್ ಆಗಿದ್ದ ಕೃಷ್ಣರಾಜಸಾಗರದ ಬೃಂದಾವನವನ್ನು ಪ್ರವಾಸಿಗರಿಗೆ ಭಾನುವಾರ ಮುಕ್ತಗೊಳಿಸಲಾಗಿದೆ.ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುತ್ತಿದ್ದ ಕಾರಣ ಮಂಡ್ಯ ಜಿಲ್ಲಾ ಆಡಳಿತವು ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ  ಬೃಂದಾವನ ಪ್ರವೇಶ ನಿಷೇಧಿಸಿತ್ತು. ಬೃಂದಾವನ ಸುತ್ತಮುತ್ತ ನಿಷೇಧಾಜ್ಞೆ ಕೂಡ ಜಾರಿಯಾಗಿತ್ತು. ಅ.12 ರಿಂದ ಚಳವಳಿಯ ಕಾವು ಕಡಿಮೆಯಾಗಿರುವುದರಿಂದ ಪ್ರವಾಸಿಗರಿಗೆ ಪ್ರವೇಶಾವಕಾಶ ಕಲ್ಪಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಜಿಲ್ಲಾಡಳಿತ ನೀಡಿದ ಸೂಚನೆಯಂತೆ ಭಾನುವಾರ ಬೆಳಿಗ್ಗೆ 9.30ರಿಂದ ಪ್ರವೇಶಾವಕಾಶ ನೀಡಲಾಗಿದೆ.ಬೃಂದಾವನದ ಆಸುಪಾಸಿನ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿದ್ದು, ವ್ಯಾಪಾರಿಗಳು ಖುಷಿಯಾಗಿದ್ದಾರೆ.

ಮೀನುಗಾರಿಕಾ ಇಲಾಖೆ ಸುಪರ್ದಿಯಲ್ಲಿರುವ ವಿಶ್ವೇಶ್ವರಯ್ಯ ಮತ್ಸ್ಯಾಗಾರಕ್ಕೂ ಪ್ರವಾಸಿಗರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಂಜೆಯ ಸಂಗೀತ ಕಾರಂಜಿ ಕೂಡ ಶುರುವಾಗಿದೆ. ನೀರಿನ ಕೊರತೆಯಿಂದ ದೋಣಿ ವಿಹಾರ ಆರಂಭಿಸಿಲ್ಲ ಎಂದು ಸಹಾಯಕ ಎಂಜಿನಿಯರ್ ನಟೇಶ್ ತಿಳಿಸಿದ್ದಾರೆ.ಬೃಂದಾವನಕ್ಕೆ ದಿನಕ್ಕೆ ಸರಾಸರಿ 9 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ.  ಪ್ರವಾಸಿಗರಿಗೆ  ಪ್ರವೇಶ ನಿಷೇಧಿಸಿದ್ದರಿಂದಾಗಿ ದಿನವೊಂದಕ್ಕೆ  ರೂ 1.25 ಲಕ್ಷದಂತೆ ಇಲ್ಲಿಯವರೆಗೆ ರೂ 18.75 ಲಕ್ಷ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry