ಬುಧವಾರ, ನವೆಂಬರ್ 13, 2019
28 °C

ಮತ್ತೆ ಕ್ಷಮೆಯಾಚಿಸಿದ ಅಜಿತ್ ಪವಾರ್

Published:
Updated:

ಮುಂಬೈ (ಪಿಟಿಐ): ರಾಜ್ಯದ ಜನರನ್ನು ಕಾಡುತ್ತಿರುವ ಬರ ಪರಿಸ್ಥಿತಿ ಮತ್ತು ವಿದ್ಯುತ್ ಸಮಸ್ಯೆ ಕುರಿತು ಕೀಳು ಅಭಿರುಚಿಯ ವಿವಾದಾತ್ಮಕ ಹೇಳಿಕೆ ನೀಡಿ ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಸೋಮವಾರ ರಾಜ್ಯದ ಉಭಯ ಸದನಗಳಲ್ಲಿ ಕ್ಷಮೆಯಾಚಿಸಿದರು.ಪುಣೆ ಬಳಿಯ ಇಂದಾಪುರದಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ `ಅಣೆಕಟ್ಟೆಯಲ್ಲಿ ನೀರಿಲ್ಲದಿದ್ದರೆ ನಾವೇನು ಅಲ್ಲಿ ಹೋಗಿ ಮೂತ್ರ ವಿಸರ್ಜನೆ ಮಾಡಬೇಕೆ? ಎಂಬ ಎನ್‌ಸಿಪಿ ನಾಯಕರೂ ಆದ ಅಜಿತ್ ಅವರ ವಿವಾದಾತ್ಮಕ ಹೇಳಿಕೆಯನ್ನು ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡ ಹಿನ್ನೆಲೆಯಲ್ಲಿ ಅವರು ವೈಯಕ್ತಿಕವಾಗಿ ಸದನದ ಕ್ಷಮೆ ಯಾಚಿಸಿದರು.`ಬರ ಪೀಡಿತ ಜನರನ್ನು ಗುರಿಯಾಗಿರಿಸಿ ನಾನು ಹೇಳಿಕೆ ನೀಡಲಿಲ್ಲ, ರೈತರ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶವೂ ನನಗಿರಲಿಲ್ಲ. ಮಾತ್ರವಲ್ಲ, ನನ್ನ ಹೇಳಿಕೆಯು ಬರ ಪರಿಹಾರ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರದೆಂಬ ಭರವಸೆ ಹೊಂದಿದ್ದೇನೆ. ಜೊತೆಗೆ ಪದಗಳನ್ನು ಬಹಳ ಜಾಗರೂಕತೆಯಿಂದ ಬಳಸಬೇಕಿತ್ತು' ಎಂದು  ತಿಳಿಸಿದರು.ಶರದ್ ಕ್ಷಮೆ: ತಮ್ಮ ಪಕ್ಷದವರೇ ಆದ ಸಹೋದರನ ಪುತ್ರ ಅಜಿತ್ ಪವಾರ್ ಅವರ ಹೇಳಿಕೆ ಅನಗತ್ಯದ್ದಾಗಿದ್ದು, ಅದಕ್ಕಾಗಿ ಕ್ಷಮೆ ಯಾಚಿಸುವುದಾಗಿ ಕೇಂದ್ರ ಕೃಷಿ ಸಚಿವ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ `ಟ್ವೀಟ್' ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)