ಬುಧವಾರ, ಜನವರಿ 29, 2020
23 °C

ಮತ್ತೆ ಗಣೇಶ ಮಹಿಮೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದ ಬಿಡುಗಡೆಗೂ ಮುನ್ನವೇ ನಿರೀಕ್ಷೆಗೂ ಮೀರಿದ ಜಯ ಸಿಕ್ಕಿದೆ ಎಂಬ ಸಂಭ್ರಮದಲ್ಲಿತ್ತು ‘ಶ್ರಾವಣಿ ಸುಬ್ರಮಣ್ಯ’ ಚಿತ್ರತಂಡ.ಬಿಡುಗಡೆಗೂ ಮುನ್ನ ಸಿಗುವ ಗೆಲುವೆಂದರೆ ಚಿತ್ರದ ಹಾಡುಗಳಿಗೆ ದೊರಕುವ ಪ್ರತಿಕ್ರಿಯೆ. ಭರ್ಜರಿ ಬೆಲೆಗೆ ಉಪಗ್ರಹ ಹಕ್ಕುಗಳ ಮಾರಾಟ ಮತ್ತೊಂದು. ಈ ಎರಡರ ಸವಿಯೂ ‘ಶ್ರಾವಣಿ ಸುಬ್ರಮಣ್ಯ’ರಿಗೆ ದಕ್ಕಿದೆ.ಈಗಾಗಲೇ ಚಿತ್ರದ ಹಾಡುಗಳನ್ನು ಮಾರುಕಟ್ಟೆಗೆ ತಂದಿರುವ ಚಿತ್ರತಂಡ ಅದಕ್ಕೆ ದೊರೆತಿರುವ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿದೆ. ಈ ನೆಪದಲ್ಲಿಯೇ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹರಿಕೃಷ್ಣ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮ ಆಯೋಜಿಸಿದೆ.ಇಡೀ ಚಿತ್ರರಂಗವನ್ನು ಒಂದೆಡೆ ಸೇರಿಸುವ ಉದ್ದೇಶ ನಿರ್ಮಾಪಕ ಸುರೇಶ್ ಅವರದು. ಹರಿಕೃಷ್ಣರ ಹಾಡುಗಳ ಜೊತೆಗೆ ಹಾಸ್ಯ, ನೃತ್ಯ, ಫ್ಯಾಷನ್ ಶೋಗಳನ್ನೂ ಅವರು ಆಯೋಜಿಸಿದ್ದಾರೆ. ಮಕ್ಕಳ ಬಾಯಿಯಲ್ಲಿ ಹಾಡುಗಳು ನಲಿದಾಡುವಂತಾದರೆ ಅರ್ಧ ಗೆದ್ದಂತೆ ಎಂಬ ಗುರಿ ಹೊಂದಿದ್ದ ನಿರ್ದೇಶಕ ಮಂಜು ಸ್ವರಾಜ್ ಅದನ್ನು ಸಾಧಿಸಿದ್ದೇವೆ ಎಂಬ ಸಂಭ್ರಮದ ಮುಖ ಹೊತ್ತಿದ್ದರು.ಔಪಚಾರಿಕವಾಗಿ ಸೀಡಿ ಬಿಡುಗಡೆಯ ನೆಪದಲ್ಲಿ ಸೇರಿತ್ತು ಚಿತ್ರಬಳಗ. ದೀರ್ಘಕಾಲದಿಂದ ಎದುರು ನೋಡುತ್ತಿರುವ ದೊಡ್ಡ ಗೆಲುವಿನ ತುಡಿತದಲ್ಲಿರುವ ನಟ ಗಣೇಶ್‌ಗೆ ಹಾಡುಗಳು ಜನಪ್ರಿಯಗೊಂಡಿವೆ ಎಂಬ ಸುದ್ದಿ ನಿರೀಕ್ಷೆಗಳನ್ನು ಹುಟ್ಟಿಸಿದೆ. ‘ಚೆಲುವಿನ ಚಿತ್ತಾರ’ದ ಬಳಿಕ ತಮ್ಮ ಮತ್ತು ಅಮೂಲ್ಯ ಜೋಡಿ ಒಂದಾಗಿರುವುದು ಸಹಜವಾಗಿಯೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ ಎಂಬುದು ಅವರ ಅನುಭವಕ್ಕೆ ಬಂದಿದೆ. ಹಾಡುಗಳ ಗೆಲುವು ಒಂದು ವರ್ಷದ ಪರಿಶ್ರಮಕ್ಕೆ ಸಿಕ್ಕಿರುವ ಕಾಲುಭಾಗದ ಜಯ ಎಂದರು ನಟಿ ಅಮೂಲ್ಯ.ಚಿತ್ರದಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ಪರೂಲ್ ಯಾದವ್ ಹೆಜ್ಜೆಹಾಕಿರುವ ಐಟಂ ಸಾಂಗ್‌ಗೆ ಸಾಲುಗಳನ್ನು ಗೀಚುವ ಮೂಲಕ ಸಿನಿ ಸಾಹಿತಿ ಪಟ್ಟಕ್ಕೆ ಏರಿರುವ ಪ್ರೊ. ಕೃಷ್ಣೇಗೌಡ ಅವರಿಗೆ ಸಿನಿಮಾ ಸಾಹಿತ್ಯ ತಮ್ಮ ಹೊಸ ಪ್ರಯೋಗಗಳಲ್ಲಿ ಒಂದು ಎನಿಸಿದೆ.‘ಪೂಜಿಸಲೆಂದೆ ಹೂಗಳ ತಂದೆ’ ಹಾಡು ಬಂದಾಗ, ಇದೇನು ಹಾಡು? ಹಿಂದಿನ ಕಾಲದಲ್ಲಿ ‘ತ್ರಿಭುವನ ಜನನಿ ಜಗನ್ಮೋಹಿನಿ’ ಎಂಬಂಥ ಹಾಡು ಬರುತ್ತಿತ್ತು ಎಂದು ಹೇಳುತ್ತಿದ್ದರು. ಈಗ ‘ಪೂಜಿಸಲೆಂದೆ ಹೂಗಳ ತಂದೆ’ಯಂಥ ಹಾಡುಗಳು ಹಿಂದೆ ಬರುತ್ತಿದ್ದವು, ಈಗಿನವು ಅದೆಂತಾ ಹಾಡು ಎಂದು ಮೂಗು ಮುರಿಯುತ್ತಿದ್ದಾರೆ. ಕಾಲದ ಓಟವನ್ನು ನಮಗೆ ಸರಿಯಾಗಿ ಗ್ರಹಿಸಲು ಸಾಧ್ಯವಾಗುತ್ತಿಲ್ಲವಷ್ಟೆ ಎಂದು ಹೊಸಹಾಡುಗಳ ಬಗೆಗಿನ ತಿರಸ್ಕಾರದ ಮನೋಭಾವವನ್ನು ಅವರು ವಿಶ್ಲೇಷಿಸಿದರು.ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಸಂಕಲನಕಾರ ಬಸವರಾಜ ಅರಸು, ಚಿತ್ರಸಾಹಿತಿ ನಾಗೇಂದ್ರಪ್ರಸಾದ್, ಛಾಯಾಗ್ರಾಹಕ ಸುರೇಶ್‌ಬಾಬು, ಝೀ ವಾಹಿನಿಯ ಗೌತಮ್ ಮಾಚಯ್ಯ ಮತ್ತು ಬಾಲು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)