ಮಂಗಳವಾರ, ಮೇ 24, 2022
21 °C

ಮತ್ತೆ ಚಿಗುರಿತು ಪ್ರೀತಿ!

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

`ಉಹುಂ, ನನ್ನಿಂದ ಇನ್ನು ಸಾಧ್ಯವಿಲ್ಲ. ನನ್ನ ಸಿನಿಮಾವನ್ನು ಚಿತ್ರಮಂದಿರಗಳಿಂದ ವಾಪಸ್ಸು ಪಡೆಯುತ್ತಿದ್ದೇನೆ~ ಎಂದು ಸುಮಾರು ಮೂರು ತಿಂಗಳ ಹಿಂದೆ ಹೇಳುತ್ತಾ ಹನಿಗಣ್ಣಾಗಿದ್ದ ಎಚ್.ಪಿ.ರವೀಂದ್ರ ಈಗ ಮತ್ತೆ ಬಂದಿದ್ದಾರೆ. ಸಿನಿಮಾ ಹಳೆಯದೇ, ಕನಸು ಮಾತ್ರ ಹೊಸತು. ಈಗಲೂ ಕಣ್ಣುಗಳಲ್ಲಿ ತೇವವಿದೆ. ದುಃಖದಿಂದಲ್ಲ, ಸಹೃದಯರು ತುಂಬಿದ ಸಮಾಧಾನದಿಂದ.



ವಿಷಯ ಗೊಂದಲ ಅನ್ನಿಸುತ್ತಿರಬೇಕು. ಅದನ್ನು ಸರಳವಾಗಿ ಹೇಳುವುದಾದರೆ-

ರವೀಂದ್ರ, ಕಳೆದ ಜೂನ್‌ನಲ್ಲಿ ತೆರೆಕಂಡಿದ್ದ `ಐಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ~ ಚಿತ್ರದ ನಿರ್ದೇಶಕರು. ನಿರ್ಮಾಪಕರು ಕೂಡ ಅವರೇ. ಸುಮಾರು ಮೂರೂ ಕಾಲು ಕೋಟಿ ರೂಪಾಯಿ ವೆಚ್ಚದಲ್ಲಿ ರೂಪುಗೊಂಡಿದ್ದ ಈ ಸಿನಿಮಾದ ಬಗ್ಗೆ ಪತ್ರಿಕೆಗಳು ಮೆಚ್ಚಿ ಬರೆದವು. ಸೊಗಸಾದ ಪ್ರಣಯ ಕಥೆಯೊಂದನ್ನು ಅಷ್ಟೇ ನವಿರಾಗಿ ತೆರೆಗೆ ತಂದ ರವೀಂದ್ರರನ್ನು ಪ್ರತಿಭಾವಂತ ಎಂದು ಕೊಂಡಾಡಿದವು. ಇದಕ್ಕೆ ತಕ್ಕಹಾಗೆ, ಸಿನಿಮಾ ಬಿಡುಗಡೆಗೆ ಮುನ್ನ ಸಿನಿಮಾದ ಸ್ಯಾಟಲೈಟ್ ಹಕ್ಕುಗಳಿಗಾಗಿ 1.18 ಕೋಟಿ ರೂಪಾಯಿ ಕೊಡಲು ವಾಹಿನಿಯೊಂದು ಮುಂದಾಗಿತ್ತಂತೆ. ಆದರೆ, ತಮ್ಮ ಸಿನಿಮಾ ಮೇಲಿನ ವಿಶ್ವಾಸದಿಂದ ರವೀಂದ್ರ ಒಪ್ಪಿಕೊಂಡಿರಲಿಲ್ಲ. (ಈಗ ಆ ಬೆಲೆ ಅರ್ಧಕ್ಕಿಳಿದಿದೆ. ಈಗಲೂ ರವೀಂದ್ರ ಹಕ್ಕುಗಳನ್ನು ಬಿಟ್ಟುಕೊಟ್ಟಿಲ್ಲ).



ಅತೀವ ಆತ್ಮವಿಶ್ವಾಸದಿಂದ ರವೀಂದ್ರ ತಮ್ಮ ಚಿತ್ರ ತೆರೆಕಾಣಿಸಿದರು. ಆದರೆ ಆದುದೇ ಬೇರೆ. ಪ್ರೇಕ್ಷಕರು ಥಿಯೇಟರ್‌ಗಳತ್ತ ಮುಖ ಹಾಕಲಿಲ್ಲ. ಈ ಪ್ರದರ್ಶನಕ್ಕಲ್ಲದಿದ್ದರೆ ಮುಂದಿನ ಪ್ರದರ್ಶನಕ್ಕಾದರೂ ಸಹೃದಯರು ಬರಬಹುದು ಎಂದು ರವೀಂದ್ರ ನಿರೀಕ್ಷಿಸಿದ್ದು ನಿಜವಾಗಲಿಲ್ಲ. ಮೂರನೇ ದಿನದ ವೇಳೆಗೆ ಅವರ ಸಹನೆ ಸಂಪೂರ್ಣವಾಗಿ ನಶಿಸಿಹೋಯಿತು. ಸುದ್ದಿಗೋಷ್ಠಿ ಕರೆದ ಅವರು ಹೇಳಿದ್ದು- `ಐಯಾಮ್ ಸಾರಿ. ನನ್ನ ಸಿನಿಮಾವನ್ನು ಚಿತ್ರಮಂದಿರಗಳಿಂದ ವಾಪಸ್ ಪಡೆಯುತ್ತಿದ್ದೇನೆ. ನಾನು ಸೋತಿದ್ದೇನೆ~.



ಸಿನಿಮಾ ತೆರೆಕಾಣುವುದು ಎಷ್ಟು ಸಹಜವೋ, ಚಿತ್ರವೊಂದನ್ನು ಪ್ರೇಕ್ಷಕರು ತಿರಸ್ಕರಿಸುವುದು ಕೂಡ ಗಾಂಧಿನಗರದ ಪಾಲಿಗೆ ಅಷ್ಟೇ ಸಹಜ. ಆದರೆ, ಚಿತ್ರಮಂದಿರಗಳಿಂದ ಸಿನಿಮಾಗಳು ಸಹಜವಾಗಿ ನಿರ್ಗಮಿಸುವುದನ್ನಷ್ಟೇ ಕಂಡಿದ್ದವರಿಗೆ, ಚಿತ್ರಕರ್ಮಿಯೊಬ್ಬ ತನ್ನ ಸಿನಿಮಾವನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದು ವಿಚಿತ್ರವಾಗಿ ಕಂಡಿತ್ತು. ಕೆಲವರು, `ಇದೆಲ್ಲಾ ಗಿಮಿಕ್~ ಎಂದರು. `ಪತ್ರಕರ್ತರಿಗೆ ತೋರಿಸಲಿಕ್ಕಷ್ಟೇ ಈತ ಸಿನಿಮಾ ಮಾಡಿದನಾ?~ ಎಂದವರೂ ಇದ್ದರು. ಎಲ್ಲ ಟೀಕೆ ಟಿಪ್ಪಣಿಗಳನ್ನು ಮೌನದಿಂದಲೇ ಕೇಳಿಸಿಕೊಂಡಿದ್ದ ರವೀಂದ್ರ ತೆರೆಮರೆಗೆ ಸರಿದಿದ್ದರು.



ಅಂದಹಾಗೆ, ರವೀಂದ್ರ ತಮ್ಮ ಚಿತ್ರವನ್ನು ಮೂರೇ ದಿನಕ್ಕೆ ವಾಪಸ್ ಪಡೆಯುವ ಮೂಲಕ ತಪ್ಪು ಮಾಡಿದರಾ? `ಇಲ್ಲ. ನನಗೆ ಬೇರೆ ದಾರಿಯಿರಲಿಲ್ಲ. ಬಂಡವಾಳದಲ್ಲಿ ಒಂದು ರೂಪಾಯಿ ಕೂಡ ವಾಪಸ್ ಬರಲಿಲ್ಲ. ಪ್ರೇಕ್ಷಕರ ನಿರುತ್ಸಾಹ ನನ್ನನ್ನು ಘಾಸಿಗೊಳಿಸಿತು. ಇನ್ನೊಂದೆಡೆ ಚಿತ್ರಮಂದಿರಗಳ ಬಾಡಿಗೆ ಕಟ್ಟುವ ಚೈತನ್ಯ ಕಳೆದುಕೊಂಡಿದ್ದೆ~ ಎನ್ನುತ್ತಾರೆ.

ಮತ್ತೆ ಬರುವ ಪ್ರೀತಿಯಂತೆ ರವೀಂದ್ರ ಅವರೀಗ ಮತ್ತೆ ಬಂದಿದ್ದಾರೆ. ಅವರ ಬೆನ್ನಿಗೆ ಅಂಬರೀಷ್ ನಿಂತಿದ್ದಾರೆ.



ರವೀಂದ್ರ ಮತ್ತೆ ಬರಲು ಕಾರಣ ಪ್ರೇಕ್ಷಕರು! ಪತ್ರಿಕಾ ವರದಿಗಳಿಂದ ಉತ್ತೇಜಿತರಾದ ಕೆಲವು ಪ್ರೇಕ್ಷಕರು ಸಿನಿಮಾ ನೋಡಿ ಇಷ್ಟಪಟ್ಟರಂತೆ. ಈ ಸಹೃದಯರ ಒತ್ತಾಯದ ಮೇರೆಗೆ ಅಂಬರೀಷ್ ಕೂಡ ಚಿತ್ರ ನೋಡಿದ್ದಾರೆ. ಸಾಮಾನ್ಯವಾಗಿ ತಮ್ಮ ನಟನೆಯ ಚಿತ್ರಗಳನ್ನೇ ಅಂಬರೀಷ್ ಪೂರ್ತಿ ನೋಡುವುದಿಲ್ಲ. ಈ ಸಿನಿಮಾ ನೋಡುವ ಮುನ್ನ ಕೂಡ ಅವರು ಅಷ್ಟೇನೂ ಉತ್ಸಾಹ ವ್ಯಕ್ತಪಡಿಸಿರಲಿಲ್ಲವಂತೆ. ಸಿನಿಮಾ ನೋಡಲಿಕ್ಕೆ ಮನೆ ಬಿಡುವ ಮುನ್ನ- `ಅರ್ಧ ಸಿನಿಮಾ ನೋಡಿಕೊಂಡು ವಾಪಸ್ ಬರ್ತೇನೆ. ಅಡುಗೆ ರೆಡಿ ಮಾಡಿರು~ ಎಂದು ಸುಮಲತಾ ಅವರಿಗೆ ಹೇಳಿದ್ದರಂತೆ. ಆದರೆ, ಸಿನಿಮಾ ನೋಡಲಿಕ್ಕೆ ಕೂತವರು ಕುರ್ಚಿಯಿಂದ ಎದ್ದಿಲ್ಲ. `ಒಳ್ಳೆಯ ಸಿನಿಮಾ ಮಾಡಿರುವೆ. ನಿನ್ನ ಸಿನಿಮಾ ಬೆಂಬಲಕ್ಕೆ ನಾನಿರುವೆ~ ಎಂದು ಬೆನ್ನುತಟ್ಟಿದ್ದಾರೆ.



 ಒಳ್ಳೆಯ ಸಿನಿಮಾವೊಂದಕ್ಕೆ ಅಕಾಲಿಕ ಸಾವು ಬರಬಾರದು ಎನ್ನುವ ಉದ್ದೇಶದಿಂದ ಸಹೃದಯರು ಒಂದಿಷ್ಟು ಹಣ ಒಟ್ಟುಗೂಡಿಸಿಕೊಂಡು `ಮತ್ತೆ ಬನ್ನಿ ಪ್ರೀತ್ಸೋಣ~ ಚಿತ್ರವನ್ನು ಮತ್ತೆ ತೆರೆಕಾಣಿಸುತ್ತಿದ್ದಾರಂತೆ. ಈ ನಿಟ್ಟಿನಲ್ಲಿ ರವೀಂದ್ರ ಮೊದಲು ನೆನಪಿಸಿಕೊಳ್ಳುವುದು ಬಿಜಾಪುರದ ನಾಡಗೌಡ ಬಿರಾದಾರ್ ಹಾಗೂ ಬೆಂಗಳೂರಿನ ಲೀಲಾ ಶಂಕರ್ ಅವರನ್ನು. ಹಾಂ, ಮರು ತೆರೆ ಸಂದರ್ಭದಲ್ಲಿ ತಮ್ಮ ಚಿತ್ರದ ಹೆಸರಿನಲ್ಲಿ `ಐಯಾಮ್ ಸಾರಿ~ಯನ್ನು ರವೀಂದ್ರ ಕತ್ತರಿಸಿದ್ದಾರೆ. ಈಗದು, `ಮತ್ತೆ ಬನ್ನಿ ಪ್ರೀತ್ಸೋಣ~ ಅಷ್ಟೇ. ಪ್ರೇಕ್ಷಕರು ಬರುತ್ತಾರೆ ಎನ್ನುವುದು ರವೀಂದ್ರರ ವಿಶ್ವಾಸ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.