ಮತ್ತೆ ಜೆಡಿಎಸ್‌ಗೆ ಅವಕಾಶ?

7
ಜಿಪಂ: ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಇಂದು

ಮತ್ತೆ ಜೆಡಿಎಸ್‌ಗೆ ಅವಕಾಶ?

Published:
Updated:

ಕೋಲಾರ: ಇಲ್ಲಿನ ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಯ ಉಳಿದ 9 ತಿಂಗಳಿಗೆ ಹೊಸ ಅಧ್ಯಕ್ಷರ ಆಯ್ಕೆ  ಪ್ರಕ್ರಿಯೆ ಶುಕ್ರವಾರ ನಡೆಯಲಿದ್ದು, ಜೆಡಿಎಸ್ ಮತ್ತೆ ಎರಡೂ ಸ್ಥಾನಗಳನ್ನು ಗಳಿಸುವ ಸಾಧ್ಯತೆಯೇ ಹೆಚ್ಚಾಗಿದೆ.13 ಸದಸ್ಯರ ಬಲವನ್ನು ಹೊಂದಿದ್ದು, ಮತ್ತೆ ಅಧ್ಯಕ್ಷ ಸ್ಥಾನವನ್ನು ಪಡೆಯುವ ಸಲುವಾಗಿ ಜೆಡಿಎಸ್ ತನ್ನ ಪ್ರಯತ್ನವನ್ನು ಬಲಗೊಳಿಸಿ ಎಲ್ಲ ಸದಸ್ಯರನ್ನು ಕೇರಳ ಪ್ರವಾಸಕ್ಕೆ ಕಳಿಸಿದ್ದು, ಅವರೆಲ್ಲ ಶುಕ್ರವಾರವೇ ಕೋಲಾರಕ್ಕೆ ಬರಲಿದ್ದಾರೆ.ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಗೌನಿಪಲ್ಲಿ ಕ್ಷೇತ್ರದ ಆರ್.ನಾರಾಯಣಸ್ವಾಮಿ  ಮತ್ತು ವೇಮಗಲ್ ಕ್ಷೇತ್ರದ ಆಶಾ ಅವರ ನಡುವೆ ಒಪ್ಪಂದ ಏರ್ಪಟ್ಟಿದ್ದು, ಉಳಿದ ಅವಧಿಯನ್ನು ಸಮನಾಗಿ ಇಬ್ಬರೂ ಹಂಚಿಕೊಳ್ಳಲಿದ್ದಾರೆ. ಮೊದಲಿಗೆ ನಾರಾಯಣಸ್ವಾಮಿ ಅಧ್ಯಕ್ಷರಾಗಲಿದ್ದಾರೆ. ಕೆಲವು ಬಿಜೆಪಿ ಸದಸ್ಯರ ಬೆಂಬಲ ಪಡೆದು ಮತ್ತೆ ಪಕ್ಷವೇ ಅಧಿಕಾರ ಪಡೆಯುವುದು ಖಚಿತ ಎನ್ನುತ್ತವೆ ಮೂಲಗಳು.

ಅದಕ್ಕೆ ಇಂಬು ಕೊಡುವ ರೀತಿಯಲ್ಲಿ, ಬಿಜೆಪಿಯ ಐವರು ಸದಸ್ಯರು ಪಕ್ಷದ ಪ್ರಮುಖರ ಸಂಪರ್ಕಕ್ಕೆ ಸಿಗದೆ ದೂರ ಉಳಿದಿದ್ದಾರೆ. ಮಾಲೂರು ಸದಸ್ಯರಾದ ಎ.ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ಕೆ.ಯಶೋಧ ಹಾಗೂ ಬಂಗಾರಪೇಟೆ ತಾಲ್ಲೂಕಿನ ಮುತ್ಯಾಲಮ್ಮ, ನಾರಾಯಣಮ್ಮ ಜೆಡಿಎಸ್‌ಗೆ ಬೆಂಬಲ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಐವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.ವಿಫ್ ಜಾರಿ?:

ಪಕ್ಷದ ಕಾಣೆಯಾಗಿರುವ ಸದಸ್ಯರು ಜೆಡಿಎಸ್‌ಗೆ ಬೆಂಬಲ ನೀಡುತ್ತಾರೆ ಎಂಬ ಸೂಚನೆಯ ಹಿನ್ನೆಲೆಯಲ್ಲಿ, ಪಕ್ಷದ ವತಿಯಿಂದ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ವಿಫ್ ಜಾರಿ ಮಾಡಲು ಚಿಂತಿಸಲಾಗಿದೆ. ಆಗ ಪಕ್ಷದ ಎಲ್ಲ ಸದಸ್ಯರೂ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ಬೆಂಬಲ ಸೂಚಿಸಬೇಕಾಗುತ್ತದೆ ಎಂದು ಅವರು ಗುರುವಾರ ರಾತ್ರಿ ತಿಳಿಸಿದರು. ಪಕ್ಷದ ಇತರೆ ಸದಸ್ಯರಾದ ಸಿಮೌಲ್,ಮಂಜುಳಾ, ಎಂ.ಎಸ್.ಆನಂದ್ ತಮ್ಮಂದಿಗೆ ಇದ್ದಾರೆ ಎಂದು ಸ್ಪಷ್ಟಪಡಿಸಿದರು.ಕಾಯುವಾಟ:

ಅಧಿಕಾರ ಪಡೆಯಲು ಅಗತ್ಯವಿರುವ ಸದಸ್ಯರ ಬಲವಿಲ್ಲದ ಕಾಂಗ್ರೆಸ್ ಕಾದು ನೋಡಲಿದೆ. ಅಧಿಕಾರಕ್ಕಾಗಿ ಬಿಜೆಪಿ ಜೊತೆ ಸೇರುವ ಪ್ರಮೇಯವೇ ಇಲ್ಲ ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್.ಕಾಂಗ್ರೆಸ್ ಚಿಹ್ನೆಯಿಂದ ಸ್ಪರ್ಧಿಸಿ ಗೆದ್ದಿರುವ ಐವರು ಮತ್ತು ಮುಳಬಾಗಲು ಶಾಸಕ ಜಿ.ಮಂಜುನಾಥ್ ಅವರ ಬೆಂಬಲ ಪಡೆದು ಗೆದ್ದಿರುವ ಪಕ್ಷೇತರ ಸದಸ್ಯೆ ಗೀತಮ್ಮ ಬೆಂಬಲ ನೀಡಿದರೆ ಪಕ್ಷದ ಸದಸ್ಯರ ಬಲ 6ಕ್ಕೆ ಏರುತ್ತದೆ. ಅದರಿಂದಷ್ಟೇ ಅಧಿಕಾರ ಪಡೆಯಲು ಸಾಧ್ಯವಿಲ್ಲ. ಆದರೂ ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry