ಮತ್ತೆ ತೆರೆಯಿತು ಶಾಲಾ ಬಾಗಿಲು

7

ಮತ್ತೆ ತೆರೆಯಿತು ಶಾಲಾ ಬಾಗಿಲು

Published:
Updated:

ಬೆಂಗಳೂರು: ಪೋಷಕರ ಸಂಘಟಿತ ಹೋರಾಟದ ಹಿನ್ನೆಲೆ­ಯಲ್ಲಿ ಆರನೇ ತರಗತಿ ವಿದ್ಯಾರ್ಥಿ ವೈ.ಎನ್‌.ಶ್ರವಣ ಗೌಡ ಎಂಬಾತನಿಗೆ ಮಧ್ಯವಾರ್ಷಿಕ ಪರೀಕ್ಷೆ ಬರೆಯಲು ಬಸವೇಶ್ವರನಗರದ ವಿ.­ಎಲ್‌.­ಎಸ್‌.ಇಂಟರ್‌ನ್ಯಾಷನಲ್‌ ಶಾಲೆ ಕೊನೆಗೂ ಅನುವು ಮಾಡಿ­ಕೊಟ್ಟಿದೆ.ಹೆಚ್ಚುವರಿ ಶುಲ್ಕ ಪಾವತಿಸಿಲ್ಲ ಎಂಬ ನೆಪ ಒಡ್ಡಿ ಶಾಲೆಯಿಂದ ಶ್ರವಣ್‌ ಗೌಡನನ್ನು ಆರನೇ ತರಗತಿಯಿಂದ ಹೊರ ಹಾಕಲಾಗಿತ್ತು. ಈ ಸಂಬಂಧ ಪೋಷಕ ವೈ.ಆರ್‌.­ನಾಗರಾಜ್‌ ಅವರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿ­ದ್ದರು. ‘ಕಳೆದ ವರ್ಷ ವಾರ್ಷಿಕ ಶುಲ್ಕ ರೂ.19,000 ಇತ್ತು. ಈ ಸಲ ಏಕಾಏಕಿ ರೂ.32,500ಕ್ಕೆ ಏರಿಸಲಾಗಿತ್ತು. ಹೆಚ್ಚು­ವರಿ ಪ್ರವೇಶ ನೀಡಲು ನಿರಾಕರಿಸಿದ್ದ ಕಾರಣ ತರಗತಿಯಿಂದ ಹೊರಕ್ಕೆ ಹಾಕ­ಲಾಗಿತ್ತು’ ಎಂದು ಅವರು ದೂರಿ­ನಲ್ಲಿ ತಿಳಿಸಿದ್ದರು.ನಗರದಲ್ಲಿ ಇತ್ತೀಚೆಗೆ ಆಯೋಗ ಏರ್ಪಡಿಸಿದ್ದ ಸಾರ್ವಜನಿಕ ಆಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ತೀರ್ಪು­ಗಾರರು ವಿದ್ಯಾರ್ಥಿಗೆ ಪ್ರವೇಶ ನೀಡು­ವಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿದ್ದರು. ಇದಾದ ಬಳಿಕವೂ ಶಾಲಾ ಆಡಳಿತ ಮಂಡಳಿ ತರಗತಿಗೆ ಸೇರಿಸಿ­ಕೊಳ್ಳಲು ಒಪ್ಪಿರಲಿಲ್ಲ. ಪೋಷಕರು ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಅಳಲು ತೋಡಿ­ಕೊಂಡಿದ್ದರು. ಈ ನಡುವೆ, ವಿದ್ಯಾರ್ಥಿಗಳ ಪೋಷಕರು ಸಂಘಟಿತರಾಗಿ ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿದ್ದರು. ‘ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವ­ಕಾಶ ನೀಡದೆ ಇದ್ದಲ್ಲಿ ಶಾಲಾ ಮಾನ್ಯತೆ ರದ್ದುಪಡಿಸಲು ಕ್ರಮ ಕೈಗೊಳ್ಳ­ಲಾಗುವುದು’ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ­ನಿರ್ದೇಶಕರು (ಬೆಂಗಳೂರು ಉತ್ತರ) ಇದೇ 18ರಂದು ನೋಟಿಸ್ ನೀಡಿದ್ದರು.ಶುಕ್ರವಾರ ಮಧ್ಯವಾರ್ಷಿಕ ಪರೀಕ್ಷೆ ಆರಂಭವಾಗಿತ್ತು. ಶ್ರವಣ್‌ಗೆ ಪರೀಕ್ಷೆಗೆ ಹಾಜ­ರಾಗಲು ಅವಕಾಶ ನೀಡಿರ­ಲಿಲ್ಲ. ಪುನಃ ಕೆಲವು ಪೋಷ­ಕರು ಪ್ರತಿಭಟಿಸಿ­ದ್ದರು. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಪೋಷಕರೊಂದಿಗೆ ಸಮಾಲೋಚಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ.‘ಶಾಲಾ ಆಡಳಿತ ಮಂಡಳಿಯವರು ಶನಿವಾರ ಪರೀಕ್ಷೆ ನಡೆಸುವುದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಸಮಸ್ಯೆ ಪರಿಹಾರ ಆಗಿದೆ’ ಎಂದು ಪೋಷಕ ನಾಗರಾಜ್‌  ಅವರು ತಿಳಿಸಿದರು.‘ಆಡಳಿತ ಮಂಡಳಿ ಈ ಸಲ ಏಕಾಏಕಿ ಶೇ 40 ಶುಲ್ಕ ಹೆಚ್ಚಿಸಿದೆ. ಈ ವರ್ಷ ಶುಲ್ಕವನ್ನು ರೂ.32,500 ಕ್ಕೆ ಹೆಚ್ಚಿಸ­ಲಾಗಿದೆ. ಪುಸ್ತಕಕ್ಕೆ ರೂ.4,500 ಹಾಗೂ ಸಮವಸ್ತ್ರಕ್ಕೆ ರೂ.2,000 ಪ್ರತ್ಯೇಕ­ವಾಗಿ ಪಾವತಿಸಬೇಕಿದೆ. ಅಭಿವೃದ್ಧಿ ಶುಲ್ಕ ರೂಪ­ದಲ್ಲಿ ರೂ.10,000 ವಸೂಲಿ ಮಾಡ­ಲಾಗುತ್ತಿದೆ. ಕ್ರೀಡಾಕೂಟ ಶುಲ್ಕ­ವಾಗಿ ರೂ.800 ಪಡೆಯಲಾಗಿದೆ. ಆದರೆ, ಕ್ರೀಡಾಕೂಟವನ್ನು ಸರ್ಕಾರಿ ಮೈದಾನ­ದಲ್ಲಿ ನಡೆಸಲಾಗಿದೆ’ ಎಂದು ಪೋಷಕ­ರಾದ ಸುಮಾ ದೂರಿದರು.‘ಪೋ­ಷಕರು ಹೆಚ್ಚುವರಿ ಶುಲ್ಕ ಪಾವತಿಸಲು ನಿರಾಕರಿ­ಸಿ­ದ್ದರು. ಇದಕ್ಕೆ ಪ್ರತಿಯಾಗಿ ಆಡಳಿತ ಮಂಡಳಿ ಕೆಲವು ವಿದ್ಯಾರ್ಥಿ­ಗಳನ್ನು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಡಲಿಲ್ಲ. ಶಾಲಾ ಪ್ರವಾಸಕ್ಕೂ ಕರೆದು­ಕೊಂಡಿಲ್ಲ. ವಿದ್ಯಾರ್ಥಿಗಳ ಸುಲಿಗೆ ಮಾಡ­ಲಾಗುತ್ತಿದೆ. ಬೆದರಿಕೆ ತಂತ್ರಕ್ಕೆ ಹೆದರಿ ಕೆಲವು ಪೋಷಕರು ಹೆಚ್ಚುವರಿ ಶುಲ್ಕ ಪಾವತಿಸಿದ್ದಾರೆ’ ಎಂದು ಅವರು ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry