ಮಂಗಳವಾರ, ಜೂನ್ 15, 2021
27 °C

ಮತ್ತೆ ನಾಯಿ ದಾಳಿ: 13 ಮಕ್ಕಳಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದಲ್ಲಿ ನಾಯಿ ಕಚ್ಚಿದ್ದ ಬಾಲಕಿಯೊಬ್ಬಳು ಮೃತಪಟ್ಟ ಪ್ರಕರಣದ ಬೆನ್ನಲ್ಲೇ  ಬೀದಿ ನಾಯಿಗಳು ಮತ್ತೆ ದಾಳಿ ನಡೆಸಿವೆ. ನಗರದ ಮೋಮಿನ್‌ಪುರ ಬಡಾವಣೆಯಲ್ಲಿ ಶುಕ್ರವಾರ ಬೆಳಿಗ್ಗೆ ನಾಯಿಗಳು 13 ಮಕ್ಕಳನ್ನು ಕಚ್ಚಿ, ಗಾಯಗೊಳಿಸಿವೆ. ಗಾಯಗೊಂಡ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಕಳೆದ ತಿಂಗಳಲ್ಲಿ 30ಕ್ಕೂ ಹೆಚ್ಚು ಮಕ್ಕಳು ನಾಯಿ ದಾಳಿಗೆ ಸಿಲುಕಿ ಗಾಯಗೊಂಡಿದ್ದಾರೆ.ಈ ಪೈಕಿ ಮೊಮೋಮಿನ್‌ಪುರ ಬಡಾವಣೆಯ ಸುಮೈಯಾ ಎಂಬ ಬಾಲಕಿಗೆ ನಾಯಿ ಕಚ್ಚಿದ್ದರಿಂದ, ಆಕೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವಿಫಲವಾಗಿ ಬುಧವಾರ ಆಕೆ ಸಾವನ್ನಪ್ಪಿದ್ದಳು.ಈ ಬಗ್ಗೆ ನಾಗರಿಕರು ಗುರುವಾರ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ, ಮಹಾನಗರ ಪಾಲಿಕೆ ಆಯುಕ್ತ ಡಾ. ಸಿ.ನಾಗಯ್ಯ ಅವರು ಹೇಳಿಕೆ ನೀಡಿ “ನಾಯಿ ಹಿಡಿಯುವ ಕೆಲಸದಲ್ಲಿ ಪರಿಣಿತಿ ಪಡೆದವರ ತಂಡವೊಂದನ್ನು ಕೇರಳದಿಂದ ಕರೆಸಲಾಗುತ್ತಿದೆ” ಎಂದು ಭರವಸೆ ನೀಡಿದ್ದರು.ನಾಯಿ ಕಚ್ಚಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿದರು.“ಬೀದಿನಾಯಿ ಹಾವಳಿ ತಡೆಗೆ ಪಾಲಿಕೆ ಕ್ರಮ ಜರುಗಿಸುತ್ತಿಲ್ಲ. ಪಾಲಿಕೆ ನಿರ್ಲಕ್ಷ್ಯಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನಾಯಿ ದಾಳಿಗೆ ತುತ್ತಾದ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯೇ ಭರಿಸಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದೂ ಅವರು ಆಗ್ರಹಿಸಿದರು.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್, ವಕೀಲ ಮಜರ್ ಹುಸೇನ್, ಶಫಿ ಹುಂಡೇಕಾರ್, ಸೂರ್ಯಕಾಂತ ನಿಂಬಾಳ್ಕರ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.