ಮಂಗಳವಾರ, ಮಾರ್ಚ್ 9, 2021
23 °C

ಮತ್ತೆ ನಿರ್ದೇಶಕನಾಗುವ ಬಯಕೆ: ಜೋಸೈಮನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ನಿರ್ದೇಶಕನಾಗುವ ಬಯಕೆ: ಜೋಸೈಮನ್‌

ಬೆಂಗಳೂರು: ‘ಕನ್ನಡ ಸಿನಿಮಾಗಳನ್ನು ಕೊಳ್ಳುವವರು ಇಲ್ಲ. ಸಿನಿಮಾಗಳನ್ನು ನೋಡುವ ಪ್ರೇಕ್ಷಕರು ಕಡಿಮೆಯಾಗು­ತ್ತಿದ್ದಾರೆ. ಹಾಗಾಗಿ ಸಿನಿಮಾ ನಿರ್ದೇಶನ­ದಿಂದ ದೂರ ಉಳಿದಿದ್ದೇನೆ’  ಎಂದು ನಿರ್ದೇಶಕ ಜೋಸೈಮನ್‌ ಹೇಳಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಬೆಳ್ಳಿಹೆಜ್ಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಲನಚಿತ್ರ ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಮಾಡಿ ನಷ್ಟ ಅನು­ಭವಿಸಿದೆ. ಸದ್ಯ ನಟನೆ, ನಿರ್ದೇಶನದ ಪಾಠ ಮಾಡುತ್ತ ಚಿತ್ರರಂಗದಲ್ಲಿ ಉಳಿದಿ­ದ್ದೇನೆ. ಉತ್ತಮ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ವಾಪಸ್ಸಾಗುತ್ತೇನೆ’ ಎಂದರು.‘ನಟನಾಗಬೇಕು ಎಂದು ಚಿತ್ರರಂಗಕ್ಕೆ ಬಂದೆ. ನನ್ನ ಬಣ್ಣ ಹಚ್ಚುವ ಕನಸಿಗೆ ನೀರೆರೆದವರು ನನ್ನ ಸಹೋದರ. ನಾಟಕಗಳಲ್ಲಿ ನಟನೆ ಮಾಡಿಕೊಂಡಿದ್ದ ನನ್ನನ್ನು 1967ರಲ್ಲಿ ಗುಣಸಿಂಗ್‌ ಬಳಿ ಕಳುಹಿಸಿದರು. ಅಲ್ಲಿ ಸಿಕ್ಕಿದ್ದು ಮೇಕಪ್‌ಗೆ ಸಹಾಯ ಮಾಡುವ ಕೆಲಸ. ಅಲ್ಲಿ ನಿರ್ದೇಶನ ನನ್ನನ್ನು ಆಕರ್ಷಿಸಿತು’ ಎಂದು ನೆನಪಿಸಿಕೊಂಡರು.‘ಒಂದು ಪ್ರೇಮದ ಕಥೆ ನನ್ನ ನಿರ್ದೇಶನದ ಮೊದಲ ಚಿತ್ರ. ಅದು ದಕ್ಷಿಣ ಭಾರತದ ಮೊದಲ ಕಪ್ಪು ಬಿಳುಪಿನ ಸಿನಿಮಾ ಸ್ಕೋಪ್‌ ಚಿತ್ರ ಕೂಡ ಹೌದು. ಚಿತ್ರ ಎರಡು ವಾರ ಓಡಿತು. ಪತ್ರಿಕೆಗಳಲ್ಲಿಯೂ ಉತ್ತಮ ವಿಮರ್ಶೆಗಳು ಬಂದವು. ಆದರೆ, ನಂತರ ಎರಡು ವರ್ಷ ನನಗೆ ಅವಕಾಶಗಳು’ ಸಿಗಲಿಲ್ಲ ಎಂದರು.‘ವಿಜಯ ವಿಕ್ರಮ, ಸಿಂಹ ಜೋಡಿ­ಸೇರಿದಂತೆ ಹಲವು ಚಲನಚಿತ್ರಗಳನ್ನು ವಿಷ್ಣುವರ್ಧನ್‌ಗಾಗಿ ನಿರ್ದೇಶಿಸಿದೆ. ನನ್ನ ಅವರ ನಡುವೆ ಮನಸ್ತಾಪವಾಗಿ ಒಂಬತ್ತು ವರ್ಷಗಳ ನಂತರ ನಿರ್ದೇ­ಶಿಸಿದ ಸಾಹಸ ಸಿಂಹಚಿತ್ರ ವಿಷ್ಣು­ವರ್ಧನ್‌ ಅವರಿಗೆ ಸಾಹಸ ಸಿಂಹ ಬಿರುದು ತಂದುಕೊಟ್ಟಿತು’ ಎಂದು ಹೇಳಿದರು.‘ನನ್ನ ರಕ್ತ ತಿಲಕ ಸಿನಿಮಾದಲ್ಲಿ ಶಂಕರ್‌ನಾಗ್‌ ಅಭಿನಯಿಸಿದರು. ಅದಾದ ನಂತರ ಅವರಿಗೆ ಗಿರೀಶ್‌ ಕಾರ್ನಾಡ್ ಅವರ ಚಿತ್ರದಲ್ಲಿ ಅಭಿನಯಿಸಲು ಕರೆ ಬಂತು. ನನಗೆ ಖಾಲಿ ಹಾಳೆಯ ಮೇಲೆ ಸಹಿ ಮಾಡಿ ಕಾಲ್‌ಶೀಟ್‌ ನೀಡಿದ್ದರು. ಆದರೆ ಹೋದವರು ಮರಳಿ ಬರಲಿಲ್ಲ’ ಎಂದು ಭಾವುಕರಾದರು.‘ಎಲ್ಲರೂ ಹತ್ತಿದ ಏಣಿಯನ್ನು ಮರೆಯುತ್ತಾರೆ. ಆದರೆ, ನಾನು ಅವಕಾಶ ನೀಡಿದ ಮಂಜುಳಾ ಗುರುರಾಜ್‌ ಅವರು ಜನಪ್ರಿಯ ಗಾಯಕಿಯಾಗಿದ್ದಾರೆ. ಅವರು ಇಂದಿಗೂ ನನ್ನನ್ನು ನೆನೆಯುತ್ತಾರೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.