ಮಂಗಳವಾರ, ನವೆಂಬರ್ 19, 2019
22 °C

ಮತ್ತೆ ಪರಮಾಣು ಚಟುವಟಿಕೆ

Published:
Updated:

ಪ್ಯೊಂಗ್‌ಯಾಂಗ್ (ಐಎಎನ್‌ಎಸ್): ಕೆಲ ವಾರಗಳಿಂದ ಯುದ್ಧ ಭೀತಿ ಸೃಷ್ಟಿಸಿದ್ದ ಉತ್ತರ ಕೊರಿಯಾ ನ್ಯೊಂಗ್‌ಬ್ಯೊನ್ ಪರಮಾಣು ಘಟಕದಲ್ಲಿ ಪರಮಾಣು ಚಟುವಟಿಕೆಗಳನ್ನು ಮತ್ತೆ ಆರಂಭಿಸಲು ನಿರ್ಧರಿಸಿರುವುದಾಗಿ ಮಂಗಳವಾರ ಘೋಷಿಸಿದೆ.ಸೋಮವಾರ ನಡೆದ ಆಡಳಿತಾರೂಢ ಕಾರ್ಮಿಕರ ಪಕ್ಷದ ಕೇಂದ್ರೀಯ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ದೇಶದಲ್ಲಿ ತಲೆದೋರಿರುವ ತೀವ್ರ ವಿದ್ಯುತ್ ಕೊರತೆಯನ್ನು ನೀಗಿಸಲು ಮತ್ತು ಸೇನಾ ಶಕ್ತಿಯ ಬಲವರ್ಧನೆಯ ಉದ್ದೇಶಕ್ಕಾಗಿ ಪರಮಾಣು ಕಾರ್ಯಾಚರಣೆಯನ್ನು ಪುನಃ ಆರಂಭಿಸಲು ನಿರ್ಧರಿಸಲಾಗಿದೆ' ಎಂದು ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.ನೆರೆಯ ಸಾಂಪ್ರದಾಯಿಕ ಶತ್ರುರಾಷ್ಟ್ರ ದಕ್ಷಿಣ ಕೊರಿಯಾದೊಂದಿಗೆ ಯುದ್ಧಕ್ಕೆ ಸಜ್ಜಾಗಿರುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಹೊರಬಿದ್ದಿರುವ ಉತ್ತರ ಕೊರಿಯಾದ ಈ ನಿರ್ಧಾರ ಉಭಯ ರಾಷ್ಟ್ರಗಳ ನಡುವಿನ ಯುದ್ಧದ ಭೀತಿಯ ಸ್ಥಿತಿಯನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸಿದೆ. ಉತ್ತರ ಕೊರಿಯಾ ಒಂದು ವೇಳೆ ಅಪ್ರಚೋದಿತ ದಾಳಿಗೆ ಮುಂದಾದಲ್ಲಿ ಯಾವುದೇ ರಾಜಕೀಯ ನಿರ್ಧಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ದಿಟ್ಟ ಉತ್ತರ ನೀಡುವಂತೆ ದಕ್ಷಿಣ ಕೊರಿಯಾದ ಅಧ್ಯಕ್ಷ ಪಾರ್ಕ್ ಗ್ಯೂನ್‌ಹೆ ಸೇನೆಗೆ ಆದೇಶ ನೀಡಿದ್ದಾರೆ. 

ಪ್ರತಿಕ್ರಿಯಿಸಿ (+)