ಮತ್ತೆ ಪುಸ್ತಕ ಪರಿಷೆ

7

ಮತ್ತೆ ಪುಸ್ತಕ ಪರಿಷೆ

Published:
Updated:

ಕನ್ನಡ ಪುಸ್ತಕ ಪ್ರೀತಿಯನ್ನು ಬೆಳೆಸುವ ಬಗೆ ಹೇಗೆ? ಮನೆಯಲ್ಲಿರುವ ಪುಸ್ತಕಗಳ ಸೂಕ್ತ ನಿರ್ವಹಣೆ ಹೇಗೆ? ಇವೆರಡೂ ಪ್ರಶ್ನೆಗಳಿಗೆ ಉತ್ತರವಾಗಿ ಕಂಡಿದ್ದೇ `ಪುಸ್ತಕ ಪರಿಷೆ~ ಎನ್ನುತ್ತ ಸೃಷ್ಟಿ ವೆಂಚರ್ಸ್ ಸಂಘಟಕ ನಾಗರಾಜ ನಾವುಂದ ಮಾತಿಗಿಳಿದರು.ಐದು ವರ್ಷಗಳ ಹಿಂದೆ ಸಮಾನಮನಸ್ಕರೆಲ್ಲ ಸೇರಿ ಇಂಥದ್ದೊಂದು ಪುಸ್ತಕ ಪರಿಷೆಯ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿದ್ದರು.ಆತ್ಮಚರಿತ್ರೆ, ಆತ್ಮಕಥನ, ನಾಟಕ, ಕತೆ, ಕಾದಂಬರಿ, ವಿಮರ್ಶೆ ಮುಂತಾದ ಎಲ್ಲ ಪುಸ್ತಕ ಪ್ರಕಾರಗಳನ್ನು ಸಂಗ್ರಹಿಸಲಾಯಿತು. ಕೆಲವರು ತಮ್ಮ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು ದೇಣಿಗೆಯಾಗಿಯೂ ನೀಡಿದರು.ಮೊದಲ ಪ್ರದರ್ಶನದ ಸಂದರ್ಭದಲ್ಲಿ ಒಗ್ಗೂಡಿದ್ದು ಕೇವಲ ಒಂದು ಸಾವಿರ ಪುಸ್ತಕಗಳು.

ಆದರೆ ಪ್ರದರ್ಶನಕ್ಕೆ ಬಂದವರೆಲ್ಲ ಅಪ್ಪಟ ಪುಸ್ತಕ ಪ್ರೀತಿಯುಳ್ಳವರೇ ಆಗಿದ್ದರು. ಮುಂದಿನ ವರ್ಷದಲ್ಲಿ ಈ ಫಲಾನುಭವಿಗಳೇ ಸಂಪನ್ಮೂಲ ವ್ಯಕ್ತಿಗಳೂ ಆಗಿದ್ದರು. ಆಗ ಹಂಚಿದ ಪುಸ್ತಕಗಳನ್ನು ಓದಿದ ನಂತರ, ತಮ್ಮಲ್ಲಿದ್ದ, ತಾವು ಓದಿರುವ ಪುಸ್ತಕಗಳ ಸಂಗ್ರಹವನ್ನು ಪರಿಷೆಗೆ ತಂದೊಪ್ಪಿಸಿದರು. ತಮಗೆ ಬೇಕಿದ್ದ ಪುಸ್ತಕಗಳನ್ನು ಆಯ್ದುಕೊಂಡರು.ಹೀಗೆ ಈ ಪುಸ್ತಕ ತಂದು ನೀಡುವ, ಕೊಂಡೊಯ್ಯುವ ಚಕ್ರವೊಂದು ನಿರ್ಮಾಣವಾಯಿತು. ಈ ವರ್ಷ ಒಂದೆರಡಲ್ಲ, 7 ಲಕ್ಷ ಪುಸ್ತಕಗಳ ಸಂಗ್ರಹವಾಗಿದೆ.

ಮಕ್ಕಳ ಪುಸ್ತಕ, ಕಾಮಿಕ್ಸ್ ಸೇರಿದಂತೆ ಇನ್ನಿತರ ಪುಸ್ತಕಗಳೂ ಈ ಸಲ ಸಂಗ್ರಹದಲ್ಲಿವೆ. ಯಾವುದೇ ವಯೋಮಾನದ, ಯಾವುದೇ ಅಭಿರುಚಿಯ ಜನ ಬಂದರೂ ಅವರಿಗೆ ಬೇಕಿರುವ ಒಂದು ಪುಸ್ತಕವಂತೂ ಈ ಸಂಗ್ರಹದಲ್ಲಿ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆ ನಾಗರಾಜ ಅವರದ್ದು.ಓದುವ ಪ್ರೀತಿ ಕಡಿಮೆಯಾಗಿದೆ, ಪುಸ್ತಕ ಕೊಳ್ಳುವುದು ಕಡಿಮೆಯಾಗಿದೆ ಎಂಬುದೆಲ್ಲವೂ ಸುಳ್ಳು. ಅದಕ್ಕೆ ಈಚಿನ ಪುಸ್ತಕ ಮಾರಾಟ ಮೇಳಗಳಲ್ಲಿ ಆಗುವ ದಾಖಲೆ ಮಾರಾಟವೇ ಸಾಕ್ಷಿ. ಹಾಗೆಯೇ ಅಪರೂಪದ ಪುಸ್ತಕಗಳು ಇಂಥ ಮೇಳಗಳಲ್ಲಿ ಸಿಗುವುದಿಲ್ಲ. ಅವೆಲ್ಲವೂ ಈ ಪರಿಷೆಯಲ್ಲಿ ದೊರೆಯಲಿವೆ.`ಪುಸ್ತಕಗಳು ಕೆಲವೊಮ್ಮೆ ಮನೆಯಲ್ಲಿ ನಾಶವಾಗುವ ಸ್ಥಿತಿಯಲ್ಲಿರುತ್ತವೆ. ಅದರ ಬದಲು ವಿನಿಮಯವಾದರೆ ಒಳಿತಲ್ಲವೇ? ಒಬ್ಬರಿಂದ ಮತ್ತೊಬ್ಬರಿಗೆ ಸಾಗುತ್ತಲೇ ಇರುವುದು ಸಾಹಿತ್ಯದ ಪಯಣವಿದ್ದಂತೆ~ ಎನ್ನುತ್ತಾರೆ ಸೃಷ್ಟಿ ಸಂಸ್ಥೆಯ ವೇದೇಶ್ ಎಂ.ಗಂಗೂರ್.

ಯಾವುದೇ ಸಂದರ್ಭದಲ್ಲಿಯೂ ಪುಸ್ತಕಗಳ ಖರೀದಿಗೆ ಆಸ್ಪದವಿಲ್ಲ. ಮನೆಯಿಂದ ಬಂದ ಸದಸ್ಯರೆಲ್ಲರೂ ಒಂದೊಂದು ಪುಸ್ತಕವನ್ನು ಆಯ್ದುಕೊಳ್ಳಬಹುದು. ಬಂದವರಿಗೆಲ್ಲ ಅವಕಾಶ ಸಿಗಲಿ ಎಂಬುದೇ ಪರಿಷೆಯ ಆಶಯ.ಈ ಪುಸ್ತಕ ಪ್ರದರ್ಶನ ಹಾಗೂ ಹಂಚಿಕೆಯ ಪರಿಷೆಗೆ ಪ್ರವೇಶ ಉಚಿತ. ಒಬ್ಬರಿಗೆ ಒಂದೇ ಪುಸ್ತಕ ಎಂಬ ನಿಯಮ ಮಾತ್ರ ಕಡ್ಡಾಯ. ಆದ್ಯತೆಯ ಮೇರೆಗೆ ತಮ್ಮ ಆಯ್ಕೆಯನ್ನು ಬದಲಿಸಿಕೊಳ್ಳಬಹುದು ಎನ್ನುವುದು ಸಂಘಟಕರ ಮನವಿಯಾಗಿದೆ.ಪುಸ್ತಕ ಪರಿಷೆ ನಡೆಯುವ ಸ್ಥಳ: ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿ. ಬೆಳಿಗ್ಗೆ 9ರಿಂದ ರಾತ್ರಿ 9ರವರಗೆ. ಒಂದು ದಿನ ಮಾತ್ರ.

ಮಾಹಿತಿಗೆ: 99450 03479/ 99002 04748.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry